ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಹಮಾನ್‌ ಚಿತ್ರಕ್ಕೆ ಇಬ್ಬಗೆ ಇಂಧನ

ಎ.ಆರ್.ರೆಹಮಾನ್ 99 ಸಾಂಗ್ಸ್‌ ಎಹಾನ್ ಭಟ್‌
Last Updated 29 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಸಂಗೀತ ಜಗತ್ತಿನ ಮೇರು ತಾರೆ ಎ.ಆರ್.ರೆಹಮಾನ್‌ ಸಿನಿಮಾ ನಿರ್ಮಾಪಕರಾಗ ಹೊರಟಿರುವುದು ಹೊಸ ವಿಷಯವೇನಲ್ಲ. ತಮ್ಮ ಸಿನಿಮಾಕ್ಕೆ ಅವರು ಎರಡು ಬಗೆಯ ಇಂಧನವನ್ನು ಪೂರೈಸುತ್ತಿದ್ದಾರೆ. ಮೊದಲನೆಯದು ಐದಾರು ವರ್ಷಗಳಿಂದ ತಪಸ್ಸಿನಂತೆ ಕೀಬೋರ್ಡ್‌ ಮುಂದೆ ಕುಳಿತು ಪೋಣಿಸಿದ ಹಾಡುಗಳು ಮತ್ತು ಹೊಸ ಹೀರೊ, ಹೀರೊಯಿನ್‌!

ಸಿನಿಮಾದ ಶೀರ್ಷಿಕೆ ’99 ಸಾಂಗ್ಸ್‌‘.ಸಂಗೀತವೇ ಈ ಸಿನಿಮಾದ ತಿರುಳು ಮತ್ತು ಶಕ್ತಿ. ಸಂಗೀತದ ಇಂಧನ ತುಂಬಲು ವಿಶ್ವವಿಖ್ಯಾತ ದಿಗ್ಗಜರ ದಂಡೇ ರೆಹಮಾನ್‌ ಜತೆ ಬೀಡುಬಿಟ್ಟಿದೆ.

‘99 ಸಾಂಗ್ಸ್‌’ ಹಿಂದಿ, ತಮಿಳು, ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ತೆರೆಕಾಣಲಿದೆ. ನಾಲ್ಕೈದು ವರ್ಷಗಳಿಂದ ನನ್ನ ಸಿನಿಮಾದ ಸೌಂಡ್‌ ಟ್ರ್ಯಾಕ್‌ ಹೇಗಿರಬೇಕು, ಹೀಗಿರಬೇಕು ಎಂಬ ಹೋಮ್‌ವರ್ಕ್‌ ಮಾಡುತ್ತಲೇ ಇದ್ದೇನೆ‘ ಎಂದು ರೆಹಮಾನ್‌ ಅವರೇ ಹೇಳಿಕೊಂಡಿದ್ದಾರೆ.

ಹಾಡುಗಳನ್ನು ಬರೆದವರು ನವನೀತ್‌ ವಿರ್ಕ್‌. ರೆಹಮಾನ್‌ ಮತ್ತು ವಿರ್ಕ್‌ ‘ವೈಸರಾಯ್‌ ಹೌಸ್‌‘ಗಾಗಿ ಈ ಹಿಂದೆ ಒಟ್ಟಾಗಿದ್ದ ಜೋಡಿ. ಇದರಲ್ಲಿನ ಅದ್ಭುತ ಸಂಗೀತಕ್ಕಾಗಿ ರೆಹಮಾನ್‌ಗೆ ವರ್ಲ್ಡ್‌ ಸೌಂಡ್‌ಟ್ರ್ಯಾಕ್‌ ಅವಾರ್ಡ್‌ ಕೂಡಾ ಲಭಿಸಿತ್ತು. ಹಾಗಾಗಿ ತಮ್ಮ ಹಳೆಯ ದೋಸ್ತ್‌ಗೆ ತಮ್ಮದೇ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ.

ಸಂಗೀತದ ಮತ್ತಿನಲ್ಲಿ ತೇಲಾಡುವ ಯುವ ಜೋಡಿಯಾಗಿ ಎಹಾನ್‌ ಮತ್ತು ಎಡಿಲ್ಸಿ ವರ್ಗೀಸ್‌ ನಟಿಸಲಿದ್ದಾರೆ. ವಿಶೇಷವಾಗಿ, ತಮ್ಮ ಪಾತ್ರದ ಮೇಲೆ ರೆಹಮಾನ್ ಮತ್ತು ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು, ಸಂಗೀತಗಾರನ‍ಪಾತ್ರ ಮಾಡಲಿರುವ ಹೀರೊ ಎಹಾನ್‌ಗೆ ಸ್ಪಷ್ಟವಾಗಿ ತಿಳಿದಿದೆ. ‘ನಟನಾಗಲು ಕಾಯುತ್ತಿರುವ ಯುವಕನೊಬ್ಬನಿಗೆ ಇದಕ್ಕಿಂತ ಉತ್ತಮ ಎಂಟ್ರಿ ಸಿಗಲು ಸಾಧ್ಯವೇ ಇಲ್ಲ. ಕನಸಲ್ಲೂ ಎಣಿಸದ ಅವಕಾಶವೊಂದು ನನಗೆ ಸಿಕ್ಕಿದೆ’ ಎಂದು ಆನಂದತುಂದಿಲರಾಗಿ ಎಹಾನ್‌ ಟ್ವೀಟ್‌ ಮಾಡಿದ್ದಾರೆ.

ಗಾಯಕನೊಬ್ಬ ಯಶಸ್ವಿ ಸಂಗೀತ ಸಂಯೋಜಕನಾಗುವ ಅದಮ್ಯ ಕನಸನ್ನು ಕಾಣುವುದು ಮತ್ತು ಗುರಿ ಮುಟ್ಟುವಲ್ಲಿನ ಏಳು ಬೀಳುಗಳನ್ನು ರೊಮ್ಯಾಂಟಿಕ್‌ ಆಗಿ ಕಟ್ಟಿಕೊಟ್ಟಿದ್ದಾರೆ ರೆಹಮಾನ್. ಅವನ ಈ ಪಯಣ ಅವನ ಆಂತರ್ಯದೆಡೆಗಿನ ಇಣುಕುನೋಟವೇ ಆಗಿರುತ್ತದೆ ಎಂಬುದು ಥ್ರಿಲ್ಲಿಂಗ್‌ ಸಂಗಿತ.ಎಹಾನ್‌– ಎಡಿಲ್ಸಿ ಅವರ ರೊಮ್ಯಾಂಟಿಕ್‌ ಜೋಡಿ ಪಯಣ ಇಡೀ ಚಿತ್ರವನ್ನು ಆರ್ದ್ರವಾಗಿಸಿದೆ ಎನ್ನಲಾಗಿದೆ.

ಜಾಯ್ನ್‌ ಮಲಿಕ್‌, ಕೇಬಾ ಜೆರೆಮಯ, ರ‍್ಯಾಂಡಿ ಕಿರ್ಬರ್‌ ಅವರೂ 99 ಸಾಂಗ್ಸ್‌ ತಂಡದಲ್ಲಿದ್ದಾರೆ ಎಂದು ಖುದ್ದು ರೆಹಮಾನ್‌ ಅವರೇ ಖಚಿತಪಡಿಸಿದ್ದಾರೆ.ಲಿಸಾ ರೇ ಮತ್ತು ಮನೀಷಾ ಕೊಯಿರಾಲಾ ಕೂಡಾ 99 ಸಾಂಗ್ಸ್‌ನಲ್ಲಿ ನಟಿಸುತ್ತಿದ್ದಾರೆ. ರೆಹಮಾನ್‌ ಅವರ ವೈಆರ್‌ ಪ್ರೊಡಕ್ಷನ್ಸ್‌ ಮತ್ತು ಜಿಯೊ ಸ್ಟುಡಿಯೊಸ್ ನಿರ್ಮಾಣದಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರಇದೇ ಜೂನ್‌ 21ರಂದು ಚಿತ್ರ ವಿಶ್ವದಾದ್ಯಂತ ತೆರೆಕಾಣಲಿದೆ ಎಂದೂ ರೆಹಮಾನ್‌ ಸ್ಪಷ್ಟಪಡಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT