ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವೊಂದರಲ್ಲಿ ಒಟ್ಟಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಚಿತ್ರಕ್ಕೆ ‘ Your’s sincerely ರಾಮ್’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗಷ್ಟೇ ಚಿತ್ರ ಸೆಟ್ಟೇರಿದೆ. ‘ಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
‘ವಿಖ್ಯಾತ್ ‘ಪುಷ್ಪಕ ವಿಮಾನ’ ಚಿತ್ರದಿಂದ ಪರಿಚಯ. ಇವರಿಗೆ ಸೌಂದರ್ಯ ಪ್ರಜ್ಞೆ ತುಂಬ ಚೆನ್ನಾಗಿದೆ. ಇವರು ನಿರ್ಮಾಣ ಮಾಡಿದ ಚಿತ್ರಗಳ ಪೋಸ್ಟರ್, ಟೀಸರ್‌ಗಳಲ್ಲಿಯೇ ಸೂಕ್ಷ್ಮತೆ ಇರುತ್ತದೆ. ಇವರು ನಿರ್ದೇಶನ ಮಾಡುತ್ತಿರುವುದು ಖುಷಿ. ಗಣೇಶ್ ಮತ್ತು ನನ್ನ ಜೋಡಿ ನಿಮಗೆ ಎಷ್ಟು ಖುಷಿ ಕೊಡುತ್ತದೆಯೋ, ನಮಗೂ ಅಷ್ಟೇ ಖುಷಿ ಕೊಡುತ್ತದೆ’ ಎಂದರು ರಮೇಶ್.
ದಿ ರಾಯಲ್ ಸ್ಟುಡಿಯೋಸ್ ಬ್ಯಾನರ್‌ನಡಿ ಸತ್ಯ ರಾಯಲ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೆ ಅನೂಪ್ ಸೀಳಿನ್ ಸಂಗೀತ, ನವೀನ್ ಕುಮಾರ್ ಛಾಯಾಚಿತ್ರಗ್ರಹಣ, ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.
‘ಚಿತ್ರದಲ್ಲಿ ನಮ್ಮಿಬ್ಬರ ನಡುವಿನ ಸಂಬಂಧ ಭಿನ್ನ. ಬೇರೆ ಪ್ರಪಂಚಕ್ಕೆ ಕರೆದುಕೊಂಡು ಹೋಗುವಂತಹ ಕಥೆ. ಚಿತ್ರದ ಒಂದು ಸಣ್ಣ ತುಣುಕು ಈಗಾಗಲೇ ಬಿಡುಗಡೆಗೊಂಡಿದೆ. ಇದರ ನೂರಷ್ಟು ಸಿನಿಮಾದಲ್ಲಿ ಇರುತ್ತದೆ’ ಎಂದರು ಗಣೇಶ್.