ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಾಂತಿಯೋಗಿ ಮಹಾದೇವರು’ ಚಿತ್ರ ಬಿಡುಗಡೆಗೆ ಸಿದ್ಧ

Last Updated 2 ಜುಲೈ 2018, 10:31 IST
ಅಕ್ಷರ ಗಾತ್ರ

ಹುಬ್ಬಳ್ಳಿ ಮಹದೇವಪ್ಪ ನಾಡು ಕಂಡ ಕ್ರಾಂತಿಯೋಗಿ. ಉತ್ತರ ಕರ್ನಾಟಕ ಭಾಗದಲ್ಲಿ ಅವರು ‘ಮಹಾದೇವರು’ ಎಂದೇ ಪ್ರಸಿದ್ಧಿ. ಅವರ ಸಾಧನೆ ಕುರಿತು ಸಾಯಿಪ್ರಕಾಶ್‌ ನಿರ್ದೇಶಿಸಿರುವ ‘ಕ್ರಾಂತಿಯೋಗಿ ಮಹಾದೇವರು’ ಚಿತ್ರ ತೆರೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಮಾತನಾಡಿ, ‘ಸಾಯಿಪ್ರಕಾಶ್‌ ಇದೇ ಮಾದರಿಯ ಚಿತ್ರಗಳನ್ನು ಹೆಚ್ಚಾಗಿ ನಿರ್ದೇಶಿಸುತ್ತಿದ್ದಾರೆ. ಮಹದೇವಪ್ಪ ಅವರ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಅವರ ಸಾಧನೆ ತೆರೆಯ ಮೇಲೆ ಬಂದರೆ ಎಲ್ಲರಿಗೂ ತಿಳಿಯುತ್ತದೆ. ಸಿನಿಮಾಗೆ ಒಳ್ಳೆಯ ಯಶಸ್ಸು ಸಿಗಲಿ’ ಎಂದು ಶುಭ ಕೋರಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ‘ಟ್ರೇಲರ್‌ನಲ್ಲಿನ ದೃಶ್ಯಗಳನ್ನು ನೋಡಿದಾಗ ಒಂದು ಭಂಗಿಯಲ್ಲಿ ರಾಜೀವ್‌ ಗಾಂಧಿ ನೆನಪಿಗೆ ಬರುತ್ತಾರೆ. ಪವಾಡ ಚಿತ್ರಗಳು ಸದ್ದುದ್ದೇಶದಿಂದ ಕೂಡಿರುತ್ತವೆ. ಇಂತಹ ಸಿನಿಮಾ ಮಾಡಲು ದೈಹಿಕ ಚೈತನ್ಯ ಬೇಕು. ಅದು ನಿರ್ದೇಶಕರಿಗೆ ಸಿದ್ಧಿಸಿದೆ’ ಎಂದು ಶ್ಲಾಘಿಸಿದರು.

‘ನೂರು ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳುವುದು ಸುಲಭವಲ್ಲ. ನನ್ನ ಅವಧಿಯಲ್ಲಿನ ಮೊದಲ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಸಾಯಿಪ್ರಕಾಶ್‌ ಅವರಿಂದಲೇ ಪ್ರಾರಂಭಿಸಲಾಗುವುದು. ಮಹಾದೇವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಅವರ ಐತಿಹ್ಯವಿದೆ’ ಎಂದರು.

ಮಹಾದೇವರ ಪಾತ್ರ ಮಾಡಿರುವ ನಟ ರಾಮ್‌ಕುಮಾರ್, ಕಲಾವಿದರಾದ ಶಿವಕುಮಾರ್, ಗಣೇಶ್‌ ರಾವ್, ಡಿಂಗ್ರಿ ನಾಗರಾಜ್, ಸಿತಾರಾ ಚಿತ್ರೀಕರಣದ ಅನುಭವ ಹಂಚಿಕೊಂಡರು. ಹಾಡುಗಳು, ಶ್ಲೋಕಗಳಿಗೆ ಬಿ. ಬಲರಾಮ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶೈಲ ಗಾಣಿಗೇರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT