ಭಾನುವಾರ, ಫೆಬ್ರವರಿ 28, 2021
31 °C

ಗರುಡಾಸ್ತ್ರ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಂಧಿನಗರ ಈಗ ಗರುಡಾಸ್ತ್ರದ ಪ್ರಯೋಗ ಎದುರಿಸಲು ಸಿದ್ಧವಾಗಿದೆ. ಅರೇ... ಇದು ಯಾವ ಅಸ್ತ್ರವೆಂದು ಹುಬ್ಬೇರಿಸಬೇಡಿ. ಈ ಅಸ್ತ್ರದ ಪ್ರಯೋಗಕ್ಕೆ ಮುಂದಾಗಿರುವುದು ನಿರ್ದೇಶಕ ಕೆ. ಧನಕುಮಾರ್‌. ಅಂದಹಾಗೆ ಗರುಡ ಪುರಾಣಕ್ಕೂ ಮತ್ತು ‘ಗರುಡ’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಶಿಬಿರವನ್ನು ಗುರಿಯಾಗಿಸಿ ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಬಳಸಿದ ಗರುಡಾಸ್ತ್ರದ ಕಥೆ ಇದು. 

ಸಿನಿಮಾ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಭಾರತೀಯ ಸೇನೆಯು ಉಗ್ರರ ಹೆಡೆಮುರಿಕಟ್ಟಲು ‘ಗರುಡ’ ಅಸ್ತ್ರ ಬಳಸಿತ್ತು. ಇದರ ಸಣ್ಣ ಎಳೆ ಇಟ್ಟುಕೊಂಡೇ ಚಿತ್ರದ ಕಥೆ ಹೆಣೆಯಲಾಗಿದೆ. ಬೆಂಗಳೂರು, ಮೈಸೂರು, ಕೆಜಿಎಫ್, ಗೋವಾದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಈ ವರ್ಷಾಂತ್ಯಕ್ಕೆ ತೆರೆಕಾಣುವ ನಿರೀಕ್ಷೆ ಇದೆ. 

ನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶಕನಾಗಿ ದುಡಿದಿರುವ ಧನಕುಮಾರ್‌ ಈ ಚಿತ್ರದ ಮೂಲಕ ನಿರ್ದೇಶಕನ ಟೊಪ್ಪಿಗೆ ಧರಿಸುತ್ತಿದ್ದಾರೆ. ‘ಕುಟುಂಬದ ನಿರ್ವಹಣೆಯ ಹೊಣೆ ಹೊತ್ತ ಹುಡುಗನೊಬ್ಬ ಏನೆಲ್ಲಾ ತ್ಯಾಗಕ್ಕೆ ತಯಾರಾಗಿರುತ್ತಾನೆ. ಸುಖೀ ಕುಟುಂಬದಲ್ಲಿ ನಡೆಯುವ ಆಕಸ್ಮಿಕ ಘಟನೆಯೊಂದು ಆತನ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎನ್ನುವುದು ಇದರ ತಿರುಳು. ಲವ್‌ಸ್ಟೋರಿಯ ಜೊತೆಗೆ ರೌಡಿಸಂ, ಮಾಫಿಯಾ ಕಥೆಯೂ ಬೆಸೆದುಕೊಂಡಿದೆ’ ಎಂದು ಮಾತು ವಿಸ್ತರಿಸಿದರು ಧನಕುಮಾರ್‌. 

ಈ ಚಿತ್ರಕ್ಕೆ ಕಥೆ ಹೊಸೆದಿರುವ ಸಿದ್ಧಾರ್ಥ ಮಹೇಶ್‌ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರದು ಮೂರು ಶೇಡ್‌ಗಳಿರುವ ಪಾತ್ರ. ನೌಕಾಪಡೆಯ ಕ್ಯಾಫ್ಟನ್‌ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರಂತೆ. ಅವರಿಗೆ ಆಶಿಕಾ ರಂಗನಾಥ್ ಮತ್ತು ಐಂದ್ರಿತಾ ರೇ ಜೋಡಿಯಾಗಿದ್ದಾರೆ. ಖಡಕ್‌ ಪೊಲೀಸ್ ಅಧಿಕಾರಿಯಾಗಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಆದಿಲೋಕೇಶ್‌ ಹೆಣ್ಣುಮಕ್ಕಳು ಹಿಡಿಶಾಪ ಹಾಕುವಂತಹ ಕಿರಾತಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ.

ನಾಲ್ಕು ಹಾಡುಗಳಿಗೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಜೈಆನಂದ್‍ ಅವರದು. ಬಿ.ಕೆ. ರಾಜಾರೆಡ್ಡಿ ಮತ್ತು ಎಸ್. ಪ್ರಸಾದ್‍ ರೆಡ್ಡಿ ಬಂಡವಾಳ ಹೂಡಿದ್ದಾರೆ. ಕಾಮ್ನಾ ಜೇಠ್ಮಲಾನಿ, ರಂಗಾಯಣ ರಘು, ರಾಜೇಶ್‍ ನಟರಂಗ, ರಮೇಶ್‍ ಪಂಡಿತ್, ಆನಂದ್, ಗಿರಿ, ಜಹಾಂಗೀರ್, ಸುನೇತ್ರ ಪಂಡಿತ್, ಸುಜಯ್‍ ಶಾಸ್ತ್ರಿ ತಾರಾಗಣದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು