ನಿಮ್ಮೊಳಗಿನ ಕಥೆ ನಮಗೆ ಹೇಳಿ...

ಬುಧವಾರ, ಏಪ್ರಿಲ್ 24, 2019
29 °C

ನಿಮ್ಮೊಳಗಿನ ಕಥೆ ನಮಗೆ ಹೇಳಿ...

Published:
Updated:

ಪ್ರಸ್ತುತ ಕಥೆ, ಕಾದಂಬರಿ ಆಧರಿತ ಸಿನಿಮಾಗಳ ಸಂಖ್ಯೆ ವಿರಳವಾಗಿದೆ. ಕನ್ನಡ ಚಿತ್ರರಂಗದಲ್ಲಿನ ಈ ನಿರ್ವಾತ ತುಂಬಲು ಸಿದ್ಧಿ ಎಂಟರ್‌ಟೈನ್‌ಮೆಂಟ್‌ ಮುಂದಾಗಿದೆ. ‘ನಿಮ್ಮ ಕಥೆ ಕೇಳುವುದಕ್ಕೆ ನಾವಿದ್ದೇವೆ’ ಎಂದು ಕನ್ನಡದ ಕಥೆಗಾರರಿಗೆ ಒಂದು ಬೆಚ್ಚನೆಯ ಆಹ್ವಾನ ನೀಡಿದೆ. ಉತ್ತಮ ಕಥೆಗೆ ₹ 1 ಲಕ್ಷ ಬಹುಮಾನ ಕೂಡ ಲಭಿಸಲಿದೆ. ಜೊತೆಗೆ, ಆ ಕಥೆ ಸಿನಿಮಾವಾಗಿಯೂ ತೆರೆಯ ಮೇಲೆ ಮೂಡಿಬರಲಿದೆ.

ಕಥೆಗಾರರಿಗೆ ಕೆಲವು ಷರತ್ತು ವಿಧಿಸಲಾಗಿದೆ. ಕಥೆ ಎರಡು ಸಾವಿರ ಪದಗಳ ಮಿತಿಯಲ್ಲಿರಬೇಕು. ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆದು ಕಳುಹಿಸಬೇಕು. ಕಥೆ ಅಪ್ಪಟ ಕಥೆಯ ರೂಪದಲ್ಲಿಯೇ ಇರಬೇಕು. ಚಿತ್ರಕಥೆ, ಸಂಭಾಷಣೆ ಬರೆಯಬೇಕಿಲ್ಲ. ಕಥೆ ಯಾವ ಶೈಲಿಯದ್ದೂ ಆಗಬಹುದು. ಆದರೆ, ಸ್ವಂತ ಕಥೆಗೆ ಮಾತ್ರವೇ ಪ್ರವೇಶಾವಕಾಶವಿದೆ. ತೀರ್ಪುಗಾರರ ಸಮಿತಿಯು 20 ಕಥೆಗಳನ್ನು ಆಯ್ಕೆ ಮಾಡಲಿದೆ. ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತದೆ. ಕಥೆಗಳನ್ನು ಟೈಪ್‌ ಮಾಡಿ ಕಳುಹಿಸಬೇಕು (writekarnataka@gmail.com). ಯಾವುದೇ ಕಥೆಗಳನ್ನು ವಾಪಸ್‌ ಕಳುಹಿಸುವುದಿಲ್ಲ. ಏಪ್ರಿಲ್‌ನೊಳಗೆ ಕಥೆ ಕಳುಹಿಸಬೇಕು.

ನಿರ್ದೇಶಕ ಶ್ರೀನಿ, ‘ಒಳ್ಳೆಯ ಕಥೆಗಳು ಸಿನಿಮಾವಾಗಬೇಕು ಎನ್ನುವುದೇ ಇದರ ಹಿಂದಿರುವ ಆಶಯ. ಸಿನಿಮಾಕ್ಕೆ ನಾವೇ ಬಂಡವಾಳ ಹೂಡುತ್ತೇವೆ. ಸ್ನೇಹಿತರೊಟ್ಟಿಗೆ ಇಂತಹ ಪ್ರಯೋಗ ಮಾಡೋಣವೆಂದು ಚರ್ಚಿಸಿದೆ. ಎಲ್ಲರೂ ಸಮ್ಮತಿ ಸೂಚಿಸಿದ್ದರಿಂದ ಇದು ಕಾರ್ಯರೂಪಕ್ಕೆ ಬರುತ್ತಿದೆ’ ಎಂದು ವಿವರಿಸಿದರು.

ಪತ್ರಕರ್ತ ಜೋಗಿ, ‘ಕಥೆಗಾರರು ಸಿನಿಮಾಕ್ಕಾಗಿ ಕಥೆ ಬರೆಯುವುದಿಲ್ಲ. ಸಮಕಾಲೀನ ಕಥೆಗಳನ್ನು ಸಿನಿಮಾ ಶೈಲಿಗೆ ಒಗ್ಗಿಸಿಕೊಳ್ಳುವ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಮಲಯಾಳ ಚಿತ್ರರಂಗದಲ್ಲಿ ಕಥೆ ಅಥವಾ ಕಾದಂಬರಿಯೊಂದು ದೃಶ್ಯರೂಪ ತಳೆಯುವಾಗ ನಿರ್ದೇಶಕ, ನಾಯಕ, ನಾಯಕಿಯಿಂದ ಹಿಡಿದು ಎಲ್ಲಾ ತಂತ್ರಜ್ಞರಿಗೂ ಆ ಕಥಾವಸ್ತುವಿನ ಬಗ್ಗೆ ಗೊತ್ತಿರುತ್ತದೆ. ಕನ್ನಡದಲ್ಲಿಯೂ ಪಾರ್ವತಮ್ಮ ರಾಜ್‌ಕುಮಾರ್‌, ಪುಟ್ಣಣ್ಣ ಕಣಗಾಲ್‌ ಅವರಿಗೆ ಇದರ ಅರಿವು ಇತ್ತು. ಪ್ರಸ್ತುತ ಕಥೆಯೊಂದನ್ನು ಸಿನಿಮಾ ಮಾಡುವಾಗ ನಿರ್ದೇಶಕ ಚಿತ್ರದ ಭಾಗವಾಗಿರುವ ಎಲ್ಲರಿಗೂ ಅದನ್ನು ಅರ್ಥವಾಗುವಂತೆ ಹೇಳಬೇಕಾದ ಸ್ಥಿತಿಯಿದೆ’ ಎಂದು ಹೇಳಿದರು.

‘ನಾವೆಲ್ಲಾ ಬೆಂಗಳೂರಿಗೆ ಬಂದು ನೆಲೆಯೂರಿದ್ದೇವೆ. ಇದರಿಂದ ನಮ್ಮತನ ಕಳೆದುಕೊಂಡಿದ್ದೇವೆ. ಹಳ್ಳಿಯ ಸೊಗಡು ಮರೆಯಾಗಿದೆ. ಹಾಗಾಗಿ, ಇಲ್ಲಿನ ನೇಟಿವಿಟಿಗೆ ತಕ್ಕಂತಹ ಸಿನಿಮಾಗಳನ್ನು ಮಾಡುವುದು ಕಷ್ಟವಾಗುತ್ತಿದೆ. ಇದು ಅಂತರರಾಷ್ಟ್ರೀಯಮಟ್ಟದಲ್ಲಿ ನಮ್ಮ ಸಿನಿಮಾಗಳು ಸ್ಪರ್ಧಿಸಲೂ ತೊಡಕಾಗುತ್ತಿದೆ’ ಎಂದು ಅನುಭವ ಹಂಚಿಕೊಂಡರು ನಿರ್ದೇಶಕ ಡಿ. ಸತ್ಯಪ್ರಕಾಶ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !