ಚಿತ್ರ: ಎಲ್ಲಿದ್ದೆ ಇಲ್ಲಿ ತನಕ

ನಿರ್ಮಾಣ: ಲೋಕೇಶ್ ಪ್ರೊಡಕ್ಷನ್

ನಿರ್ದೇಶನ: ತೇಜಸ್ವಿ

ತಾರಾಗಣ: ಸೃಜನ್ ಲೋಕೇಶ್, ಹರಿಪ್ರಿಯಾ, ಯಶಸ್ ಸೂರ್ಯ, ಗಿರಿ, ರಾಧಿಕಾ ರಾವ್, ತಾರಾ, ಅವಿನಾಶ್, ಗಿರಿಜಾ ಲೋಕೇಶ್

ಅಪ್ಪ ಆಗರ್ಭ ಶ್ರೀಮಂತ (ಅವಿನಾಶ್). ಮಗ ಭಾರತದಲ್ಲಿದ್ದರೆ ಹಾಳಾಗುತ್ತಾನೆಂಬುದು ಅವರ ಆತಂಕ. ಅದಕ್ಕಾಗಿ ಬಾಲ್ಯದಲ್ಲಿಯೇ ಸೂರ್ಯ (ಸೃಜನ್ ಲೋಕೇಶ್)ನನ್ನು ವಿದೇಶಕ್ಕೆ ಕರೆದೊಯ್ಯುತ್ತಾರೆ. ಸೂರ್ಯನಿಗೆ ಭಾರತವೆಂದರೆ ಅಚ್ಚುಮೆಚ್ಚು. ಇಪ್ಪತ್ತು ವರ್ಷದ ಬಳಿಕ ಇಲ್ಲಿಗೆ ಬರುವ ಆತನ ಬದುಕಿನಲ್ಲಿ ನಂದಿನಿಯ(ಹರಿಪ್ರಿಯಾ) ಪ್ರವೇಶವಾದಾಗ ಥಟ್ಟನೆ ಪ್ರೀತಿ ಕವಲೊಡೆಯುತ್ತದೆ.

ಬದುಕು ಮತ್ತು ಪ್ರೀತಿಯ ನಡುವಿನ ಭಾವುಕ ಚಿತ್ರಣವನ್ನು ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದಲ್ಲಿ ಹದವಾಗಿ ಕಟ್ಟಿದ್ದಾರೆ ನಿರ್ದೇಶಕ ತೇಜಸ್ವಿ. ಪ್ರೀತಿಯ ನೆಪದಲ್ಲಿ ಅನಾವರಣಗೊಳ್ಳುವ ಬದುಕಿನ ಸಂಕಟಗಳೇ ಚಿತ್ರದ ಹೂರಣ. ತೆಳುವಾದ ಎಳೆಗೆ ಬಿಡಿ ಬಿಡಿಯಾದ ಕಥನಗಳನ್ನು ಪೋಣಿಸಿ ಚಂದದ ನಗೆಯ ಹಾರ ಕಟ್ಟುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕಲಾವಿದರ ಆಯ್ಕೆಯಲ್ಲಿ ಮತ್ತು ಅವರನ್ನು ಚಿತ್ರದ ಅಗತ್ಯಕ್ಕೆ ತಕ್ಕಂತೆ ದುಡಿಸಿಕೊಳ್ಳುವಲ್ಲಿಯೂ ಸಫಲರಾಗಿದ್ದಾರೆ.

ಒಂದು ಮಗ್ಗಲಲ್ಲಿ ಪೋಷಕರ ಒತ್ತಡದಿಂದ ಬದುಕಿನ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಮಕ್ಕಳ ಮುಖವಿದೆ. ಮತ್ತೊಂದೆಡೆ ಬದುಕಿನ ಬದ್ಧತೆ ಮತ್ತು ಶುದ್ಧ ಪ್ರೀತಿಯ ಮನಸ್ಸಿನ ಚಿತ್ರಣ ಬೆಸೆದುಕೊಂಡಿದೆ. ಹೆಚ್ಚು ಆಪ್ತವಾಗುವುದು ಈ ಮಗ್ಗಲಿನ ಕಥೆ. ಈ ಎರಡರ ಹದವಾದ ಬೆಸುಗೆಯಿಂದ ಕಥೆ ಹೊಸದೊಂದು ಹಾದಿಯಲ್ಲಿ ಸಾಗುತ್ತದೆ.

ಸೃಜಾ ಅವರ ಮಾತುಗಾರಿಕೆಯನ್ನೇ ನೆಚ್ಚಿಕೊಂಡ ಸಿನಿಮಾ ಇದು.ಅದರಾಚೆಗೆ ಕೊಂಚಮಟ್ಟಿಗೆ ಗಮನಸೆಳೆಯುವುದು ಅಪ್ಪ, ಅಮ್ಮನ ವಾತ್ಸವ್ಯದಿಂದ ಹುಟ್ಟಿಕೊಂಡ ಕಥನ. ಹಾಗೆಂದು ಈ ಸಿನಿಮಾ ಹೊಸ ಸಂಗತಿಗಳನ್ನೇನೂ ಹೇಳುವುದಿಲ್ಲ. ನಾಯಕನ ಸುತ್ತಲೇ ಕಥೆ ಸಾಗುತ್ತಿದೆ ಎಂದು ಪ್ರೇಕ್ಷಕರ ಮನಸ್ಸಿಗೆ ಅನಿಸುತ್ತಿರುವಾಗಲೇ ಗಿರಿ, ಸಾಧುಕೋಕಿಲ, ತಬಲನಾಣಿ ನಗುವಿನ ಕಚಗುಳಿ ಮೂಲಕ ಅದನ್ನು ಬೇರೆಯದೇ ದಿಕ್ಕಿಗೆ ಕರೆದೊಯ್ಯುತ್ತಾರೆ.

ನಿರುದ್ಯೋಗಿ ಗೆಳೆಯನ ಸವಾಲು ಸ್ವೀಕರಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ ಸೂರ್ಯ. ನಂದಿನಿ ಕೆಲಸ ಮಾಡುತ್ತಿರುವುದು ಅಲ್ಲಿಯೇ. ಸುರೇಶ್ ಎಂದು ಹೆಸರು ಬದಲಾಯಿಸಿಕೊಂಡು ಸುಳ್ಳು ಪೋಣಿಸುತ್ತಲೇ ಅವಳ ಪ್ರೀತಿ ಸಂಪಾದಿಸುತ್ತಾನೆ. ಕೊನೆಗೆ, ಇಬ್ಬರೂ ಒಪ್ಪಿಕೊಂಡು ಸಪ್ತಪದಿ ತುಳಿಯಲು ಅಣಿಯಾಗುತ್ತಾರೆ. ಮದುವೆ ಮಂಟಪದಲ್ಲಿ ಸೂರ್ಯ ಹೆಣೆದ ಸುಳ್ಳಿನ ಸರಮಾಲೆ ಕಳಚಿ ಬೀಳುತ್ತದೆ. ಕೊನೆಗೆ, ನಂದಿನಿ ಆತನಿಗೆ ಸಿಗುತ್ತಾಳೆಯೇ ಎನ್ನುವುದೇ ಚಿತ್ರದ ಸಸ್ಪೆನ್ಸ್. ಆದರೆ, ಸಿನಿಮಾಕ್ಕೊಂದು ಅಂತ್ಯ ಕಾಣಿಸಬೇಕೆಂಬ ಉದ್ದೇಶದಿಂದ ಸೃಷ್ಟಿಸಿದಂತಿರುವ ಕ್ಲೈಮ್ಯಾಕ್ಸ್ ತೀರಾ ಸಪ್ಪೆಯಾಗಿದೆ.

ಚಿತ್ರದ ಹಲವು ದೃಶ್ಯಗಳ ಶೂಟಿಂಗ್ ನಡೆದಿರುವುದು ಮಲೇಷ್ಯಾ ಮತ್ತು ಕಾಶ್ಮೀರದಲ್ಲಿ. ಅಲ್ಲಿನ ಸುಂದರ ತಾಣಗಳನ್ನು ಸಿನಿಮಾ ವೀಕ್ಷಣೆಯ ಜೊತೆಗೆ ಬೋನಸ್ ಆಗಿ ನೀಡಿದ್ದಾರೆ ಛಾಯಾಗ್ರಾಹಕ ಎಚ್.ಸಿ. ವೇಣು. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಒಂದು ಹಾಡು ಕೇಳಲು ಹಿತಕರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.