ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಮೀಕರಣದತ್ತ ಹೊರಳು ಹಾದಿ

Last Updated 4 ಮೇ 2018, 19:30 IST
ಅಕ್ಷರ ಗಾತ್ರ

ಎಸ್‌.ನಿಜಲಿಂಗಪ್ಪ ಅವರ ಕಾಲ ದಿಂದಲೂ, ವಲಸೆ ಬಂದ ಮುಖ್ಯಮಂತ್ರಿಗಳು ನೆಲೆ ಕಂಡುಕೊಳ್ಳುವ ಪ್ರಯತ್ನಕ್ಕೆ ಬಾಗಲಕೋಟೆ ಜಿಲ್ಲೆ ವೇದಿಕೆ ಕಲ್ಪಿಸಿದೆ. ಇದೀಗ ಸಿದ್ದರಾಮಯ್ಯ ಅವರ ಸರದಿ. ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಜೊತೆಗೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲೂ ಈ ಬಾರಿ ಮುಖ್ಯಮಂತ್ರಿ ಅದೃಷ್ಟ ಪಣಕ್ಕಿಟ್ಟಿದ್ದಾರೆ. ಹಾಗಾಗಿ ಜಿಲ್ಲೆಯು ದೇಶದ ಗಮನ ಸೆಳೆದಿದೆ.

ಬಾದಾಮಿಯಲ್ಲಿ ಅಹಿಂದ ಮತ ಬ್ಯಾಂಕ್‌ನಿಂದ ವಾಲ್ಮೀಕಿ (ನಾಯಕ) ಸಮುದಾಯವನ್ನು ಹೆಕ್ಕಿ, ಲಿಂಗಾಯತರೊಂದಿಗೆ ಹೆಜ್ಜೆ ಹಾಕಿಸುವ ಹೊಸ ಸಮೀಕರಣಕ್ಕೆ ಬಿಜೆಪಿ ಹೈಕಮಾಂಡ್‌ ಮುಂದಾಗಿದೆ. ಹಾಗಾಗಿ ಗಣಿ ನಾಡು ಬಳ್ಳಾರಿಯಿಂದ ಶ್ರೀರಾಮುಲು ಅವರನ್ನು ಕರೆತಂದಿದೆ.

2013ರ ಚುನಾವಣೆಯಲ್ಲಿ, ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮುಧೋಳ ಹೊರತಾಗಿ ಉಳಿದೆಲ್ಲಾ ಕಡೆ ಕಾಂಗ್ರೆಸ್ ಜಯ ಗಳಿಸಿದೆ. ವಿಶೇಷವೆಂದರೆ, ಬಾದಾಮಿ ಬಿಟ್ಟು ಈಗಲೂ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿಯಿಂದ ಮತ್ತೆ ಹಳಬರೇ ಎದುರಾಳಿಗಳಾಗಿದ್ದಾರೆ. ಜೆಡಿಎಸ್‌ ಮಾತ್ರ ಹೊಸ ಮುಖಗಳಿಗೆ ಮಣೆ ಹಾಕಿದೆ. ಮೂರೂ ಪಕ್ಷಗಳು ಅಂತಿಮ ಹಣಾಹಣಿಗೆ ಸನ್ನದ್ಧವಾಗಿವೆ.

ಹೊಸ ಲೆಕ್ಕಾಚಾರ: ಮುಖ್ಯಮಂತ್ರಿ ಸ್ಪರ್ಧೆಯ ನೆರಳಿನಲ್ಲಿ ಆಡಳಿತ ವಿರೋಧಿ ಅಲೆಯನ್ನು ಗೌಣವಾಗಿಸಿ, ವ್ಯಕ್ತಿಗತ ವರ್ಚಸ್ಸಿಗೆ ಹೊಳಪು ತಂದುಕೊಳ್ಳುವುದು ಕಾಂಗ್ರೆಸ್ ಅಭ್ಯರ್ಥಿಗಳ ಲೆಕ್ಕಾಚಾರ. ಇದು ಕೈ ಪಾಳಯದಲ್ಲಿ ಉತ್ಸಾಹ ತರಿಸಿದೆ.

ಕಳೆದ ಬಾರಿ ಕೆಜೆಪಿಯೊಂದಿಗಿನ ದಾಯಾದಿ ಕದನದ ಫಲವು ತಮ್ಮ ಪಕ್ಷವನ್ನು ಐದು ವರ್ಷ ರಾಜಕೀಯ ವನವಾಸಕ್ಕೆ ದೂಡಿತು ಎಂದು ನಂಬಿರುವ ಬಿಜೆಪಿ, ಈ ಬಾರಿ ಒಂದುಗೂಡುವಿಕೆಯ ಬಲದೊಂದಿಗೆ ಸ್ಪರ್ಧೆಗೆ ಸಿದ್ಧವಾಗಿದೆ. ಬಾದಾಮಿಯಲ್ಲಿನ ಹೊಸ ಜಾತಿ ಸಮೀಕರಣ ಜಿಲ್ಲೆಯ ಉಳಿದ ಕ್ಷೇತ್ರಗಳಿಗೂ ವಿಸ್ತರಣೆಗೊಳ್ಳುವ ನಿರೀಕ್ಷೆ ಆ ಪಕ್ಷದಲ್ಲಿ ಗರಿಗೆದರಿದೆ.

ತೆನೆ ಹೊತ್ತ ಮಹಿಳೆಯ ನಡಿಗೆಯ ವೇಗ ಬಾದಾಮಿ, ತೇರದಾಳದಲ್ಲಿ ಗುರಿ ಮುಟ್ಟಿಸಲಿದೆ ಎಂಬ ವಿಶ್ವಾಸ ಆರಂಭದಲ್ಲಿ ಜೆಡಿಎಸ್‌ ನಾಯಕರಲ್ಲಿತ್ತು. ಆದರೆ, ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ಸ್ಪರ್ಧೆಯಿಂದಾಗಿ ಬಾದಾಮಿಯಲ್ಲಿ ಉತ್ಸಾಹ ಕೊಂಚ ತಗ್ಗಿದರೂ ತೇರದಾಳದಲ್ಲಿ ಅದೇ ಧಾವಂತ ಮುಂದುವರಿದಿದೆ.

ಟಿಕೆಟ್ ಕೈತಪ್ಪಿದ ‘ಪ್ರಬಲ’ರನ್ನು ಸೆಳೆಯುವ ಜೆಡಿಎಸ್‌ನ ಪ್ರಯತ್ನ ಜಮಖಂಡಿ ಹಾಗೂ ಹುನಗುಂದದಲ್ಲಿ ಫಲ ಕೊಡಲಿಲ್ಲ. ಇದರಿಂದ ತ್ರಿಕೋನ ಪೈಪೋಟಿ ನೀಡುವ ಮತ್ತೆರಡು ಅವಕಾಶವನ್ನು ಅದು ಕಳೆದುಕೊಂಡಿತು.

ಬಂಡಾಯದ ಬಿಸಿ: ಬಿಜೆಪಿ ಟಿಕೆಟ್‌ ಸಿಗದೇ ಜಮಖಂಡಿಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಸಂಗಮೇಶ, ಹುನಗುಂದದಲ್ಲಿ ಗುತ್ತಿಗೆದಾರ ಎಸ್‌.ಆರ್.ನವಲಿ ಹಿರೇಮಠ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಶೈಲ ದಳವಾಯಿ ಕೂಡ ಬಂಡಾಯ ಅಭ್ಯರ್ಥಿ. ಬಾಗಲಕೋಟೆಯಲ್ಲಿ ಟಿಕೆಟ್ ವಂಚಿತ ಮಾಜಿ ಶಾಸಕ ಪಿ.ಎಚ್.ಪೂಜಾರ, ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ
ಮರಳಿದ್ದಾರೆ.

ಮತ ಬ್ಯಾಂಕ್ ಇಬ್ಭಾಗ?:  ಕಳೆದ ಚುನಾವಣೆಯವರೆಗೂ ಜಿಲ್ಲೆಯಲ್ಲಿ ನೇಕಾರ ಸಮುದಾಯವು ಇಡಿಯಾಗಿ ಪಕ್ಷವೊಂದರ ಬೆನ್ನಿಗೆ ನಿಲ್ಲುತ್ತಿತ್ತು. ಆದರೆ ಈಗ ಇಬ್ಭಾಗವಾಗಿದೆ. ಈ ಮೊದಲು ವೃತ್ತಿ ನೇಕಾರರೆಲ್ಲ ಒಟ್ಟಾಗಿ ‘ನೇಕಾರರ ಒಕ್ಕೂಟ’ ರಚಿಸಿಕೊಂಡಿದ್ದರು. ಆ ಸಂಘಟನೆಯಲ್ಲಿ ದೇವಾಂಗ ಸಮಾಜಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ ಎಂದು ಆರೋಪಿಸಿ, ಇದೀಗ ಕುರುಹಿನ ಶೆಟ್ಟಿ, ಶಿವಾಚಾರದವರು ಸೇರಿದಂತೆ ಕೆಲವು ಉಪಪಂಗಡಗಳು ಒಟ್ಟಾಗಿ ‘ವೀರಶೈವ– ಲಿಂಗಾಯತ ನೇಕಾರರ ಸಂಘಟನೆ’ ಹುಟ್ಟುಹಾಕಿವೆ. ಇದು ಈ ಬಾರಿ ನೇಕಾರರ ಮತ ವಿಭಜನೆಗೆ ದಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಗುಪ್ತಗಾಮಿನಿಯಾಗಿದೆ ಲೆಕ್ಕಾಚಾರ: ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ಹೋರಾಟದ ವಿಚಾರದಲ್ಲಿ, ಜಿಲ್ಲೆಯು ವೀರಶೈವ ಹಾಗೂ ಲಿಂಗಾಯತ ಪರವಾಗಿ ಇರುವ ಇಬ್ಬರಿಗೂ ಸಮಾನ ವೇದಿಕೆ ಕಲ್ಪಿಸಿದೆ. ಅದರ ರಾಜಕೀಯ ಲಾಭ– ನಷ್ಟದ ಲೆಕ್ಕಾಚಾರ ಮಾತ್ರ ಗುಪ್ತಗಾಮಿನಿಯಾಗಿಯೇ ಉಳಿದಿದೆ.

ಬಚಾವತ್‌ ತೀರ್ಪಿನ ಅನ್ವಯ, ರಾಜ್ಯದ ಪಾಲಿನ ನೀರಿನ ಬಳಕೆಗೆ ಆಲಮಟ್ಟಿ ಜಲಾಶಯದಲ್ಲಿ 524 ಮೀಟರ್‌ವರೆಗೆ ನೀರು ನಿಲ್ಲಿಸುವುದು ಸೇರಿದಂತೆ ಹಲವು ವಿಷಯಗಳು ಪ್ರಚಾರದ ವೇಳೆ ಮುನ್ನೆಲೆಗೆ ಬಂದಿವೆ. ಆದರೆ ಅಂತಿಮವಾಗಿ ಜಾತಿ ಲೆಕ್ಕಾಚಾರ, ಪಕ್ಷಾತೀತವಾಗಿ ಜಿಲ್ಲೆಯ ನಾಯಕರು ಉರುಳಿಸುವ ಒಳ ಒಪ್ಪಂದದ ದಾಳಗಳು ಅಭ್ಯರ್ಥಿಯ ಭವಿಷ್ಯ ನಿರ್ಧರಿಸುತ್ತವೆ.

ರಾಹುಲ್‌, ಶಾ ಭೇಟಿ: ಚುನಾವಣೆ ಸಿದ್ಧತೆ ಆರಂಭವಾದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಬಂದು ಹೋಗಿದ್ದಾರೆ.

ಸಚಿವೆ ಉಮಾಶ್ರೀ, ಬಿಜೆಪಿ ಮುಖಂಡ ಗೋವಿಂದ ಕಾರಜೋಳ, ಶಾಸಕರಾದ ಎಚ್.ವೈ.ಮೇಟಿ, ಸಿದ್ದು ನ್ಯಾಮಗೌಡ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಈ ಬಾರಿ ಸ್ಪರ್ಧಾ ಕಣದಲ್ಲಿರುವ ಪ್ರಮುಖರು.

ನಾಲ್ಕು ದಶಕದ ನಂತರ ಹೊಸ ಮುಖ!

ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 1978ರಲ್ಲಿ ಬಿ.ಬಿ.ಚಿಮ್ಮನಕಟ್ಟಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1989ರ ಚುನಾವಣೆಯಲ್ಲಿ ಜನತಾದಳದಿಂದ ಎಂ.ಕೆ.ಪಟ್ಟಣಶೆಟ್ಟಿ ವಿಧಾನಸಭೆ ಪ್ರವೇಶಿಸಿದ್ದರು. ಆಗಿನಿಂದಲೂ ಬಾದಾಮಿಯು ಕಟ್ಟಿ–ಶೆಟ್ಟಿ ಕುಟುಂಬಗಳ ನಡುವಿನ ಆಡುಂಬೊಲವಾಗಿತ್ತು.

ಇದೀಗ ನಾಲ್ಕು ದಶಕಗಳ ನಂತರ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಹೊಸ ಮುಖ ಕಾಣುತ್ತಿದೆ. ಬಿಜೆಪಿಯಲ್ಲೂ ಶ್ರೀರಾಮುಲು ಅವರ ಮೂಲಕ ಹೊಸ ಅಭ್ಯರ್ಥಿಯನ್ನು ಕಾಣಲು ಮೂರು ದಶಕ ಸಂದಿದೆ.

ಬಾದಾಮಿಯಲ್ಲಿ ಶ್ರೀರಾಮುಲು ಸ್ಪರ್ಧೆ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಕ್ಷೇತ್ರದಲ್ಲಿಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಾಗೂ ಜಮಖಂಡಿಯಲ್ಲಿ ಉದ್ಯಮಿ ಸಂಗಮೇಶ ನಿರಾಣಿಗೆ ಸಿಗದ ಬಿಜೆಪಿ ಟಿಕೆಟ್ ಹಾಗೂ ಮುಧೋಳದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಕಾಂಗ್ರೆಸ್‌ ಉಮೇದುವಾರಿಕೆ ಕೈ ತಪ್ಪಿರುವುದು ನಾಯಕ, ಗಾಣಿಗ, ಪಂಚಮಸಾಲಿ ಹಾಗೂ ಮಾದಿಗ ಸಮುದಾಯದಲ್ಲಿ ಕದಲಿಕೆಗೆ ಕಾರಣವಾಗಿದೆ. ಇದು ಕಣದಲ್ಲಿರುವ ಘಟಾನುಘಟಿಗಳ ಭವಿಷ್ಯ ನಿರ್ಧಾರಕ್ಕೂ ಹಾದಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಕೃಷ್ಣಾ ಮೇಲ್ಡಂಡೆ ಯೋಜನೆ ಸಂತ್ರಸ್ತರ ಅಳಲು ಆಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿಯವರೆಗೂ ಯಾವುದೇ ಪಕ್ಷ ಮಾಡಿಲ್ಲ. ಜಾತಿ, ಹಣ, ತೋಳ್ಬಲದ ಅಬ್ಬರದ ನಡುವೆ ನೈಜ ಸಮಸ್ಯೆ ಗೌಣವಾಗಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಕೆಲವೇ ಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ. ಇದು ಪ್ರಜಾಪ್ರಭುತ್ವದ ವ್ಯಂಗ್ಯ.
-ನಾಗರಾಜ ಹೊಂಗಲ್, ಸಾಮಾಜಿಕ ಹೋರಾಟಗಾರ, ಇಳಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT