ಮಂಗಳವಾರ, ಆಗಸ್ಟ್ 3, 2021
20 °C

ಬೆಲ್ ಬಾಟಂ ಬೆಡಗಿಯ ಮನದ‌ ಮಾತು: ವಿಲನ್ ಪ್ರಿಯಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂದನವನದ ಬಹುಮುಖಿ ನಟಿ ಹರಿಪ್ರಿಯಾ ಅವರು ಈಚಿನ ದಿನಗಳಲ್ಲಿ ನಿಭಾಯಿಸಿದ ಬಹುತೇಕ ಪಾತ್ರಗಳು ಟಫ್ ಸ್ವಭಾವ ಹೊಂದಿರುವಂಥವು ಅಥವಾ ವೀಕ್ಷಕರ ಮೊಗದಲ್ಲಿ ಸಂತಸ ತರಿಸುವಂಥವು. ಅವರು ಅಳುಮುಂಜಿ ಪಾತ್ರಗಳನ್ನು ನಿಭಾಯಿಸಿದ್ದು ತೀರಾ ಕಡಿಮೆ.

ಏಕೆ ಹೀಗೆ? ಅವರಿಗೆ ಇಂತಹ ಪಾತ್ರಗಳು ಇಷ್ಟವಿಲ್ಲವೇ? ಈ ಪ್ರಶ್ನೆಗಳನ್ನು ಹರಿಪ್ರಿಯಾ ಎದುರು ಇರಿಸಿದರೆ, ಅವರು ನೀಡುವ ಉತ್ತರ: ‘ನಾನು ಅತ್ತರೆ ಅಂತಹ ಪಾತ್ರವನ್ನು ಜನ ಒಪ್ಪಿಕೊಳ್ಳುವುದಿಲ್ಲ’ ಎಂಬುದು!

‘ನನ್ನ ಪಾತ್ರದ ಜೊತೆಯಲ್ಲೇ ನನಗೆ ಸಿನಿಮಾದ ಕಥೆ ಕೂಡ ಬಹಳ ಮುಖ್ಯ. ಆ ಸಿನಿಮಾದ ಪಾತ್ರದಲ್ಲಿ ನನ್ನದು ಅಳುವ ಪಾತ್ರವೋ, ನಗುವ ಪಾತ್ರವೋ ಎಂಬುದರ ನೆಲೆಯಲ್ಲಿ ನಾನು ಆಲೋಚಿಸುವುದಿಲ್ಲ. ವೀಕ್ಷಕರು ಸಿನಿಮಾಗಳಿಂದ ನಿರೀಕ್ಷೆ ಮಾಡುವುದು ಖುಷಿಯನ್ನು, ಹೊಸ ಅನುಭವವನ್ನು. ಸಿನಿಮಾ ಮಂದಿರಕ್ಕೆ ಬರುವ ವೀಕ್ಷಕರನ್ನು ನಾನು ಅಳಿಸಿ ಕಳಿಸಬೇಕಾ?!’ ಎಂದು ಹರಿಪ್ರಿಯಾ ಅವರು ಪ್ರಶ್ನಿಸುತ್ತಾರೆ.

‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದ ಅವರು, ‘ನನ್ನನ್ನು ನೋಡಿದರೆ ನಗಿಸುವ ಪಾತ್ರ ಕೊಡಬೇಕು ಎಂದು ನಿರ್ದೇಶಕರಿಗೆ ಅನಿಸುತ್ತದೆ. ಚಿತ್ರಮಂದಿರಕ್ಕೆ ಇಂದು ಬರುತ್ತಿರುವವರಲ್ಲಿ ಯುವ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಖುಷಿ ಬೇಕು’ ಎಂದರು.

‘ನೆಗೆಟಿವ್ ಪಾತ್ರ ಬೇಕು’: ಹರಿಪ್ರಿಯಾ ಅವರು ‘ಸಂಹಾರ’ ಚಿತ್ರದಲ್ಲಿ ನಿಭಾಯಿಸಿದ ಪಾತ್ರವನ್ನು ಬಹಳ ಎಂಜಾಯ್ ಮಾಡಿದ್ದರಂತೆ. ಅದರಲ್ಲಿ ಅವರು ದ್ವಿತೀಯಾರ್ಧದಲ್ಲಿ ಸಂಪೂರ್ಣ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ‘ನಮ್ಮ ವ್ಯಕ್ತಿತ್ವದಂತೆ ಇಲ್ಲದ ಪಾತ್ರವನ್ನು ನಿಭಾಯಿಸುವುದು ನನಗೆ ಬಹಳ ಖುಷಿಕೊಡುವ ಕೆಲಸ. ಪಡಿಯಪ್ಪ ಸಿನಿಮಾದಲ್ಲಿ ರಮ್ಯಕೃಷ್ಣ ಅಭಿನಯಿಸಿದ್ದ ಪಾತ್ರವನ್ನು ನಾನು ನೋಡಿದ್ದೇನೆ. ಅಂಥದ್ದೊಂದು ಪಾತ್ರ ನನಗೂ ಸಿಗಬೇಕು ಎಂದು ಬಹಳ ಸಲ ಅನಿಸಿದ್ದಿದೆ’ ಎಂದು ನೆಗೆಟಿವ್ ಪಾತ್ರಗಳ ಬಗ್ಗೆ ತಮಗಿರುವ ಪ್ರೀತಿಯನ್ನು ವಿವರಿಸಿದರು.

‘ನಾನು ಪೂರ್ಣ ಪ್ರಮಾಣದಲ್ಲಿ ವಿಲನ್ ಆಗಿ ನಟಿಸುವುದನ್ನು ಕಾಯುತ್ತ ಇದ್ದೇನೆ. ಈಗ ಕೈಯಲ್ಲಿರುವ ಸಿನಿಮಾಗಳಲ್ಲಿ ಎಲ್ಲ ಪಾತ್ರಗಳೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿವೆ. ಆದರೆ, ಈ ಸಿನಿಮಾಗಳಲ್ಲಿ ವಿಲನ್ ಪಾತ್ರ ಸಿಕ್ಕಿಲ್ಲ. ಪೂರ್ಣ ಪ್ರಮಾಣದಲ್ಲಿ ವಿಲನ್ ಆಗಿ ನಟಿಸುವುದು ಸವಾಲಿನ ಕೆಲಸ. ಇತ್ತೀಚಿನ ತಲೆಮಾರಿನ ನಾಯಕಿಯರು ಯಾರೂ ಇಂಥದ್ದೊಂದು ಪಾತ್ರ ನಿಭಾಯಿಸಿದಂತೆ ಕಾಣುತ್ತಿಲ್ಲ. ಹಾಗಾಗಿ, ಅಂಥ ಪಾತ್ರ ನಾನು ನಿಭಾಯಿಸಬೇಕು ಎಂಬ ಆಸೆ ಇದೆ’ ಎಂದು ತಮ್ಮ ಆಸೆಯನ್ನು ತಿಳಿಸಿದರು.

ಕನ್ನಡದಲ್ಲಿ ಈಗ ಹೊಸಬರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೊಸ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ತಮಗೆ ಇಂಥದ್ದೊಂದು ಪಾತ್ರ ಖಂಡಿತ ಸಿಗಬಹುದು ಎಂಬುದು ಅವರಲ್ಲಿನ ನಂಬಿಕೆ.

ಹರಿಪ್ರಿಯಾ ಅವರಿಗೆ ವೆಬ್ ಸರಣಿಯೊಂದರಲ್ಲಿ ನಟಿಸುವ ಅವಕಾಶ ಬಂದಿತ್ತಂತೆ. ಆದರೆ, ಅದರ ಕಥೆ ಒಪ್ಪಿಗೆಯಾಗದ ಕಾರಣ ಅವರು ಆ ಅವಕಾಶ ತಿರಸ್ಕರಿಸಿದರಂತೆ. ‘ವೆಬ್ ಸರಣಿಗಳು ಬಹಳ ಚೆನ್ನಾಗಿ ಮೂಡಿಬರುತ್ತಿವೆ. ಅದು ನನಗೆ ಇಷ್ಟದ ಪ್ರಕಾರ ಕೂಡ’ ಎಂದರು.

ಯಾರಿಗಾಗಿ ನಟನೆ?: ‘ಪ್ರೇಕ್ಷಕರಿಗಾಗಿ ನಾವು ನಟಿಸಬೇಕು. ಅದೇ ಸರಿಯಾದದ್ದು. ನಮಗೆ ಬೇಕಾದಂತೆ ನಟಿಸಿದರೆ, ಆ ನಟನೆ ನಮ್ಮ ಪ್ರೇಕ್ಷಕರಿಗೆ ಇಷ್ಟವಾಗದೆ ಇರಬಹುದು’ ಎಂದು ಹೇಳುತ್ತಾರೆ ಹರಿಪ್ರಿಯಾ. ‘ಪ್ರೇಕ್ಷಕರಿಗೆ ಇಷ್ಟವಾಗುವುದನ್ನು ನಾವು ನಮ್ಮ ಶೈಲಿಯಲ್ಲಿ ನಟಿಸಬೇಕು. ಅವರಿಗೆ ಇಷ್ಟವಾಗುವಂತೆ ನಟಿಸಿಯೂ ನಾವು ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಬಹುದು’ ಎನ್ನುವುದು ಅವರ ನಿಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು