ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್ ಹೋಗಿ ಮೂವತ್ತು ವರ್ಷ: ‘ಅಲೆಕ್ಸಾ’ ದನಿಯಲ್ಲೂ ಅವರದೇ ಹೆಸರು!

Last Updated 29 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮೊನ್ನೆಯಷ್ಟೇ ಸಿನಿಮಾಮಿತ್ರರೊಬ್ಬರು, ‘ಅಲೆಕ್ಸಾ... ಕನ್ನಡದಲ್ಲಿ ನಿನ್ನ ನೆಚ್ಚಿನ ನಟ ಯಾರು’ ಎಂದು ಇಂಗ್ಲಿಷ್‌ನಲ್ಲಿ ಪ್ರಶ್ನೆ ಹಾಕಿದರು. ಅದಕ್ಕೆ ಅಮೆಜಾನ್ ಅಲೆಕ್ಸಾ, ‘ಶಂಕರ್‌ನಾಗ್‌’ ಎನ್ನಬೇಕೆ. ದಾವಣಗೆರೆ ಹತ್ತಿರದ ಆನಗೋಡಿನ ಬಳಿ ಶಂಕರ್‌ನಾಗ್‌ ಕಾರು ಅಪಘಾತದಲ್ಲಿ ತೀರಿಹೋಗಿ ಸೆಪ್ಟೆಂಬರ್‌ 30ಕ್ಕೆ ಸರಿಯಾಗಿ ಮೂವತ್ತು ವರ್ಷಗಳಾದವು. ಆದರೆ, ಇವತ್ತಿಗೂ ಆಟೊ ಮೇಲೆ ಈ ನಟನ ಚಿತ್ರ ರಾರಾಜಿಸುತ್ತಿದೆ.

ಶಂಕರ್ ಆ ಕಾಲಘಟ್ಟದಲ್ಲೇ ದೂರದೃಷ್ಟಿ ಇದ್ದ ನಟ–ನಿರ್ದೇಶಕ–ನಿರ್ಮಾಪಕ. ‘ಬಹುಶಃ ಮೂವತ್ತಾರರ ಹರೆಯದಲ್ಲೇ ತಾನು ಹೋಗಿಬಿಡುವೆ ಎನ್ನುವುದು ಅವನಿಗೆ ಗೊತ್ತಿತ್ತೋ ಏನೋ, ಅದಕ್ಕೇ ಏಕಕಾಲದಲ್ಲಿ ಮೂರು, ಮೂರು ಸಿನಿಮಾಗಳಲ್ಲಿ ಶಿಫ್ಟ್‌ ಲೆಕ್ಕದಲ್ಲಿ ನಟಿಸುತ್ತಿದ್ದ’ ಎಂದು ಅವರ ಅಣ್ಣ ಅನಂತನಾಗ್ ಹೇಳಿದ್ದು. ‘ಅವನು ಸದಾ ಕಾಲ ಹತ್ತಿಪ್ಪತ್ತು ವರ್ಷ ಮುಂದಕ್ಕೆ ಯೋಚಿಸುತ್ತಿದ್ದ’ ಎಂದು ನಟ–ಸ್ನೇಹಿತ ಶಂಕರ್ ಅವರನ್ನು ಸ್ಮರಿಸಿದ್ದರಲ್ಲೂ ಅರ್ಥವಿದೆ.

ಗಿರೀಶ ಕಾರ್ನಾಡರು ನಾಟಕವೊಂದರಲ್ಲಿ ನೋಡಿ, ತಮ್ಮದೇ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶವನ್ನಿತ್ತರು. ಆಗಿನ್ನೂ ಶಂಕರ್‌ ಇಪ್ಪತ್ನಾಲ್ಕರ ಯುವಕ. ರಜತ ಮಯೂರ ರಾಷ್ಟ್ರಪ್ರಶಸ್ತಿ ಗೆದ್ದುಕೊಟ್ಟ ಆ ಸಿನಿಮಾ, ಶಂಕರ್ ಅಷ್ಟು ಬೇಗ ನಿರ್ದೇಶಕರಾಗಿಯೂ ಜಿಗಿಯಲು ಪ್ರೇರಣೆಯಾಗಿರಬೇಕು.

ಹೊನ್ನಾವರದಲ್ಲಿ ಹುಟ್ಟಿ, ಬಾಂಬೆಯ ಸಂಸ್ಕೃತಿಯನ್ನು ಕಂಡು, ರಂಗಭೂಮಿಯ ಪ್ರಯೋಗಗಳಲ್ಲಿ ಕೈಯಾಡಿಸಿದವರು ಶಂಕರ್. ಮಾರ್ಷಲ್ ಆರ್ಟ್ಸ್‌ ಕಲಿಯದೆಯೇ ‘ಕರಾಟೆ ಕಿಂಗ್’ ಅನಿಸಿಕೊಂಡರು. ‘22 ಜೂನ್ 1897’ ಎಂಬ ಮರಾಠಿ ಸಿನಿಮಾಗೆ ಅವರೇ ಸಹ–ಕಥಾಲೇಖಕ ಆಗಿದ್ದರೆನ್ನುವುದು ಅವರ ವ್ಯಕ್ತಿತ್ವದ ಬಹುಮುಖೀತನಕ್ಕೆ ಉದಾಹರಣೆ. ನಟನಾಗಿ ಶಂಕರ್ ತಮ್ಮ ಮ್ಯಾನರಿಸಂ ಅನ್ನು ಮಾರಿದರು. ನಿರ್ದೇಶಕನಾಗಿ ಪ್ರಯೋಗಗಳನ್ನು ಮಾಡಿದರು. 27ರ ವಯಸ್ಸಿನಲ್ಲಿ ‘ಮಿಂಚಿನ ಓಟ’ದಂಥ ದರೋಡೆಕೋರರ ಸಿನಿಮಾ ನಿರ್ದೇಶಿಸಿ, ಏಳು ರಾಜ್ಯಪ್ರಶಸ್ತಿಗಳನ್ನು ಬಾಚಿಕೊಂಡರು. ಅದಾದಮೇಲೆ ‘ಜನ್ಮ ಜನ್ಮದ ಅನುಬಂಧ’, ‘ಗೀತಾ’ದಂಥ ಸಿನಿಮಾಗಳನ್ನು ನಿರ್ದೇಶಿಸಿದರು. ಇಂದಿಗೂ ಈ ಸಿನಿಮಾ ಹಾಡುಗಳು ಜನಪ್ರಿಯ. ಅದಕ್ಕೆ ಕಾರಣ ಆಗಲೇ ಇಳಯರಾಜಾ ಅವರನ್ನು ಕರೆತಂದು ಮಟ್ಟುಗಳನ್ನು ಹಾಕಿಸಿದ್ದು. ಶಂಕರ್‌ ನಿರ್ದೇಶನದ ಕಸುಬುದಾರಿಕೆಗೆ ರಾಜ್‌ಕುಮಾರ್‌ ಕೂಡ ಮನಸೋತವರೇ. ಅದಕ್ಕೇ ತಮ್ಮ ಇಮೇಜಿನ ಹಂಗು ತೊರೆದು, ‘ಒಂದು ಮುತ್ತಿನ ಕಥೆ’ಯಲ್ಲಿ ಅಭಿನಯಿಸಲು ಒಪ್ಪಿದ್ದು.

1980ರಲ್ಲಿ ಎಂಟು (ಅದರಲ್ಲಿ ಎರಡರ ನಿರ್ದೇಶನ ಅವರದ್ದೆ), 81ರಲ್ಲಿ ಎಂಟು, 83ರಲ್ಲಿ ಒಂಬತ್ತು, 84ರಲ್ಲಿ 14 (ಅದರಲ್ಲಿ ಒಂದರ ನಿರ್ದೇಶನ ಅವರದು), 87ರಲ್ಲಿ ಏಳು, 89ರಲ್ಲಿ ಎಂಟು ಸಿನಿಮಾಗಳಲ್ಲಿ ಶಂಕರ್‌ನಾಗ್ ಅಭಿನಯಿಸಿದರು. ಟ್ವೆಂಟಿ–20 ಕ್ರಿಕೆಟ್‌ನ ಈ ಕಾಲದ ವೇಗ ನೋಡಿದವರಿಗೆ ಶಂಕರ್ ಸಿನಿಮಾ ಆಟ ಅದಕ್ಕಿಂತ ಮಿಗಿಲೆನ್ನಿಸಲು ಇಷ್ಟು ಸಾಕು.

‘ಸೀತಾರಾಮು’, ‘ಆಟೊರಾಜ’, ‘ಸಾಂಗ್ಲಿಯಾನ’ ಹೀಗೆ ಶಂಕರ್ ಪಾತ್ರ–ಪೋಷಾಕುಗಳ ಸಹಿತ ನೆನಪಿಟ್ಟುಕೊಳ್ಳುವ ಆಟೊ ಚಾಲಕರು ಇರುವಂತೆಯೇ, ‘ಮಾಲ್ಗುಡಿ ಡೇಸ್‌’ನಂತಹ ಗಟ್ಟಿ ಧಾರಾವಾಹಿಯ ಅಭಿಮಾನಿಗಳೂ ಇದ್ದಾರೆ.

ಅಂದಹಾಗೆ, ಕೈಯಲ್ಲಿ ಹಣವೇ ಇಲ್ಲದಿದ್ದಾಗ ಇಂತಹುದೊಂದು ಧಾರಾವಾಹಿಯನ್ನು ಮಾಡಲು ಅವರು ಮುಂದಾಗಿದ್ದನ್ನು ನೆನೆದು ಅನಂತ್ ಈಗಲೂ ನಗುತ್ತಾರೆ. ಶಿಫ್ಟುಗಳಲ್ಲಿ ಕೆಲಸ ಮಾಡುತ್ತಾ, ದಿಢೀರನೆ ಮನೆಯ ಕೋಣೆಯ ಕದವಿಕ್ಕಿಕೊಂಡು ಕೋಳಿನಿದ್ದೆ ಮಾಡಿ ಎದ್ದುಹೋಗುತ್ತಿದ್ದ ತಮ್ಮನ ಸ್ಮರಣೆ ಅವರ ಕಣ್ಣಂಚಲ್ಲಿ ಹನಿಗಳನ್ನೂ ಮೂಡಿಸುತ್ತದೆ. ಶಂಕರ್ ಇನ್ನೂ ಹೀಗೆಲ್ಲ ಬದುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT