ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ದುನಿಯಾ ವಿಜಯ್‌ಗೆ ಮಾತೃವಿಯೋಗ

Last Updated 8 ಜುಲೈ 2021, 11:42 IST
ಅಕ್ಷರ ಗಾತ್ರ

ಬೆಂಗಳೂರು: ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ (76) ಗುರುವಾರ ನಿಧನರಾಗಿದ್ದಾರೆ.

ಈ ಕುರಿತು ಸ್ವತಃ ವಿಜಯ್‌ ಅವರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, ‘ಅಮ್ಮ ಮತ್ತೆ ಹುಟ್ಟಿ ಬಾ’ ಎಂದು ಉಲ್ಲೇಖಿಸಿ, ಅಮ್ಮನ ಜೊತೆಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಮೇ ತಿಂಗಳಲ್ಲಿ ದುನಿಯಾ ವಿಜಯ್‌ ಅವರ ತಂದೆ ಹಾಗೂ ತಾಯಿ ಇಬ್ಬರಿಗೂ ಕೋವಿಡ್‌ ತಗುಲಿತ್ತು. ಅವರಿಗೆ ಮನೆಯಲ್ಲಿಯೇ ವಿಜಯ್‌ ಚಿಕಿತ್ಸೆಯನ್ನು ನೀಡಿದ್ದರು. ಕೆಲ ದಿನಗಳಲ್ಲಿ ಇಬ್ಬರೂ ಗುಖಮುಖರಾಗಿದ್ದರು. ಆದರೆ ನಾರಾಯಣಮ್ಮ ಅವರಿಗೆ ಜೂನ್‌ನಲ್ಲಿ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿತ್ತು. ‘ಅವರಿಗೆ ಬ್ರೈನ್‌ಸ್ಟ್ರೋಕ್‌ ಆಗಿ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿ, ಚಲನವಲನಗಳು ಇರಲಿಲ್ಲ. ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಿನೇ ದಿನೇ ಅವರ ಆರೋಗ್ಯ ಹದಗೆಡುತ್ತಿದೆ’ ಎಂದು ಕೆಲ ದಿನಗಳ ಹಿಂದಷ್ಟೇ ವಿಜಯ್‌ ಹೇಳಿದ್ದರು.

ಅಪ್ಪ–ಅಮ್ಮನನ್ನು ಮಗುವಿನಂತೆ ಆರೈಕೆ ಮಾಡಿದ್ದ ವಿಜಯ್‌: ಹೆತ್ತವರಿಗೆ ಕೋವಿಡ್‌ ತಗುಲಿದ್ದ ಸಂದರ್ಭದಲ್ಲಿ ವಿಜಯ್‌ ಮನೆಯಲ್ಲಿಯೇ ಇಬ್ಬರನ್ನೂ ಆರೈಕೆ ಮಾಡಿದ್ದರು. ಈ ಕುರಿತು ಮೇ 25ರಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೊವೊಂದನ್ನೂ ಅವರು ಅಪ್‌ಲೋಡ್‌ ಮಾಡಿದ್ದರು.

‘ಒಂದು ದಿನ ನನ್ನ ಜನ್ಮದಾತರಿಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದೆ ಎಂದಾಗ ಒಂದು ಕ್ಷಣ ನಲುಗಿದೆ. ಮತ್ತೆ ಮರುಕ್ಷಣ ಕಾರ್ಯಶೀಲನಾದೆ. ಬಿಯು ನಂಬರ್ ಬರುವವರೆಗೂ ನಮ್ಮ ತಂದೆ ತಾಯಿಗೆ ಬೆಡ್ ಸಿಗಲ್ಲ ಎಂಬ ವಿಷಯ ನನಗೆ ತಿಳಿಯಿತು. ನನ್ನ ತಂದೆಗೆ 80 ವರ್ಷ ವಯಸ್ಸು, ನನ್ನ ತಾಯಿಗೆ 76 ವರ್ಷ. ಈಗಾಗಲೇ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಯೋಚಿಸಿಕೊಂಡು ಕೋರುವ ಸಮಯ ಇದಲ್ಲ ಎಂದು ತಿಳಿದ ನಾನು ನನ್ನ ಆತ್ಮೀಯ ವೈದ್ಯ ವಿದ್ಯಾನಂದ ಅವರನ್ನು ಸಂಪರ್ಕಿಸಿದೆ. ಆಗ ಅವರು ಬೆಡ್‌ಗೆ ಕಾಯದೆ ಮನೆಯಲ್ಲೇ ಚಿಕಿತ್ಸೆ ಆರಂಭಿಸಲು ಹೇಳಿದರು. ಕೆಲ ದಿನಗಳ ಚಿಕಿತ್ಸೆ ಬಳಿಕವೂ ನಮ್ಮ ತಂದೆಯ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸಲು ಪ್ರಾರಂಭಿಸಿತು. ಯಾವ ಮಟ್ಟಿಗೆ ಎಂದರೆ ನನ್ನ ಆತ್ಮೀಯರು ಫೋನ್ ಮಾಡಿದಾಗ ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗುತ್ತಾರೋ ಏನೋ ಎಂಬ ಅನುಮಾನ ಕಾಡುತ್ತಿದೆ ಎಂದು ಸ್ವತಃ ನಾನೇ ಹೇಳಿದ್ದುಂಟು. ಇದರ ಮಧ್ಯೆ ನಾನು ಭರವಸೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ. ಮೊದಲು ನನ್ನ ತಾಯಿ ಚೇತರಿಸಿಕೊಂಡು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾದರು.’

‘ನಮಗೆ ಯಾರಿಗೂ ಸಿಗದ ಯೋಗ ನಿನಗೆ ಸಿಕ್ಕಿದೆ. ನಿನ್ನನ್ನು ಪ್ರೀತಿಸುವವರು ಇರುವವರೆಗೂ, ಅವರ ಆಶೀರ್ವಾದ, ಆರೈಕೆ ನಿನ್ನನ್ನು ಕಾಯುತ್ತದೆ’ ಎಂದು ನನ್ನ ಅಮ್ಮ ಹೇಳಿದ್ದರು. ನಿಜವಾಗಲೂ ನಮ್ಮ ತಾಯಿ ಹೇಳಿದಂತೆ ಆಯಿತು. ನಮ್ಮ ತಂದೆ ಚೇತರಿಸಿಕೊಂಡರು. ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದಿಷ್ಟೆ. ಕೊರೊನಾ ಬಂತು ಎಂದು ಧೃತಿಗೆಡಬೇಡಿ, ತಂದೆ-ತಾಯಿಯರನ್ನು ಕೈಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ, ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹಂಚಿಕೊಂಡಿದ್ದೇನೆ’ ಎಂದು ವಿಜಯ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT