ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಕವಾಗಿ ಗೋದ್ರಾ..?

ಸತೀಶ್ ಹೊಸ ಸಿನಿಮಾದಲ್ಲಿ ಏನಿದೆ?
Last Updated 29 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಗೋದ್ರಾ ಎಂಬ ಹೆಸರು ಕೇಳಿದ ತಕ್ಷಣ ಸಹಜವಾಗಿಯೇ ನೆನಪಾಗುವುದು ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡ. ಅದೇ ಹೆಸರನ್ನು ಹೊತ್ತ ಚಿತ್ರವೊಂದು ಸಿದ್ಧವಾಗುತ್ತಿದೆ ಎಂಬ ಸುದ್ದಿ ಕೇಳಿದ ತಕ್ಷಣ ಮನಸ್ಸು ಆಲೋಚಿಸುವುದು, ‘ಗುಜರಾತ್‌ನಲ್ಲಿ ನಡೆದಿದ್ದರ ಸಿನಿಮಾ ರೂಪ ಇರಬಹುದೇ ಇದು’ ಎಂದು.

ಆದರೆ, ‘ಗೋದ್ರಾ’ ಚಿತ್ರಕ್ಕೂ ಗುಜರಾತ್‌ನಲ್ಲಿ ನಡೆದ ವಿದ್ಯಮಾನಕ್ಕೂ ಯಾವ ಸಂಬಂಧವೂ ಇಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಂದೀಶ್. ಈ ಚಿತ್ರದ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಚಿತ್ರವು ತೆರೆಯ ಮೇಲೆ ಕಾಣಿಸಿಕೊಳ್ಳಲು ಹವಣಿಸುತ್ತಿದೆ. ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದರು ನಂದೀಶ್. ‘ಇದು ಗುಜರಾತಿನ ಕಥೆಯಲ್ಲ. ಆದರೆ, ನಿತ್ಯ ಜೀವನದಲ್ಲಿ ನಡೆಯುವ ಗೋದ್ರಾಗಳ ಸಿನಿಮಾ ಇದು’ ಎನ್ನುವ ಮೂಲಕ ಗೋದ್ರಾ ಘಟನೆಯನ್ನು ರೂಪಕದ ರೀತಿಯಲ್ಲಿ ಗ್ರಹಿಸಬೇಕೆಂಬ ಮನವಿಯನ್ನು ಸೂಚ್ಯವಾಗಿ ಮಾಡಿದರು.

‘ಚಿತ್ರದ ಕಥೆ ಇರುವುದು ಕ್ರಾಂತಿ ಮತ್ತು ಪ್ರೀತಿಯ ಬಗ್ಗೆ. ಇದು ರಾಜಕೀಯದ ಆಯಾಮಗಳ ಕುರಿತೂ ಮಾತನಾಡುವ ಸಿನಿಮಾ. ವಾಸ್ತವಕ್ಕೆ ಹತ್ತಿರವಾಗುವ ರೀತಿಯಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಹಾಗಾಗಿಯೇ, ಈ ಸಿನಿಮಾವನ್ನು ಬೇರೆ ಭಾಷೆಗಳಿಗೆ ಕೂಡ ಡಬ್ ಮಾಡಬೇಕು ಎಂಬ ಬೇಡಿಕೆ ಇದೆ. ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಮಾಡುವ ಮಾತುಕತೆ ಅಂತಿಮ ಹಂತದಲ್ಲಿ ಇದೆ. ಹಿಂದಿಗೆ ಡಬ್ ಮಾಡುವ ಮಾತುಕತೆ ನಡೆಯುತ್ತಿದೆ’ ಎಂದರು ನಂದೀಶ್.

ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಇರಲಿವೆ. ಎರಡು ಪಾತ್ರಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳದ್ದು. ಇನ್ನೊಂದು ಪಾತ್ರ ರಾಜಕಾರಣಿಯದ್ದು. ನಾಲ್ಕನೆಯ ಪಾತ್ರ ಪೈಲಟ್‌ನದ್ದು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪಾತ್ರವನ್ನು ನೀನಾಸಂ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್‌ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಸಿಷ್ಠ ಸಿಂಹ ಪೈಲಟ್‌ ಅವತಾರ ಎತ್ತಿದ್ದಾರೆ.

‘ಬಹುರಾಷ್ಟ್ರೀಯ ಕಂಪನಿಗಳು ಹಾಗೂ ರಾಜಕಾರಣ ಸಿನಿಮಾದಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ವಿದ್ಯಾಭ್ಯಾಸ ಮಾಡುತ್ತ, ಲವ್‌ ಮಾಡುತ್ತ ಇರುವ ಯುವಕರ ಮೇಲೆ ಇವೆರಡು ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವ ಕಥಾಹಂದರ ಚಿತ್ರದಲ್ಲಿದೆ. ಚಿತ್ರದ ಕಥೆಯು 2008ರಲ್ಲಿ ಆರಂಭವಾಗಿ, 2018–19ರವರೆಗೆ ಬರುತ್ತದೆ. ಅಂದರೆ, ಹತ್ತು ವರ್ಷಗಳ ಕಥೆಯನ್ನು ಸಿನಿಮಾ ಹೇಳಲಿದೆ’ ಎಂದು ಹೇಳಿದ ನಂದೀಶ್‌, ಚಿತ್ರದ ಪ್ರಮುಖ ಪಾತ್ರಧಾರಿಗಳು ಒಂದಕ್ಕಿಂತ ಹೆಚ್ಚು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬ ಸೂಚನೆ ನೀಡಿದರು.

ಸತೀಶ್ ಮತ್ತು ಶ್ರದ್ಧಾ ಅವರ ಪಾತ್ರಗಳ ಕಥೆ ಮಲೆನಾಡಿನಲ್ಲಿ ಆರಂಭವಾಗುತ್ತದೆ. ಅಚ್ಯುತ್ ಅವರದ್ದು ಬೆಂಗಳೂರಿನಲ್ಲಿ ನಡೆಯುತ್ತದೆ. ವಸಿಷ್ಠ ಅವರ ಕಥೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆಯುತ್ತದೆ. ಮೂರೂ ಕಥೆಗಳು ಒಂದು ಹಂತದಲ್ಲಿ ಒಂದನ್ನೊಂದು ಸಂಧಿಸುತ್ತವೆ. ‘ಇದನ್ನು ನಾನು ಅಸಾಮಾನ್ಯ ಕಥೆ ಇರುವ ಸಿನಿಮಾ ಎನ್ನಲಾರೆ. ಆದರೆ ವಾಸ್ತವಕ್ಕೆ ಹತ್ತಿರವಾಗುವಂತೆ ಮಾಡಿದ್ದೇನೆ ಎನ್ನುವೆ. ಯಾವ ವ್ಯಕ್ತಿಯನ್ನೂ ಉದ್ದೇಶಿಸಿ ಮಾಡಿದ ಸಿನಿಮಾ ಇದಲ್ಲ’ ಎಂದು ನಿರ್ದೇಶಕ ಸ್ಪಷ್ಟಪಡಿಸುತ್ತಾರೆ.

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಬೇಕು ಎಂಬ ಉದ್ದೇಶ ತಂಡಕ್ಕಿದೆ.

‘ನನ್ನದು ಮಧ್ಯಮ ವರ್ಗದ ವಿದ್ಯಾರ್ಥಿಯೊಬ್ಬನ ಪಾತ್ರ. ಆತ ಜನಪರವಾಗಿ ಹೋರಾಟ ನಡೆಸುವ ವ್ಯಕ್ತಿ. ಆ್ಯಕ್ಟಿವಿಸ್ಟ್‌ ಮನಸ್ಥಿತಿಯ ವ್ಯಕ್ತಿ ಆತ ಎಂದೂ ಹೇಳಬಹುದು. ಪೊಲಿಟಿಕಲ್ ಥ್ರಿಲ್ಲರ್ ಜೊತೆಯಲ್ಲೇ ಇದರಲ್ಲೊಂದು ಪ್ರೇಮಕಥೆಯೂ ಇದೆ’ ಎನ್ನುತ್ತಾರೆ ಸತೀಶ್.

ನಕ್ಸಲಿಸಂ ಪ್ರಸ್ತಾಪ

‘ಗೋದ್ರಾ’ ಚಿತ್ರದಲ್ಲಿ ನಕ್ಸಲಿಸಂ ಬಗ್ಗೆಯೂ ಪ್ರಸ್ತಾಪ ಇರಲಿದೆ. ಕರ್ನಾಟಕದಲ್ಲಿನ ನಕ್ಸಲಿಸಂ ಕುರಿತ ವಿಚಾರಗಳು ಕಥೆಯಲ್ಲಿ ಬರಲಿವೆ. ಈ ರಾಜ್ಯಕ್ಕೆ ನಕ್ಸಲಿಸಂನಂತಹ ತೀವ್ರವಾದಿ ವಿಚಾರಗಳ ಅಗತ್ಯವಿತ್ತೇ ಎಂಬ ಪ್ರಶ್ನೆಯೂ ಕಥೆಯ ಒಂದು ಭಾಗ ಎಂದು ಸಿನಿಮಾ ತಂಡದ ಆಪ್ತರೊಬ್ಬರು ಹೇಳುತ್ತಾರೆ. ಸತೀಶ್ ಅವರು ನಿಭಾಯಿಸಿರುವ ಪಾತ್ರವು ನಕ್ಸಲ್ ನಾಯಕ ಆಗಿದ್ದ ಸಾಕೇತ್‌ ರಾಜನ್‌ ವ್ಯಕ್ತಿತ್ವದ ಒಂದಿಷ್ಟು ಎಳೆಗಳನ್ನು ಹೊಂದಿದೆ ಎಂಬ ಗುಟ್ಟನ್ನೂ ಅವರು ಬಿಟ್ಟುಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT