ಡಬ್ಬಿಂಗ್: ಎರಡು ಮುಖಗಳು

7
ಡಬ್ಬಿಂಗ್ ಸಿನಿಮಾ ಕಮಾಂಡೋ ಗೆಲುವು ಅಪಾಯದ ಕರೆಗಂಟೆಯೇ?

ಡಬ್ಬಿಂಗ್: ಎರಡು ಮುಖಗಳು

Published:
Updated:
Deccan Herald

ಕಳೆದ ವರ್ಷ ‘ಸತ್ಯದೇವ ಐಪಿಎಸ್‌’ ಎಂಬ ಡಬ್ಬಿಂಗ್ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ವಾಣಿಜ್ಯ ಮಂಡಳಿಯಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಡಬ್ಬಿಂಗ್ ವಿರುದ್ಧ ಪ್ರತಿಭಟನೆ ಕಾನೂನು ಬಾಹಿರ ಎಂದು ಸಿಸಿಐ ದಂಡ ವಿಧಿಸಿದೆ. ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷದ ನಂತರ ‘ಕಮಾಂಡೋ’ ಎಂಬ ಇನ್ನೊಂದು ಡಬ್ ಸಿನಿಮಾ ಬಿಡುಗಡೆಯಾಗಿ ಎರಡನೇ ವಾರ ಪ್ರದರ್ಶನ ಕಾಣುತ್ತಿದೆ. ಕಾನೂನಿನ ಚಾಟಿಯ ಭಯದಿಂದ ಡಬ್ಬಿಂಗ್ ವಿರೋಧ ಪ್ರತಿಭಟನೆ ಸದ್ದಡಗಿದೆ. ಡಬ್ಬಿಂಗ್‌ನ ಸಾಧಕ ಬಾಧಕಗಳೇನು? ಅದರ ಹಿಂದಿನ ವ್ಯಾಪಾರಿ ಲೆಕ್ಖಾಚಾರಗಳೇನು? ಸಾಮಾಜಿಕ, ಸಾಂಸ್ಕೃತಿಕ ಪರಿಣಾಮಗಳೇನು? ಈ ಎಲ್ಲ ಪ್ರಶ್ನೆಗಳನ್ನಿಟ್ಟುಕೊಂಡು ಡಬ್ಬಿಂಗ್‌ ಅನ್ನೇ ತನ್ನ ಕಂಪನಿಯ ಮುಖ್ಯ ಉದ್ದೇಶವಾಗಿಟ್ಟುಕೊಂಡಿರುವ ‘ಹರಿವು ಕ್ರಿಯೇಷನ್ಸ್‌’ನ ರತೀಶ್ ಮತ್ತು ಡಬ್ಬಿಂಗ್ ವಿರೋಧಿ ಬಿ. ಸುರೇಶ್ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿತು. ಈ ಮಾತುಕತೆಯಲ್ಲಿ ಹೊಳೆದ ಹೊಳಹುಗಳು ಇಲ್ಲಿವೆ.

======

‘ಸತ್ಯ ಐಪಿಎಸ್’ ಎಂಬ ಡಬ್ಬಿಂಗ್ ಚಿತ್ರ 2017ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ವಾಣಿಜ್ಯಮಂಡಳಿ ವಿರೋಧ ವ್ಯಕ್ತಪಡಿಸಿದ್ದವು. ಪ್ರತಿಭಟನೆಗಳು ನಡೆದಿದ್ದವು. ನಟ ಜಗ್ಗೇಶ್ ಅವರಂತೂ ‘ಡಬ್ಬಿಂಗ್ ಚಿತ್ರ ಬಿಡುಗಡೆ ಮಾಡಿದ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚಿ’ ಎಂದೂ ಹೇಳಿದ್ದರು.

ಅದಾಗಿ ಒಂದೂವರೆ ವರ್ಷಗಳ ನಂತರ ಕಳೆದ ಆಗಸ್ಟ್‌ನಲ್ಲಿ ತಮಿಳಿನ ‘ವಿವೇಗಮ್’ ಚಿತ್ರ ಕನ್ನಡಕ್ಕೆ ಡಬ್‌ ಆಗಿ ‘ಕಮಾಂಡೋ’ ಆಗಿ ಬಿಡುಗಡೆಗೊಂಡಿದೆ. ಎರಡನೇ ವಾರವೂ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯ ದಿನ ಬೆಂಗಳೂರಿನ ಭೂಮಿಕಾ ಚಿತ್ರಮಂದಿರದ ಎದುರು ಪೊಲೀಸರೇ ಹೆಚ್ಚಿದ್ದರು. ಪ್ರೇಕ್ಷಕರು ಕಡಿಮೆ ಇದ್ದರು. ಆದರೆ ಡಬ್ಬಿಂಗ್ ವಿರೋಧಿಗಳ ಪ್ರತಿಭಟನೆ ಇರಲಿಲ್ಲ. ಯಾವ ಅಡೆತಡೆಯೂ ಇಲ್ಲದೆಯೇ ರಾಜ್ಯದ ವಿವಿಧ ಸ್ಥಳಗಳಲ್ಲಿ ‘ಕಮಾಂಡೋ’ ಬಿಡುಗೆಯಾಯಿತು. ಮೂರೇ ದಿನಕ್ಕೆ ‘ಪ್ರೇಕ್ಷಕರ ಒತ್ತಾಯದ ಮೇರೆಗೆ’ ಎಂದು ಹೇಳಿ ತನ್ನ ಪ್ರದರ್ಶನವನ್ನೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿತು.

ಈ ನಡುವೆ ‘ಸತ್ಯದೇವ್‌ ಐಪಿಎಸ್‌’ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಸಿಸಿಐ (ಭಾರತೀಯ ಸ್ಪರ್ಧಾತ್ಮಕ ಆಯೋಗ) ನಟ ಜಗ್ಗೇಶ್, ಸಾರಾ ಗೋವಿಂದು ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವಾರ್ಷಿಕ ಆದಾಯದ ಶೇ.10 ರಷ್ಟು ದಂಡ ವಿಧಿಸಿದೆ. ಇದರ ಬೆನ್ನಲ್ಲಿಯೇ ‘ಕಮಾಂಡೋ’ ಚಿತ್ರದ ನಿರಾತಂಕ ಬಿಡುಗಡೆ ಮತ್ತು ಪ್ರದರ್ಶನ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳ ಮೆರವಣಿಗೆಗೆ ರಹದಾರಿ ತೆರೆಯಲಿದೆಯೇ ಎಂಬ ಅನುಮಾನವನ್ನು ಹುಟ್ಟಿಸಿದೆ. ‘ಹರಿವು ಕ್ರಿಯೇಷನ್ಸ್‌ ಪ್ರೈವೇಟ್ ಲಿಮಿಟೆಡ್’ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದೆ.

‘ಸತ್ಯದೇವ ಐಪಿಎಸ್’ ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆ ಆಗದಿದ್ದರೂ ಕರ್ನಾಟಕದ ಬೇರೆ ಭಾಗಗಳಲ್ಲಿ ಬಿಡುಗಡೆಗೊಂಡು ಪ್ರದರ್ಶಿತವಾಗಿತ್ತು. ಆದರೆ ಅದಕ್ಕೆ ಪ್ರೇಕ್ಷಕರೇ ತೀವ್ರ ನಿರಾಸಕ್ತಿ ತೋರಿಸಿದ ಪರಿಣಾಮ ಹೀನಾಯ ಸೋಲು ಕಂಡಿತ್ತು. ಹಾಗಿದ್ದೂ ಮತ್ತೆ ಡಬ್ಬಿಂಗ್ ಸಿನಿಮಾಗಳ ಮೇಲ ಹಣ ಹೂಡುತ್ತಿರುವುದಕ್ಕೆ ಕಾರಣ ಏನು? 

ಈ ಪ್ರಶ್ನೆಯನ್ನು ಹರಿವು ಕ್ರಿಯೇಷನ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರತೀಶ್‌ ರತ್ನಾಕರ್ ಅವರ ಮುಂದಿಟ್ಟರೆ ‘ಸತ್ಯದೇವ್ ಐಪಿಎಸ್’ ಚಿತ್ರ ನಷ್ಟ ಅನುಭವಿಸಿದೆ ಎಂಬ ಮಾತನ್ನೇ ಒಪ್ಪುವುದಿಲ್ಲ. ‘ಆ ಚಿತ್ರವೇನೂ ನಷ್ಟ ಅನುಭವಿಸಿಲ್ಲ. ಬೆಂಗಳೂರು ಹೊರತುಪಡಿಸಿಯೂ 60ರಿಂದ 65 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಒಳ್ಳೆಯ ಪ್ರಚಾರವನ್ನೂ ಪಡೆದುಕೊಂಡಿತು’ ಎನ್ನುತ್ತಾರೆ ಅವರು.

ಕುತೂಹಲಕಾರಿ ಸಂಗತಿ ಏನೆಂದರೆ, ಡಬ್ಬಿಂಗ್ ಅನ್ನೇ ತನ್ನ ಮುಖ್ಯ ಉದ್ದೇಶವಾಗಿಸಿಕೊಂಡಿರುವ ‘ಹರಿವು ಕ್ರಿಯೇಷನ್ಸ್‌’ ಎನ್ನುವ ಕಂಪನಿ ಜನ್ಮತಳೆಯಲು ಪೂರಕ ವಾತಾವರಣ ರೂಪುಗೊಂಡಿದ್ದೇ ಸತ್ಯದೇವ ಐಪಿಎಸ್ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ. ‘ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದ ನಾವು ಒಂಬತ್ತು ಜನ ಸೇರಿ ಈ ಕಂಪನಿ ಕಟ್ಟಿದ್ದೇವೆ. ನಮಗೆಲ್ಲರಿಗೂ ಜಗತ್ತಿನ ಎಲ್ಲ ಒಳ್ಳೆಯ ಮನರಂಜನೆಗಳೂ ಕನ್ನಡದಲ್ಲಿ ದೊರೆಯುವಂತಾಗಬೇಕು ಎಂಬ ಹಂಬಲ ಇತ್ತು. ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ನಡೆದ ಹಲವು ಘಟನೆಗಳು ನಮ್ಮನ್ನು ಒಂದು ಕಡೆಗೆ ಸೇರಿಸಿತು. ನಾವೆಲ್ಲರೂ ಸೇರಿ ಡಬ್ಬಿಂಗ್ ಅಗತ್ಯದ ಕುರಿತು ಸರ್ವೆ ನಡೆಸಿ ಸ್ಟಾರ್ ಸ್ಟೋರ್ಟ್ಸ್‌ ವಾಹಿನಿಗೆ ನೀಡಿದೆವು.  ಸ್ಟಾರ್‌ ಸ್ಪೋರ್ಟ್ಸ್‌ ಈಗ ಕನ್ನಡದಲ್ಲಿಯೂ ಬರುತ್ತಿದೆ. ಹಾಗೆಯೇ ಐಪಿಎಲ್‌ ಕೂಡ ಕನ್ನಡದಲ್ಲಿ ಬಂದು ಜನಪ್ರಿಯತೆ ಗಳಿಸಿದೆ. ಇದರ ಮುಂದಿನ ಹಂತವಾಗಿ ಒಂದು ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಿದೆವು. ಆಗ ಆಯ್ದುಕೊಂಡಿದ್ದೇ ಅಜಿತ್ ಅವರ ವಿವೇಗಂ ಚಿತ್ರವನ್ನು. ‘ವಿವೇಗಂ’ ಒಳ್ಳೆಯ ಗುಣಮಟ್ಟದ ಸಿನಿಮಾ. ಅದನ್ನು ಕನ್ನಡಕ್ಕೆ ತರಬೇಕು ಎಂದು ನಿರ್ಧರಿಸಿದೆವು. ಅದನ್ನು ‘ಕಮಾಂಡೋ’ ಎಂಬ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ್ದೇವೆ’ ಎನ್ನುತ್ತಾರೆ ರತೀಶ್‌. 

ನಿರ್ಮಾಪಕರಿಗೆ ನಷ್ಟ ಮಾಡದ ಕಮಾಂಡೋ:

ಮೊದಲ ಬಾರಿಗೆ ಡಬ್ಬಿಂಗ್ ಚಿತ್ರವೊಂದರ ಆಡಿಯೊ ಬಿಡುಗಡೆಯನ್ನು ಮಾಡಿದ್ದೂ ಕಮಾಂಡೋ ಚಿತ್ರವೇ. ಅವರೇ ಕೊಡುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 80ರಿಂದ 85 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಚಿತ್ರಮಂದಿರಗಳ ಮಾಲೀಕರು ಉತ್ಸಾಹ ತೋರಿಸಿ ಕೇಳಿ ಪಡೆದುಕೊಂಡು ತಮ್ಮ ಚಿತ್ರಮಂದಿರಗಳಲ್ಲಿ ಡಬ್ಬಿಂಗ್ ಚಿತ್ರಗಳನ್ನು ಹಾಕಿದ್ದಾರಂತೆ. ‘ಎರಡನೇ ವಾರ ಕಳೆದು ಮೂರನೇ ವಾರಕ್ಕೆ ಕಾಲಿಡುತ್ತಿರುವುದೂ ಈ ಚಿತ್ರದ ಯಶಸ್ಸಿನ ಸೂಚನೆ’ ಎನ್ನುವ ಅವರು ಡಬ್ ಮಾಡಲು ತಗುಲಿದ ವೆಚ್ಚ ಮತ್ತು ಗಳಿಕೆಯ ಕುರಿತು ಮಾತ್ರ ಅಪ್ಪಿತಪ್ಪಿಯೂ ಬಾಯಿಬಿಡುವುದಿಲ್ಲ. ‘ಬಜೆಟ್ ಅನ್ನು ಬಹಿರಂಗವಾಗಿ ಹೇಳುವುದು ತಮ್ಮ ಕಂಪನಿಯ ನಿಯಮಾವಳಿಗೆ ವಿರುದ್ಧ. ಹಾಗಾಗಿ ಏನೂ ಹೇಳಲಾರೆ. ಗಳಿಕೆಯ ಕುರಿತೂ ಮಾತನಾಡಲಾರೆ. ಆದರೆ ಮೂರನೇ ವಾರಕ್ಕೆ ಹೋಗ್ತಿದೆ ಅಂದ್ರೆ ನಿರ್ಮಾಪಕ ಲಾಭ ಗಳಿಸಿದ್ದಾನೆ ಎಂದೇ ಅಲ್ಲವೇ? ಉಳಿದದ್ದನ್ನು ನೀವೇ ಗೆಸ್ ಮಾಡಿ’ ಎನ್ನುತ್ತಾರೆ ಅವರು.

ಇನ್ನಷ್ಟು ಡಬ್ಬಿಂಗ್ ಕಂಟೆಂಟ್ ತರ್ತೇವೆ:

ಹರಿವು ಕ್ರಿಯೇಷನ್ಸ್‌ ಮುಂದಕ್ಕೆ ತೆಲುಗು, ತಮಿಳು, ಹಾಲಿವುಡ್, ಬಾಲಿವುಡ್ ಚಿತ್ರಗಳನ್ನೂ ಕನ್ನಡಕ್ಕೆ ತರುವ ಯೋಜನೆಯನ್ನು ಹಾಕಿಕೊಂಡಿದೆ. ‘ಸಿನಿಮಾ ಮತ್ತು ಕಿರುತೆರೆಗಳಲ್ಲಿ ಡಬ್ಬಿಂಗ್ ಕಂಟೆಂಟ್ ತರುವುದು ನಮ್ಮ ಕಂಪನಿಯ ಮೊದಲ ಆದ್ಯತೆ’ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಹಾಗೆಯೇ ದ್ವಿತೀಯ ಆದ್ಯತೆಯಾಗಿ ‘ಕನ್ನಡದ್ದೇ ಸೊಗಡುಳ್ಳ, ಸ್ವಂತ ಕಥೆಯನ್ನ ಸಿನಿಮಾ ಮಾಡಬೇಕು. ಕಿರುತೆರೆಯಲ್ಲಿಯೂ ಸ್ವಂತ ಕಂಟೆಂಟ್ ಕಾರ್ಯಕ್ರಮಗಳನ್ನು ನೀಡಬೇಕು’ ಎಂಬ ಉದ್ದೇಶವೂ ಕಂಪನಿಗೆ ಇದೆಯಂತೆ. ‘ಸ್ವಂತ  ಕಂಟೆಂಟ್‌ ನಿರ್ಮಾಣ ಮಾಡಬೇಕು ಎನ್ನುವುದೇ ಡಬ್ಬಿಂಗ್ ವಿರೋಧಿಗಳ ಕಳಕಳಿಯೂ ಅಲ್ಲವೇ? ನೀವ್ಯಾಕೆ ಸ್ವಂತ ಕಂಟೆಂಟ್ ನಿರ್ಮಾಣವನ್ನೇ ನಿಮ್ಮ ಕಂಪನಿಯ ಪ್ರಥಮ ಆದ್ಯತೆ ಮಾಡಿಕೊಳ್ಳಬಾರದು’ ಎಂದು ಪ್ರಶ್ನಿಸಿದರೆ, ‘ನಾನು ಆದ್ಯತೆ ಎಂದು ಹೇಳಿದ್ದು ಸಮಯಕ್ಕೆ ಸಂಬಂಧಿಸಿದ್ದು. ಯಾವುದನ್ನು ಮೊದಲು ಮಾಡಬೇಕು, ಯಾವುದನ್ನು ನಂತರ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದ್ದು. ನಮಗೆ ಡಬ್ಬಿಂಗ್ ಮತ್ತು ಸ್ವಂತ ಕಂಟೆಂಟ್ ಎರಡೂ ಒಂದೇ. ಸ್ವಂತ ಕಂಟೆಂಟ್ ಮಾಡಲೂ ಕೊಂಚ ಸಿದ್ಧತೆ ಬೇಕಲ್ಲವೇ?’ ಎಂದು ಮರುಪ್ರಶ್ನೆ ಹಾಕುತ್ತಾರೆ.

ತತ್ತರಿಸಿದೆ ಡಬ್ಬಿಂಗ್ ವಿರೋಧ ಚಳವಳಿ:

ಡಬ್ಬಿಂಗ್ ಪರ ಇರುವವರು ‘ಕಮಾಂಡೊ’ ಚಿತ್ರವನ್ನು ತಮ್ಮ ಜಯದ ಸಂಕೇತವಾಗಿ ಬಿಂಬಿಸುತ್ತಿದ್ದಾರೆ. ಇತ್ತ ಡಬ್ಬಿಂಗ್ ವಿರೋಧಿ ಪಾಳಯ, ಸಿಸಿಐ (ಭಾರತೀಯ ಸ್ಪರ್ಧಾತ್ಮಕ ಆಯೋಗ) ಬೀಸಿದ ದಂಡದ ಪ್ರಹಾರದಿಂದ ತತ್ತರಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌. ಎ. ಚಿನ್ನೇಗೌಡ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ ‘ನಾನೇನೂ ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಆ ಬಗ್ಗೆ ಮಾತಾಡುವುದು ತಪ್ಪಾಗುತ್ತದೆ’ ಎಂದೇ ಹೇಳುತ್ತಾರೆ. ಆದರೆ ‘ನೇರವಾಗಿ ಏನೂ ಮಾಡಲು ಸಾಧ್ಯವಿಲ್ಲ. ಇದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ಮಾತ್ರ ಹೇಳಬಲ್ಲೆ. ಈ ವಿಷಯವನ್ನು ಜನರಿಗೆ ಬಿಟ್ಟು ಬಿಡುವುದು ಒಳ್ಳೆಯದು’ ಎಂದು ತಮ್ಮ ಅಸಹಾಯಕತೆಯ ನಡುವೆಯೂ ಡಬ್ಬಿಂಗ್ ಒಳವಿರೋಧವನ್ನು ವ್ಯಕ್ತಪಡಿಸುತ್ತಾರೆ.  

‘ಸಿಸಿಐ ವಾಣಿಜ್ಯ ಮಂಡಳಿಗೆ ಹಾಕಿರುವ ದಂಡವನ್ನು ಕಟ್ಟಲು ಅರವತ್ತು ದಿನ ಸಮಯ ಕೊಟ್ಟಿದೆ. ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ, ವಾಣಿಜ್ಯ ಮಂಡಳಿ ಸಭೆ ಕರೆದು ಮುಂದೆ ಏನು ಮಾಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ’ ಎಂದೂ ಅವರು ಹೇಳಿದರು. ವಾಟಾಳ್‌ ನಾಗರಾಜ್‌ ಅವರಂತೂ ದೂರವಾಣಿ ಕರೆಯನ್ನೂ ಸ್ವೀಕರಿಸಲಿಲ್ಲ.

ಡಬ್ಬಿಂಗ್ ಎನ್ನುವುದು ಕಲೆಯಲ್ಲ; ವಿಕೃತಿ:

‘ಡಬ್ಬಿಂಗ್ ಎನ್ನುವುದು ಕಲೆ ಅಲ್ಲ, ಅದೊಂದು ವಿಕೃತಿ. ಯಂತ್ರ ನಿರ್ಮಿತ. ಹೀಗಾಗಿ ಡಬ್ಬಿಂಗ್ ಅನ್ನು ನಾನು ಸದಾಕಾಲವೂ ಇಷ್ಟಪಡುವುದಿಲ್ಲ ಮತ್ತು ವಿರೋಧಿಸ್ತೇನೆ’ ಎಂದು ಖಡಾಖಂಡಿತವಾಗಿ ಹೇಳುವ ನಿರ್ದೇಶಕ ಬಿ. ಸುರೇಶ್‌, ‘ಹೋರಾಟದ ಮೂಲಕ ಈ ಯುದ್ಧವನ್ನು ಗೆಲ್ಲುತ್ತೇವೆ ಎನ್ನುವ ಪರಿಸ್ಥಿತಿ ಈಗ ಇಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ. ತಮ್ಮ ಮಾತಿಗೆ ಪೂರಕವಾಗಿ ಅವರು ಸದ್ಯದ ಕನ್ನಡಿಗರ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾರೆ.

‘ತುಂಬ ಚಾಣಾಕ್ಷತನದಿಂದ ಕನ್ನಡ ಸಮಾಜವನ್ನು ಒಡೆಯಲಾಗಿದೆ’ ಎನ್ನುವುದು ಅವರ ಅಭಿಪ್ರಾಯ. 

‘ಒಂದು ಕಾಲದಲ್ಲಿ ಇಡಿಯಾಗಿ ಒಂದೇ ಧ್ವನಿಯಾಗಿದ್ದ ಕನ್ನಡಿಗರು, ರಾಜ್‌ಕುಮಾರ್‌ ಅವರ ಅಗಲಿಕೆಯ ನಂತರ ಹಲವು ಬಣಗಳಾಗಿ ಒಡೆದುಹೋಗಿದ್ದಾರೆ. ಡಬ್ಬಿಂಗ್ ಬರಲಿ ಎನ್ನುವವರೂ ಕನ್ನಡದ ಹೋರಾಟ ಎಂದು, ಡಬ್ಬಿಂಗ್ ಬೇಡ ಅನ್ನುವುದೂ ಕನ್ನಡದ ಹೋರಾಟ ಎಂದು ಹೇಳಿಕೊಂಡೇ ಮಾಡುತ್ತಾರೆ. ಯಾವಾಗ ಒಂದು ಸಮಾಜವನ್ನು ವ್ಯಾಪಾರದ ಕೇಂದ್ರಗಳು ಹೀಗೆ ಒಡೆದುಬಿಡುತ್ತವೆಯೋ ಆಗ ಬಂಡವಾಳಶಾಹಿಗಳಿಗೆ ಆ ಸಮಾಜದಲ್ಲಿದ್ದ ತತ್ವವನ್ನು ನಾಶಮಾಡಿಬಿಡುವುದು ಅತ್ಯಂತ ಸುಲಭವಾಗುತ್ತದೆ. ಹೀಗಾಗಿ ನಾನು ಈ ವಿಷಯನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸಿದರೆ ನನ್ನ ಅಣ್ಣನೋ, ತಮ್ಮನೋ, ಗೆಳೆಯನೋ ನನ್ನ ವಿರುದ್ಧ ನಿಂತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಅಂತಿಮವಾಗಿ ದಾಯಾದಿ ಜಗಳವಾಗಿಬಿಡುತ್ತದೆ. ದಾಯಾದಿ ಜಗಳದಿಂದ ಯಾರಿಗೂ ಉಪಯೋಗವಿಲ್ಲ’ ಎಂಬುದು ಅವರ ವಿವರಣೆ. 

ಇದರ ಜತೆಗೆ ಈಗ ಡಬ್ಬಿಂಗ್ ವಿರೋಧಿ ಹೋರಾಟಗಾರರಿಗೆ ದಂಡ ವಿಧಿಸಿರುವ ಸಿಸಿಐ ಕುರಿತಾಗಿಯೂ ಅವರಿಗೆ ಆಕ್ಷೇಪಗಳಿವೆ. ‘ಸಿಸಿಐ ಎನ್ನುವುದು ಬಂಡವಾಳಿಗರೇ ಸ್ಥಾಪಿಸಿಕೊಂಡ ಸಂಸ್ಥೆ. ಅದು ವ್ಯಾಪಾರಿಗಳನ್ನು ಸಂರಕ್ಷಿಸಲಿಕ್ಕಾಗಿಯೇ ಸ್ಥಾಪಿತವಾಗಿದೆ. ಅಂಥದ್ದೊಂದು ಸರ್ಕಾರಿ ಸಂಸ್ಥೆಯ ಮೂಲಕ ಕಾನೂನನ್ನು ಸೃಷ್ಟಿಸಿಕೊಂಡು ಡಬ್ಬಿಂಗ್ ತಡೆಯುವುದು ತಪ್ಪು, ಅನ್ಯಾಯ ಎನ್ನುವ ಅಭಿಪ್ರಾಯ ರೂಪಿಸಿರುವಾಗ ನಾವು ಡಬ್ಬಿಂಗ್ ತಡೆಯುವ ಹೋರಾಟವನ್ನು ಮಾಡಬಾರದು’ ಎಂಬುದು ಅವರ ಅಭಿಪ್ರಾಯ. ಆದರೆ ಅವಕಾಶ ಸಿಕ್ಕಾಗೆಲ್ಲ ತಮ್ಮ ಡಬ್ಬಿಂಗ್ ವಿರೋಧಿ ನಿಲುವನ್ನು ವ್ಯಕ್ತಪಡಿಸಬೇಕು ಎಂದೂ ಅವರು ಹೇಳುತ್ತಾರೆ. 

ಸಮಾಜದ ತಿರಸ್ಕಾರವೊಂದೇ ಮದ್ದು:

ಡಬ್ಬಿಂಗ್ ಒಂದು ಸಮಸ್ಯೆ ಎಂತಾದರೆ ಅದನ್ನು ತಡೆಗಟ್ಟುವುದು ಹೇಗೆ? ಈ ಪ್ರಶ್ನೆಯನ್ನು ಮುಂದಿಟ್ಟರೆ ಬಿ.ಸುರೇಶ್‌ ಸಮಾಜದತ್ತ ಬೆರಳು ತೋರಿಸುತ್ತಾರೆ. ‘ಒಟ್ಟೂ ಸಮಾಜವೇ ಇದಕ್ಕೆ ಪ್ರತಿಕ್ರಿಯಿಸಬೇಕು’ ಎನ್ನುವುದು ಅವರ ನಿಲುವು. ‘ಕಲೆ ಎನ್ನುವುದು ಸಮಾಜದ ಕೂಸು. ಸಮಾಜ ನಮಗೆ ನೀಡಿದ ಸತ್ಯಗಳನ್ನು, ಕಥೆಗಳನ್ನೇ ನಾವು ಸಿನಿಮಾ, ನಾಟಕ, ಸೀರಿಯಲ್ ಮಾಡುತ್ತಿರುತ್ತೇವೆ. ಇಂಥ ಸಂದರ್ಭದಲ್ಲಿ 1965ರಿಂದ ಯಾವ ವಿಕೃತಿಯನ್ನು ತಡೆಹಿಡಿಯಲಾಗಿತ್ತೋ, ರಾಜಕುಮಾರ್ ತೀರಿಕೊಂಡ ಹತ್ತು ವರ್ಷವೂ ಆಗಿಲ್ಲ, ಆಗಲೇ ಈ ವಿಕೃತಿಯನ್ನು ತಂದಿದ್ದಾರೆ ಎಂದರೆ ಅವರು ಎಷ್ಟು ಶಕ್ತಿಯುತರಾಗಿದ್ದಾರೆ ಎನ್ನುವುದು ತಿಳಿಯುತ್ತದೆ’ ಎನ್ನುವ ಅವರು ‘ನಮ್ಮಲ್ಲಿ ರಾಜ್‌ಕುಮಾರ್ ಅವರ ಹಾಗೆ ಒಂದೇ ಧ್ವನಿಯನ್ನು ಸೃಷ್ಟಿಸಬಲ್ಲ ನಾಯಕರು ಇಲ್ಲದಿರುವುದೇ ಡಬ್ಬಿಂಗ್ ವಿರೋಧಿ ಹೋರಾಟ ಶಕ್ತಿಹೀನವಾಗಲು ಕಾರಣ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಯಾವುದೋ ಸಣ್ಣ ಊರಿನಲ್ಲಿರುವ ಚಿತ್ರಮಂದಿರದ ಮಾಲೀಕರಿಗೆ ಒಂದು ಹೊಸ ಸಿನಿಮಾ ಖರೀದಿಸುವಾಗ ತಗುಲುವ ಖರ್ಚಿಗೂ ಒಂದು ಡಬ್ಬಿಂಗ್ ಸಿನಿಮಾ ತೆಗೆದುಕೊಳ್ಳುವಾಗ ತಗುಲುವ ಖರ್ಚಿಗೂ ದೊಡ್ಡ ಅಂತರವಿದೆ. ತುಂಬ ಕಡಿಮೆ ಹಣಕ್ಕೆ ಅವನಿಗೆ ಡಬ್ಬಿಂಗ್ ಸಿನಿಮಾ ಸಿಕ್ಕಿಬಿಡುತ್ತದೆ. ಹಾಗಾಗಿ ಅವನು ಅದನ್ನೇ ಹಾಕುತ್ತಾನೆ. ಈಗ ಹೋರಾಟ ಮಾಡಬೇಕಾಗಿರುವವರು ಊರಿನ ಜನ. ಆ ಊರಿನ ಜನ ನಾವು ಡಬ್ಬಿಂಗ್‌ ಸಿನಿಮಾ ನೋಡುವುದಿಲ್ಲ ಎಂದು ನಿರ್ಧರಿಸಬೇಕು. ಎರಡು ಮೂರು ಸಿನಿಮಾ ಹಾಗೆ ನೋಡದೇ ಇದ್ದರೆ ಆಮೇಲೆ ಚಿತ್ರಮಂದಿರದ ಮಾಲೀಕ ಹೊಸ ಕನ್ನಡದ ಸಿನಿಮಾಗಳನ್ನೇ ಪ್ರದರ್ಶಿಸಲು ತೊಡಗುತ್ತಾನೆ’ ಎಂದು ಜನರ ತಿರಸ್ಕಾರದ ದಾರಿಯನ್ನು ಸೂಚಿಸುತ್ತಾರೆ.

ಕಿರುತೆರೆಗೆ ವ್ಯಾಪಿಸಿದರೆ ಇನ್ನೂ ಅಪಾಯ!:

ಇದೇ ಸಮಯದಲ್ಲಿ ‘ಡಬ್ಬಿಂಗ್ ಸಿನಿಮಾಗಳನ್ನು ಜನರು ತಿರಸ್ಕರಿಸುವುದರ ಮೂಲಕ ಚಿತ್ರಮಂದಿರಗಳಲ್ಲಿ ತಡೆಯಲು ಸಾಧ್ಯವಿದೆ. ಆದರೆ ಕಿರುತೆರೆಯಲ್ಲಿ ಒಮ್ಮೆ ಒಳಹೊಕ್ಕಿತು ಅಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂಬ ಎಚ್ಚರಿಕೆಯನ್ನೂ ಸುರೇಶ್‌ ನೀಡುತ್ತಾರೆ.

‘ಈಗ ಕಿರುತೆರೆಯಲ್ಲಿ ಸುಮಾರು ಎಪ್ಪತ್ತೈದು ಧಾರಾವಾಹಿಗಳು ಬರುತ್ತಿವೆ. ಅದರಲ್ಲಿ ಸುಮಾರು ಎಪ್ಪತ್ತು ರೀಮೇಕ್ ಧಾರಾವಾಹಿಗಳು. ಅವೆಲ್ಲವೂ ಡಬ್ಬಿಂಗ್ ಆಗಲು ಶುರುವಾಗುತ್ತದೆ. ಆಗ ಇಡೀ ಮಾರುಕಟ್ಟೆಯ ವ್ಯಾಪಾರದ ಕ್ರಮಗಳು, ಸನ್ನಿವೇಶ ಎಲ್ಲವೂ ಬದಲಾಗಿಬಿಡುತ್ತದೆ’ ಕಿರುತೆರೆ ಮಾರುಕಟ್ಟೆಯ ಕಡೆಗೆ ಗಮನ ಸೆಳೆಯುವ ಅವರು ತಮ್ಮ ಮಾತಿಗೆ ಒಂದು ನಿದರ್ಶನವನ್ನೂ ನೀಡುತ್ತಾರೆ. 

 ‘ಮಾ ಟೀವಿ’ ಎನ್ನುವ ಡಬ್ಬಿಂಗ್ ಕಂಟೆಂಟ್ ವಾಹಿನಿಯನ್ನು ಆಂಧ್ರದಲ್ಲಿ ಜನರು ನೋಡುವುದನ್ನು ನಿಲ್ಲಿಸಿದ್ದಾರೆ. ಅದರೆ ವ್ಯಾಪಾರದ ನಂಬರ್ಸ್‌ನಲ್ಲಿ ಡಬ್ಬಿಂಗ್ ಆಗಿರುವ ಧಾರಾವಾಹಿಗೂ ನಂಬರ್‌ ಸಿಕ್ಕಿರುತ್ತದೆ. ಜನಪ್ರಿಯ ಧಾರಾವಾಹಿಯೊಂದಕ್ಕೆ ಹತ್ತು ನಂಬರ್ ಸಿಕ್ಕಿದ್ದರೆ ಈ ಡಬ್ಬಿಂಗ್ ಧಾರಾವಾಹಿಗೆ ಎರಡು ನಂಬರ್ ಸಿಕ್ಕಿರುತ್ತದೆ. ಅವರಿಗೆ ಬಂಡವಾಳ ತೆಗೆದುಕೊಳ್ಳುವುದಕ್ಕೆ ಎರಡು ನಂಬರ್ ಸಾಕು. ಡಬ್ಬಿಂಗ್ ಮಾಡಿ ನಷ್ಟ ಆಗುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅಷ್ಟು ಕಡಿಮೆ ಖರ್ಚು ಇರುತ್ತದೆ. ಹೀಗಿರುವಾಗ ವ್ಯಾಪಾರಿಗಳು ಡಬ್ಬಿಂಗ್‌ ಅನ್ನೇ ಮಾಡುತ್ತಾರೆ. ಇಡೀ ಕಿರುತೆರೆ ಡಬ್ಬಿಂಗ್ ಕಂಟೆಂಟ್‌ನಿಂದ ತುಂಬುತ್ತದೆ. ಇದರ ಸಾಮಾಜಿಕ, ಸಾಂಸ್ಕೃತಿಕ ಕೆಟ್ಟ ಪರಿಣಾಮವನ್ನು ಸಹಿಸಿಕೊಳ್ಳುವ ಅನಿವಾರ್ಯ ನಮಗೆ ಇದೆ’ ಎನ್ನುವ ಸುರೇಶ್ ಮಾತುಗಳಲ್ಲಿ ಕನ್ನಡ ಕಿರುತೆರೆಯ ನಾಳೆಗಳು ಕಾಣಿಸುತ್ತವೆ. 

ಬರಹ ಇಷ್ಟವಾಯಿತೆ?

 • 34

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !