ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ರುಚಿಗಳ ಸ್ಯಾಂಡ್‌ವಿಚ್‌

Last Updated 25 ಮೇ 2019, 19:30 IST
ಅಕ್ಷರ ಗಾತ್ರ

ಇದು ಎರಡು ಭಿನ್ನ ರುಚಿಗಳ ಹೂರಣ ಹೊಂದಿರುವ ಸ್ಯಾಂಡ್‌ವಿಚ್‌. ಒಂದು ರುಚಿ ಪೊಲೀಸ್ ಅಧಿಕಾರಿಯ ಪತ್ತೇದಾರಿ ಕೆಲಸಕ್ಕೆ ಸಂಬಂಧಿಸಿದ್ದು. ಇನ್ನೊಂದು ಅಮ್ಮ–ಮಗಳು, ಆ ಮಗಳ ಮದುವೆಗೆ ಸಂಬಂಧಿಸಿದ್ದು. ಮೊದಲ ರುಚಿ ಬಾಯಿ ಚಪ್ಪರಿಸಬಹುದಾದ ಉಪ್ಪು–ಹುಳಿ–ಖಾರದಂತೆ. ಎರಡನೆಯದು ಬಾಯಲ್ಲಿಟ್ಟರೆ ಕರಗುವ ಮೆದು ಬೆಣ್ಣೆ.

‘ಡಾಟರ್‌ ಆಫ್‌ ‍ಪಾರ್ವತಮ್ಮ’ ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರದ್ದು ಪೊಲೀಸ್‌ ತನಿಖಾಧಿಕಾರಿಯ ಪಾತ್ರ. ಆಕೆಯ ಹೆಸರು ವೈದೇಹಿ. ಸುಮಲತಾ ಅವರು ಚಿತ್ರದಲ್ಲಿ ವೈದೇಹಿಯ ಅಮ್ಮ ಪಾರ್ವತಮ್ಮ. ಈ ಸಿನಿಮಾ ನೋಡುವ ಸಂದರ್ಭದಲ್ಲಿ, ಹರಿಪ್ರಿಯಾ ಅವರು ಹಿಂದಿನ ವರ್ಷ ಬಿಡುಗಡೆಯಾದ ‘ಸಂಹಾರ’ ಚಿತ್ರದಲ್ಲಿ ನಿಭಾಯಿಸಿದ್ದ ಪಾತ್ರವನ್ನು ಕಣ್ಣಮುಂದೆ ತಂದುಕೊಳ್ಳಬಹುದು.

‘ಸಂಹಾರ’ ಚಿತ್ರದಲ್ಲಿನ ಪಾತ್ರಕ್ಕೂ, ‘ಡಾಟರ್‌ ಆಫ್‌ ಪಾರ್ವತಮ್ಮ’ ಸಿನಿಮಾದ ಪಾತ್ರದ ಸ್ವಭಾವಕ್ಕೂ ಹೋಲಿಕೆ ಇಲ್ಲವಾದರೂ, ಹರಿಪ್ರಿಯಾ ಅವರು ತುಸು ‘ರಗೆಡ್’ ವ್ಯಕ್ತಿತ್ವದ ಪಾತ್ರಗಳನ್ನು ನಿಭಾಯಿಸುವ ಸೊಗಸನ್ನು ಗುರುತಿಸಲು ಅಡ್ಡಿಯಿಲ್ಲ.

‘ಡಾಟರ್‌ ಆಫ್‌ ಪಾರ್ವತಮ್ಮ’ ಶುರುವಾಗುವುದು ಬಹುಜನರ ಗಮನ ಸೆಳೆದ ವೈದ್ಯೆಯ ಸಾವಿನ ರಹಸ್ಯ ಭೇದಿಸುವ ಹೊಣೆಯನ್ನು ವೈದೇಹಿಗೆ ವಹಿಸುವ ಮೂಲಕ. ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಹೊರಡುವ ವೈದೇಹಿಗೆ ಎದುರಾಗುವುದು ವೈದ್ಯೆಯ ಸಾವಿನ ಬಗ್ಗೆ ಇರುವ ಎರಡು ಭಿನ್ನ ವರದಿಗಳು. ಒಂದು ವರದಿ, ವೈದ್ಯೆಯದ್ದು ಆತ್ಮಹತ್ಯೆ ಎಂದು ಹೇಳಿರುತ್ತದೆ. ಇನ್ನೊಂದು ವರದಿಯಲ್ಲಿ, ಅದು ಆತ್ಮಹತ್ಯೆಯಲ್ಲ; ಕೊಲೆ ಎಂದು ಬರೆದಿರುತ್ತದೆ.

ಸಾವಿನ ರಹಸ್ಯ ಭೇದಿಸುವ ದಾರಿಯಲ್ಲಿ ಒಂದಿಬ್ಬರು ಸಾಕ್ಷಿಗಳು ವೈದೇಹಿಗೆ ಸಿಕ್ಕರೂ, ಒಬ್ಬೊಬ್ಬರು ನೀಡುವ ಹೇಳಿಕೆಗಳು ಒಂದೊಂದು ರೀತಿಯಾಗಿರುತ್ತವೆ. ವೈದೇಹಿ ತನಗೆ ಒಪ್ಪಿಸಿದ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್‌.

ಪಾರ್ವತಮ್ಮ ಮತ್ತು ವೈದೇಹಿ ನಡುವಿನ ಸಂಬಂಧ ಈ ಸಿನಿಮಾದ ಇನ್ನೊಂದು ಮಗ್ಗುಲು. ವೈದೇಹಿಗೆ ಮದುವೆ ಆಗುವ ಮನಸ್ಸೇ ಇರುವುದಿಲ್ಲ. ಇದಕ್ಕೆ ಕಾರಣ, ಆಕೆಯ ಪ್ರೀತಿ ಹಿಂದೊಮ್ಮೆ ಭಗ್ನಗೊಂಡಿದ್ದು. ಪಾರ್ವತಮ್ಮಳಿಗೆ ಮಗಳ ಮದುವೆಯದ್ದೇ ಚಿಂತೆ, ಎಲ್ಲ ಅಮ್ಮಂದಿರಂತೆ. ವೈದೇಹಿ ಮತ್ತು ಪಾರ್ವತಮ್ಮ ನಡುವೆ ಹೆಚ್ಚಿನ ಭಾವುಕ ದೃಶ್ಯಗಳನ್ನು ನಿರ್ದೇಶಕ ಜೆ. ಶಂಕರ್ ಸೃಷ್ಟಿಸಿಲ್ಲವಾದರೂ, ಇಬ್ಬರೂ ಕಲಾವಿದೆಯರು ತಮ್ಮ ನಟನೆಯಿಂದಾಗಿ ವೀಕ್ಷಕರಿಗೆ ಜೊತೆಯಾಗುತ್ತಾರೆ.

ವೈದೇಹಿಗೆ ಒದಗುವ ಎರಡನೆಯ ಸಂಗಾತಿಯ ಚಿಕ್ಕ ಪಾತ್ರವನ್ನು ಪ್ರಭು ಮುಂಡ್ಕೂರ್ ನಿಭಾಯಿಸಿದ್ದಾರೆ. ಚಿತ್ರದ ಪ್ರಧಾನ ಎಳೆ ಸಾವಿನ ರಹಸ್ಯ ಹುಡುಕುವುದೇ ಆಗಿರುವುದರ ಪರಿಣಾಮ ಎಂಬಂತೆ, ಇಲ್ಲಿ ಪ್ರೀತಿ–ಪ್ರೇಮ, ಮರ ಸುತ್ತುವ ದೃಶ್ಯಗಳಿಗೆ ಪ್ರಾಧಾನ್ಯ ಇಲ್ಲ. ಅಂದಹಾಗೆ, ಡಿಟೆಕ್ಟಿವ್‌ ಮಗ್ಗುಲಿನಲ್ಲಿ ವೀಕ್ಷಕರನ್ನು ಕುರ್ಚಿಯ ಅಂಚಿಗೆ ತಂದು ಕೂರಿಸುವ ಅಂಶಗಳು ಹೆಚ್ಚಿಲ್ಲ. ಆದರೆ ವೀಕ್ಷಕರ ಊಹೆಗಳನ್ನು ಸುಳ್ಳು ಮಾಡುವ ತಿರುವುಗಳು ಖಂಡಿತ ಇವೆ. ಹಾಗೆಯೇ, ಹರಿಪ್ರಿಯಾ ಮತ್ತು ಸುಮಲತಾ ಅವರ ಅಭಿಮಾನಿಗಳಿಗೆ ಖುಷಿ ಕೊಡುವ ಅಂಶಗಳೂ ಒಂದಿಷ್ಟು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT