ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರಿದ ಗುಂಡಿನ ಕುರಿತು ಮಾಹಿತಿ ನೀಡಿದ ಬಾಲಿವುಡ್ ನಟ ಗೋವಿಂದ: ಏನದು ಕಾರಣ...?

Published : 1 ಅಕ್ಟೋಬರ್ 2024, 9:57 IST
Last Updated : 1 ಅಕ್ಟೋಬರ್ 2024, 9:57 IST
ಫಾಲೋ ಮಾಡಿ
Comments

ಮುಂಬೈ: ಮಂಗಳವಾರ ನಸುಕಿನ 4.45ರ ಹೊತ್ತಿಗೆ ಮೊಳಗಿದ ಗುಂಡಿನ ಸದ್ದು ಹಲವರ ನಿದ್ದೆಗೆಡಿಸಿತ್ತು. ರಿವಾಲ್ವಾರ್‌ನಿಂದ ಸಿಡಿದ ಗುಂಡು ನೇರವಾಗಿ ಹೊಕ್ಕಿದ್ದು ಬಾಲಿವುಡ್ ನಟ ಗೋವಿಂದ ಅವರ ಕಾಲಿಗೆ.

ಅಷ್ಟಕ್ಕೂ ಆ ನಸುಕಿನಲ್ಲಿ ಗೋವಿಂದ ಅವರತ್ತ ಗುಂಡು ಹಾರಿಸಿದ್ದು ಯಾರು ಎಂಬ ಕುತೂಹಲಕ್ಕೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. 

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಗೋವಿಂದ, ಧ್ವನಿ ಸಂದೇಶದ ಮೂಲಕ ತಮ್ಮ ಅಭಿಮಾನಿಗಳಿಗೆ, ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಟ ಗೋವಿಂದ ಅವರ ಮಂಗಳವಾರ ಕೋಲ್ಕತ್ತಕ್ಕೆ ತೆರಳಬೇಕಿತ್ತು. ಹೊರಡುವ ಗಡಿಬಿಡಿಯಲ್ಲಿದ್ದ ನಟ, ಪರವಾನಗಿ ಹೊಂದಿರುವ ತಮ್ಮ ಬಂದೂಕನ್ನು ತೆಗೆದಿಡುವ ಸಂದರ್ಭದಲ್ಲಿ, ಅದು ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ರಿವಾಲ್ವರ್‌ನಿಂದ ಹಾರಿದ ಗುಂಡು ಗೋವಿಂದ ಅವರ ಕಾಲಿಗೆ ಹೊಕ್ಕಿದೆ ಎಂದು ಅವರ ವ್ಯವಸ್ಥಾಪಕ ಶಶಿ ಸಿನ್ಹಾ ಹೇಳಿದ್ದಾರೆ.

ಈ ಕುರಿತಂತೆ ಆಸ್ಪತ್ರೆಯಿಂದಲೇ ಧ್ವನಿ ಸಂದೇಶವನ್ನು ಕಳುಹಿಸಿರುವ ಗೋವಿಂದ, ‘ನಮಸ್ಕಾರ, ಪ್ರಣಾಮಗಳು. ನಾನು ಗೋವಿಂದ. ನಿಮ್ಮೆಲ್ಲರ ಆಶೀರ್ವಾದ, ತಂದೆ, ತಾಯಿಯವರ ಆಶೀರ್ವಾದ, ಗುರುಗಳ ಕೃಪೆಯಿಂದಾಗಿ ಕಾಲಿಗೆ ಹೊಕ್ಕಿದ್ದ ಗುಂಡನ್ನು ಹೊರಕ್ಕೆ ತೆಗೆಯಲಾಗಿದೆ. ವೈದ್ಯರಾದ ಅಗರ್ವಾಲ್‌ ಹಾಗೂ ಅವರ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು’ ಎಂದಿದ್ದಾರೆ.

ಗೋವಿಂದ ಅವರು ಸದ್ಯ ಮುಂಬೈನ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಿವಾಲ್ವರ್‌ನ ಪರೀಕ್ಷೆಯನ್ನೂ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋವಿಂದ ಅವರ ಆರೋಗ್ಯ ಸ್ಥಿತಿ ಕುರಿತು ಅವರ ಪುತ್ರಿ ಟಿನಾ ಅಹುಜಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ‘ತಂದೆಯವರ ಕಾಲಿನ ಶಸ್ತ್ರಚಿಕಿತ್ಸೆ ಮುಗಿದಿದೆ ಗುಂಡನ್ನು ಹೊರಕ್ಕೆ ತೆಗೆಯಲಾಗಿದೆ. ಅವರ ಆರೋಗ್ಯ ಉತ್ತಮವಾಗಿದೆ. ಮುಂದಿನ 24 ಗಂಟೆಗಳ ಕಾಲ ಅವರು ತೀವ್ರ ನಿಗಾ ಘಟಕದಲ್ಲೇ ಇರಲಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ’ ಹೇಳಿದ್ದಾರೆ.

ಕೂಲಿ ನಂ. 1, ಹಸೀನಾ ಮಾನ್‌ ಜಾಯೇಗಿ, ಸಾಜನ್‌ ಚಲೇ ಸಸುರಾಲ್‌, ರಾಜಾ ಬಾಬು, ಪಾರ್ಟನರ್‌, ರಂಗೀಲಾ ರಾಜ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಗೋವಿಂದ ಅವರು ರಾಜಕೀಯ ಪ್ರವೇಶಿಸಿ ಲೋಕಸಭಾ ಸದಸ್ಯರೂ ಆಗಿದ್ದರು. ಈ ವರ್ಷದ ಆರಂಭದಲ್ಲಿ ಅವರು ಶಿವಸೇನಾ ಪಕ್ಷವನ್ನು ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT