ಸೋಮವಾರ, ಜುಲೈ 26, 2021
22 °C
ಫಸ್ಟ್‌ಡ್ರೈವ್‌

ಸಂಚಾರಿ ವಿಜಯ್ ನೆನಪು: ಮಳೆಯೊಳಗಿನ ‘ಸಂಚಾರಿ’

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

{ಮರು ಓದಿಗೆ:  2018, ಜುಲೈ 18ರಂದು ಪ್ರಕಟವಾದ ಲೇಖನ}

ನಾನು ಆರನೇ ತರಗತಿಯಲ್ಲಿರುವಾಗ ಮೊದಲ ಬಾರಿಗೆ ಕಾರು ಹತ್ತಿದ್ದು. ಅದು ನಮ್ಮ ಪಕ್ಕದ ಮನೆಯವರ ಕಾರು. ಅವರು ಜೀನ್ಸ್ ಬಟ್ಟೆ ತರಲು ಕಾರಿನಲ್ಲಿ ಬಾಣಾವಾರಕ್ಕೆ ಹೊರಟಿದ್ದರು. ‘ಆ ಕಾರಲ್ಲಿ ಕೂರಿಸು’ ಎಂದು ಅಮ್ಮನನ್ನು ಪೀಡಿಸುತ್ತಿದ್ದೆ. ಆಗ ನಾನು, ಅಮ್ಮ ಮತ್ತು ನನ್ನ ತಮ್ಮ ಅದೇ ಕಾರಿನಲ್ಲಿ ಹೋದೆವು.

ಚಿಕ್ಕವನಿದ್ದಾಗಲೇ ನಮ್ಮೂರು ಪಂಚನಹಳ್ಳಿಯಲ್ಲಿ ವೆರೈಟಿ ವೆರೈಟಿ ಕಾರುಗಳನ್ನು ನೋಡಿದ್ದೆ. ಕಡೂರು ಶಾಸಕರಾಗಿದ್ದ ಪಿ.ಬಿ.ಓಂಕಾರಮೂರ್ತಿ ನಮ್ಮ ಪಂಚನಹಳ್ಳಿಯವರು. ಅವರ ಮನೆಯ ಎದುರು ನಿತ್ಯ ಐದಾರು ರೀತಿಯ ಕಾರುಗಳು ನಿಲ್ಲುತ್ತಿದ್ದವು. ಆ ಕಾರುಗಳನ್ನು ನೋಡುವುದೇ ಸಂಭ್ರಮ. ಜತೆಗೆ, ‘ಅಂಥ ಕಾರುಗಳಲ್ಲಿ ಓಡಾಡಬೇಕು’ ಎನ್ನುವ ಆಸೆ ಕೂಡ.

‘ಕಾರು ಅಂದ್ರೆ ಸಾಮಾನ್ಯನಾ, ಮಗಾ. ಏನಂದುಕೊಂಡಿದ್ದೀಯ. ಅದೆಲ್ಲ ದೊಡ್ಡವರಿಗೆ’ ಎನ್ನುತ್ತಿದ್ದರು ನನ್ನ ಅಪ್ಪ-ಅಮ್ಮ. ಆದರೂ ನನ್ನದು ಹಟ. ಆ ವೇಳೆಗಾಗಲೇ ನಮ್ಮ ಮನೆಯ ಬಳಿ ಒಬ್ಬರು ಅಂಬಾಸಿಡರ್ ಕಾರು ತಂದಿದ್ದರು. ಅಂದಿನಿಂದಲೇ ಕಾರಿನಲ್ಲಿ ಓಡಾಡಬೇಕು ಎನ್ನುವ ಆಸೆ ಚಿಗುರಿತು. ಕಾರಿನಷ್ಟೇ ಕೌತುಕ ಮತ್ತು ಆಸೆ ಆಟೊದಲ್ಲಿ ಕುಳಿತುಕೊಳ್ಳುವುದು.

ಅಂದಹಾಗೆ ನಾನು ಬಾಲ್ಯದಲ್ಲಿ ಆಟೊ ನೋಡಿದ್ದು ಚಿಕ್ಕಮಗಳೂರಿನಲ್ಲಿ. ಆಟೊದಲ್ಲಿ ಬಲಬದಿಯಲ್ಲಿಯೇ ಕುಳಿತುಕೊಳ್ಳಬೇಕು. ಅಲ್ಲಿ ಕುಳಿತರೆ ಕುತ್ತಿಗೆ ಹೊರಗೆ ಹಾಕಿ ಅಂಗಡಿಗಳ ಸಾಲು, ಪೇಟೆ ನೋಡಬಹುದು ಎನ್ನುವ ಆಸೆ!

ಸೈಕಲ್ ಡ್ರೈವ್ ಇಷ್ಟ
ನಾನು ಮೊದಲು ಡ್ರೈವ್ ಆರಂಭಿಸಿದ್ದು ಸೈಕಲ್‌ನಲ್ಲಿ! ಆಗ ತಿಪಟೂರಿನಲ್ಲಿ ಪಿಯುಸಿ ಓದುತ್ತಿದ್ದೆ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೈಕಲ್‌ನಲ್ಲಿ ಹೋಗುತ್ತಿದ್ದೆವು. ಆಗ ಸೈಕಲ್ ಖರೀದಿಸುವುದೇ ದೊಡ್ಡ ಸಾಧನೆ. ಅದರಲ್ಲಿಯೂ ಮಳೆಯಲ್ಲಿ ನೆನೆದುಕೊಂಡು ಸೈಕಲ್ ತುಳಿಯಬೇಕು ಅಂದರೆ ನನಗೆ ತುಂಬಾ ಆಸೆ. ನಾಲ್ಕೈದು ಜನ ಸ್ನೇಹಿತರು ಸೇರಿ ಸೈಕಲ್‌ನಲ್ಲಿ ಟೂರ್ ಹೊರಡುತ್ತಿದ್ದೆವು. ತಿಪಟೂರು ಬಿಟ್ಟರೆ ಹಾಸನದಲ್ಲಿಯೇ ನಿಲ್ಲಿಸುತ್ತಿದ್ದು. ನಾವು ಹೋಗುತ್ತಿದ್ದದ್ದು ಯಾವುದೇ ರೇಸ್ ಸೈಕಲ್‌ನಲ್ಲಿ ಅಲ್ಲ. ಸಾಮಾನ್ಯ ಬೈಸಿಕಲ್‌ನಲ್ಲಿ. ಈಗಲೂ ಮಳೆಯ ನಡುವೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಲು ಇಷ್ಟಪಡುತ್ತೇನೆ. ಮಳೆಯ ನಡುವೆ ಡ್ರೈವಿಂಗ್ ಮಾಡುವುದು ನನಗೆ ತೀರಾ ಅಚ್ಚುಮೆಚ್ಚು. 

ಸಕಲೇಶಪುರದ ನಾರ್ವೆ ಬಳಿ ಸ್ನೇಹಿತ ಸಂಪತ್ ಕುಮಾರ್‌ ಮನೆ ಇತ್ತು. ನಾವು ಅಲ್ಲಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದೆವು. ಎರಡು ವರ್ಷ ಸೈಕಲ್ ತುಳಿದೆವು. ಇದು ಬೇಸರ ಎನಿಸಿತು. ನಂತರ ಬೈಕ್ ಕ್ರೇಜ್‌ ಆರಂಭ. ಆಗ ತಿಪಟೂರಿನ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾವು ಒಂದು ತಂಡವಾಗಿ ಬೇರೆ ಬೇರೆ ಕಡೆಗೆ ಬೈಕ್‌ನಲ್ಲಿ ಪ್ರವಾಸ ಹೋಗುತ್ತಿದ್ದೆವ. ನಾಲ್ಕೈದು ಗೆಳೆಯರು ಬೈಕ್ ಖರೀದಿಸಿದರು. ಮುಳ್ಳಯ್ಯನಗಿರಿ, ಕಲ್ಲತ್ತಗಿರಿ ಕಡೆ ಪ್ರವಾಸ ಹೋಗುತ್ತಿದ್ದೆವು.

ಎಂಜಿನಿಯರಿಂಗ್ ಮುಗಿಯಿತು. ಅದು ಬೆಂಗಳೂರಿಗೆ ಬಂದ ಹೊಸತು. ಒಮ್ಮೆ ಮಡಿಕೇರಿಯ ಗೋಣಿಕೊಪ್ಪಕ್ಕೆ ಸ್ನೇಹಿತರ ಜತೆ ಪ್ರವಾಸ ಹೋಗಿದ್ದೆ. ಅದೂ  ಮಳೆಯ ನಡುವೆ ಪಯಣ. ಆಗಲೇ ನಾನೂ ಕಾರು ಖರೀದಿಸಬೇಕು ಎನ್ನುವ ಆಸೆ ಮತ್ತಷ್ಟು ಪ್ರಬಲವಾಯಿತು. ಆದರೆ ಆರ್ಥಿಕ ಶಕ್ತಿ, ಬೇಕಲ್ಲ.

ಈ ನಡುವೆ ರಂಗಭೂಮಿಯಿಂದ ಸಿನಿಮಾಗಳತ್ತ ಮುಖ ಮಾಡಿದೆ. ನನ್ನ ತಮ್ಮ ಆಗ ರಿಡ್ಜ್ ಕಾರು ಕೊಡಿಸಿದ. ಅದೇ ನನ್ನ ಮೊದಲ ಕಾರು. ಶಿರಸಿ, ಆಗುಂಬೆ ಮತ್ತು ಚಿಕ್ಕಮಗಳೂರಿಗೆ ಮಳೆಗಾಲದಲ್ಲಿ ಮತ್ತೆ ಪ್ರವಾಸ ಮುಂದುವರಿಯಿತು. ವಾಹ್! ಆ ಮಳೆಯ ನಡುವಿನ ಪಯಣ ಆಹ್ಲಾದ ಮತ್ತು ಮುದ ನೀಡಿತು.

ತಿಪಟೂರಿನಲ್ಲಿ ಡ್ರೈವಿಂಗ್ ಕಲಿತಿದ್ದು
ನಾನು ಡ್ರೈವಿಂಗ್ ಕಲಿತ್ತಿದ್ದು ಬೆಂಗಳೂರಿಗೆ ಬಂದಾಗ. ಅದಕ್ಕೂ ಮೊದಲು ತಿಪಟೂರಿನ ಕಾಲೇಜು ದಿನಗಳಲ್ಲಿ ಗೆಳೆಯ ಸಚಿನ್ ಬಳಿ ಮಾರುತಿ 800 ಕಾರು ಇತ್ತು. ಅದರಲ್ಲಿ ಡ್ರೈವಿಂಗ್ ಕಲಿಯಲು ಹರಸಾಹಸಪಟ್ಟೆ. ಅಂತೂ ಇಂತೂ ಅಲ್ಪ ಪ್ರಮಾಣದಲ್ಲಿ ಕಲಿತೆ. ಮೊದಲ ಬಾರಿ ಡ್ರೈವಿಂಗ್‌ಗೆ ಕುಳಿತಾಗ ಪುಳಕ ಮತ್ತು ಖುಷಿ. ಬಾಲ್ಯದಲ್ಲಿ ಬೇರೆಯವರು ಕಾರು ಓಡಿಸುತ್ತಿದ್ದರೆ ನಾವು ಕುಳಿತು ಮಜಾ ಅನುಭವಿಸುತ್ತಿದ್ದೆವು. ಈಗ ನಾನೇ ಕಾರು ಡ್ರೈವ್ ಮಾಡುತ್ತಿದ್ದೇನೆ ಅಂದರೆ ಖುಷಿ ಆಗುವುದಿಲ್ಲವೇ?

ಸ್ನೇಹಿತ ಪ್ರಶಾಂತ್ ಶೆಟ್ಟಿ ಹೀಗೆ ಹಲವರ ಜತೆ ಅವರ ಬೆನ್ಜ್‌ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದೇನೆ. ಆ ಅನುಭವಗಳು ನನ್ನಲ್ಲಿ ಆ ಕಾರಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಿದೆ. ಭವಿಷ್ಯದಲ್ಲಿ ಕಾರು ಖರೀದಿಸಿದರೆ ಬೆನ್ಜ್ ನನ್ನ ಮೊದಲ ಆಯ್ಕೆ.

ಸಿನಿಮಾ ಮತ್ತು ಕಾರು
ಕಾರು ಪ್ರಯಾಣ ಕ್ರೇಜ್ ಕೊಟ್ಟಂತೆಯೇ ಒಂದಿಷ್ಟು ಮರೆಯದ ಅನುಭವಗಳನ್ನೂ ದಕ್ಕಿಸಿದೆ. ದಯಾಳ್ ಪದ್ಮನಾಭ್ ಅವರ ನಿರ್ದೇಶನದ ಶರಣ್ ನಾಯಕತ್ವದ ‘ಸತ್ಯಹರಿಶ್ಚಂದ್ರ’ ಸಿನಿಮಾ ಚಿತ್ರೀಕರಣ ತಿರುವಣ್ಣಾಮಲೈನಲ್ಲಿ ನಡೆಯುತ್ತಿತ್ತು. ಆ ಸಮಯದಲ್ಲಿ ನಮ್ಮ ‘ಆರನೇ ಮೈಲಿ’ ಚಿತ್ರದ ಪೂಜೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಇತ್ತು. ನಿರ್ಮಾಪಕರು ಬರಬೇಕು ಎಂದು ಪ್ರೀತಿಯಿಂದ ಆಗ್ರಹಿಸಿದರು.

ರಾಜನಹಳ್ಳಿಗೆ ಬಂದು ಮತ್ತೆ ತಿರುವಣ್ಣಾಮಲೈಗೆ ನಿರ್ಮಾಪಕ ಎ.ಮಂಜು ಅವರ ಕಾರಿನಲ್ಲಿ ಹೊರಟೆವು. ದಾರಿಯಲ್ಲಿ ಅಪಘಾತವಾಯಿತು. ಕಾರು ನುಜ್ಜುಗುಜ್ಜು. ನಾವು ಉಳಿದಿದ್ದೇ ಹೆಚ್ಚು. ಇಂತಹ ಹಲವು ಸಹಿ ಕಹಿಯ ಅನುಭವಗಳು ಕಾರಿನ ಪ್ರಯಾಣದಲ್ಲಿ ನನಗೆ ಆಗಿದೆ.

ಧೋ ಎಂದು ಸುರಿಯುವ ಮಳೆಯ ನಡುವೆ, ಪಟ ಪಟ ಎಂದು ಸಿಡಿಯುವ ನೀರಲ್ಲಿ ಕಾರು ಓಡಿಸಿದರೆ ನನಗೆ ಹೆಚ್ಚು ಸಂತೋಷ ಸಿಗುತ್ತದೆ. ಅಂತಹ ಪಯಣಗಳನ್ನು ನಾನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.