ಬುಧವಾರ, ಮೇ 18, 2022
23 °C
ಈ ಬಾರಿ ಒಟಿಟಿಗಳಲ್ಲೂ ಸಿನಿಮಾ ವೀಕ್ಷಣೆಗೆ ಅವಕಾಶ

ಇಂದಿನಿಂದ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವ

ಪ್ರೇಮಕುಮಾರ್‌ ಹರಿಯಬ್ಬೆ Updated:

ಅಕ್ಷರ ಗಾತ್ರ : | |

ಪಣಜಿ: ಐವತ್ತೆರಡನೇ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಶನಿವಾರ (ನ.20) ಸಂಜೆ ಗೋವಾದ ಪಣಜಿಯಲ್ಲಿ ಆರಂಭವಾಗಲಿದೆ.

ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭ ದಲ್ಲಿ ಇಂಡಿಯನ್‌ ಫಿಲ್ಮ್‌ ಪರ್ಸನಾಲಿಟಿ ಆಫ್‌ ದ ಇಯರ್‌ ಪ್ರಶಸ್ತಿ ಸ್ವೀಕರಿಸಲಿರುವ ಖ್ಯಾತ ನಟಿ ಹೇಮಮಾಲಿನಿ ಮತ್ತು ಗೀತ ರಚನಕಾರ ಪ್ರಸೂನ್‌ ಜೋಷಿ, ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್‌ಸಿಂಗ್‌ ಠಾಕೂರ್‌, ರಾಜ್ಯಪಾಲ ಪಿ.ಎಸ್‌. ಶ್ರೀಧರನ್‌ ಪಿಳ್ಳೈ, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಉಪಸ್ಥಿತರಿರುವರು.

ಕಳೆದ ವರ್ಷ ಕೋವಿಡ್‌ ಕರಿನೆರಳು ಚಿತ್ರೋತ್ಸವದ ಮೇಲೆ ಬಿದ್ದಿತ್ತು.

2020 ನವೆಂಬರ್‌ನಲ್ಲಿ ನಡೆಯಬೇಕಿದ್ದ ಚಿತ್ರೋತ್ಸವ 2021ರ ಜನವರಿ ತಿಂಗಳಲ್ಲಿ ನಡೆದಿತ್ತು.

ಈಗ ಕೋವಿಡ್‌ ನಿಯಂತ್ರಣಕ್ಕೆ ಗೋವಾ ಸರ್ಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾಗಿ ಚಿತ್ರೋತ್ಸವವನ್ನು ಸಂಘಟಿಸಲಾಗಿದೆ. ಒಂಬತ್ತು ದಿನಗಳ ಈ ಚಿತ್ರೋತ್ಸವ ಭಾರತೀಯ ಸಿನಿಮಾರಂಗದ
ಚೇತರಿಕೆಗೆ ಸ್ಫೂರ್ತಿ ಆಗಲಿದೆ ಎಂಬ ನಿರೀಕ್ಷೆ ಇದೆ.

ಇದೇ ಮೊದಲ ಬಾರಿಗೆ ಹಲವು ಒಟಿಟಿ ವೇದಿಕೆಗಳು ಚಿತ್ರೋತ್ಸವದ ಜತೆ ಕೈಜೋಡಿಸಿವೆ.

ಚಿತ್ರೋತ್ಸವದಲ್ಲಿ ಪ್ರದರ್ಶನ ಗೊಳ್ಳಲಿರುವ ಹಲವು ಚಿತ್ರಗಳನ್ನು ಒಟಿಟಿಗಳಲ್ಲಿ ನೋಡುವ ಅವಕಾಶವಿದೆ.
ಸತ್ಯಜಿತ್‌ ರೇ ಜನ್ಮ ಶತಮಾನೋತ್ಸವ ವರ್ಷದ ನೆನಪಿನಲ್ಲಿ ನೀಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ಹೆಸರಾಂತ ಹಾಲಿವುಡ್‌ ಚಿತ್ರ ನಿರ್ದೇಶಕ ಮಾರ್ಟಿನ್‌ ಸ್ಕಾರ್ಸೆಸ್‌ ಮತ್ತು ಹಂಗೇರಿ ದೇಶದ ಚಿತ್ರ ನಿರ್ದೇಶಕ ಇಸ್ಟೆವನ್‌ ಝಾಬೊ ಆಯ್ಕೆಯಾಗಿದ್ದು ಸಮಾರೋಪ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸುವರು.

ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಮೂರು ಭಾರತೀಯ ಸಿನಿಮಾಗಳೂ ಸೇರಿದಂತೆ 15 ಸಿನಿಮಾಗಳಿವೆ.

ಅಸ್ಸಾಮಿನ ದಿಮಾಸ ಬುಡಕಟ್ಟು ಭಾಷೆಯ ಮೊದಲ ಸಿನಿಮಾ
‘ಶೆಮ್ಕೋರ್‌’ ಮತ್ತು ಮರಾಠಿಯ ‘ಗೋದಾವರಿ ಮತ್ತು ಮೀ ವಸಂತ ರಾವ್‌’ ಸ್ಪರ್ಧೆಯಲ್ಲಿರುವ ಇನ್ನೆರಡು ಭಾರತೀಯ ಸಿನಿಮಾಗಳು. ಪನೋರಮಾ ವಿಭಾಗದಲ್ಲಿ ಕನ್ನಡದ ‘ಡೊಳ್ಳು’, ‘ತಲೆದಂಡ’, ‘ಆ್ಯಕ್ಟ್ 1978’ ಮತ್ತು ‘ನೀಲಿ ಹಕ್ಕಿ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಈ ವಿಭಾಗದಲ್ಲಿ ಐದು ಬೆಂಗಾಳಿ, ಐದು ಮರಾಠಿ, ನಾಲ್ಕು ತಮಿಳು ಸೇರಿದಂತೆ ಒಟ್ಟು 26 ಸಿನಿಮಾಗಳು ಮತ್ತು 20 ನಾನ್‌ ಫೀಚರ್‌ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ನಿಧನರಾದ ದಿಲೀಪ್‌ ಕುಮಾರ್‌, ಸುಮಿತ್ರಾ ಭಾವೆ, ಬುದ್ಧದೇವ ದಾಸ್‌ಗುಪ್ತ, ಪುನೀತ್‌ ರಾಜ್‌ಕುಮಾರ್‌, ಸಂಚಾರಿ ವಿಜಯ್‌, ಸುರೇಖಾ ಸಿಕ್ರಿ ಹಾಗೂ ಜೇಮ್ಸ್‌ ಬಾಂಡ್‌ ಖ್ಯಾತಿಯ ಇಂಗ್ಲಿಷ್‌ ನಟ ಸೆಆನ್‌
ಕೊನೆರಿ ಮತ್ತಿತರರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಉದ್ಘಾಟನಾ ಸಮಾರಂಭದ ನಂತರ ಕರ‍್ಲೊಸ್‌ ಸೌರಾ ನಿರ್ದೇಶನದ ಸ್ಪ್ಯಾನಿಷ್‌ ಚಿತ್ರ ‘ದ ಕಿಂಗ್‌ ಆಫ್‌ ಆಲ್‌ ದ ವರ್ಲ್ಡ್‌’ ಪ್ರದರ್ಶನವಾಗಲಿದೆ.

ಭಾನುವಾರದಿಂದ ಐನಾಕ್ಸ್‌ ಚಿತ್ರ ಮಂದಿರ ಮತ್ತು ಕಲಾ ಅಕಾಡೆಮಿಯ ಐದು ತೆರೆಗಳು ಸೇರಿದಂತೆ ಒಟ್ಟು ಏಳು ತೆರೆಗಳಲ್ಲಿ ಮುಂಜಾನೆ 8ರಿಂದ
ತಡರಾತ್ರಿವರೆಗೆ ನಿರಂತರವಾಗಿ ಸುಮಾರು 80 ದೇಶಗಳ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು