ಹಂದಿ ಕಾಯೋಳು...

7

ಹಂದಿ ಕಾಯೋಳು...

Published:
Updated:
Deccan Herald

ಹಂದಿಯು ಹೊಲದೊಳಕ್ಕೆ ಹೋಗದಿದ್ದರೆ ಈ ಸಿನಿಮಾವೇ ನಿರ್ಮಾಣವಾಗುತ್ತಿರಲಿಲ್ಲ‘ ಎಂದು ಮಾತು ಆರಂಭಿಸಿದರು ನಿರ್ದೇಶಕ ಲೋಕೇಂದ್ರ ಸೂರ್ಯ. ವೇದಿಕೆಯ ಮೇಲಿದ್ದ ಗಣ್ಯರು, ಸಭಿಕರು ಈ ಮಾತು ಕೇಳಿ ಗೊಳ್ಳೆಂದು ನಕ್ಕರು. ಕ್ಷಣಕಾಲ ಸುಧಾರಿಸಿಕೊಂಡ ಅವರು, ಮತ್ತೆ ಮಾತು ಮುಂದುವರಿಸಿದರು.

ಚಿತ್ರದ ಹೆಸರು ‘ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’. ‘ಚಿತ್ರದ ಟೈಟಲ್‌ ಹೇಳಿದಾಕ್ಷಣ ನನ್ನನ್ನು ವಿಚಿತ್ರವಾಗಿ ನೋಡಿದವರೇ ಹೆಚ್ಚು. ಅದಕ್ಕಾಗಿ ಚಿತ್ರದ ಕಾರ್ಡ್‌ ಅನ್ನು ಪ್ರಿಂಟ್ ಹಾಕಿಸಿಕೊಂಡು ಕೇಳಿದ ಎಲ್ಲರಿಗೂ ನೀಡುತ್ತಿದ್ದೆ’ ಎಂದರು ಲೋಕೇಂದ್ರ ಸೂರ್ಯ.

ಸಿನಿಮಾ ನಿರ್ದೇಶನ ಮಾಡಬೇಕೆಂಬುದು ಅವರ ಎರಡು ದಶಕದ ಕನಸಂತೆ. ‘ಮೌನಿ’ ಹೆಸರಿನ ಚಿತ್ರಕ್ಕೆ ಕೈಹಾಕಿ ಒಂದು ವಾರಕ್ಕೆ ಜೇಬು ಖಾಲಿಯಾದಾಗ ನನ್ನ ಬದುಕು ಮೌನಕ್ಕೆ ಜಾರಿತು ಎಂದು ಹೇಳಿಕೊಂಡರು. ಮಳ್ಳವಳ್ಳಿ ತಾಲ್ಲೂಕಿನಲ್ಲಿ ನಡೆದ ನೈಜ ಕಥೆ ಆಧರಿಸಿದ ಚಿತ್ರ ಇದು. ಅಲ್ಲಿನ ಬಿಳಿಕೆರೆ ಠಾಣಾ ವ್ಯಾಪ್ತಿ ನಡೆದ ಜೋಡಿಕೊಲೆಯೊಂದರ ಹಿನ್ನೆಲೆ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಅಮಾಯಕರು ತಾವು ಮಾಡಿಲ್ಲದ ತಪ್ಪಿಗೆ ಹೇಗೆ ವ್ಯವಸ್ಥೆಯ ಕ್ರೂರ ಕೂ‍ಪದೊಳಗೆ ಬಂದಿಯಾಗುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ.

ತುಮಕೂರು ಮೂಲದ ಚೈತ್ರಾ ಈ ಚಿತ್ರದ ನಾಯಕಿ. ಗೌಡನ ಪುತ್ರಿಯಾಗಿ ಕಾಣಿಸಿಕೊಂಡಿ
ದ್ದಾರಂತೆ. ‘ಇದು ನನ್ನ ಪ್ರಥಮ ಚಿತ್ರ. ಪ್ರೀತಿ, ಪ್ರೇಮದ ಸುತ್ತ ಕಥೆ ಸಾಗಲಿದೆ. ಹೊಸಬರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಯಶವಂತ್‌ ಭೂಪತಿ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಎಂ.ಬಿ. ಲೋಕೇಶ್‌ ಗೌಡ, ಭರತ್‌ ಗೌಡ, ಚಂದಹಳ್ಳಿ ರಾಜು, ಲಿಂಗರಾಜ್‌ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಎಂ. ಮಹದೇವಯ್ಯ, ಅರ್ಜುನ ಕೃಷ್ಣ, ವಿನಯ್‌ ಕೂರ್ಗ್, ತಾತಗುಣಿ ಕೆಂಪೇಗೌಡ, ಎಂ.ಸಿ. ನಾಗರಾಜ್‌, ಗುಣಶೇಖರ್‌ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !