ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ಸರಿಯಿತ್ತು, ಈಗ ಹಾಳಾಯ್ತು ಎಂದರೆ ಹೇಗೆ: ನಟಿ ಹರ್ಷಿಕಾ ಪೂಣಚ್ಚ ಪ್ರಶ್ನೆ

ಅತ್ಯಾಚಾರ, ಲೈಂಗಿಕ ಶೋಷಣೆಗೂ ಹೊಸ ವ್ಯಾಖ್ಯಾನ
Last Updated 23 ಅಕ್ಟೋಬರ್ 2018, 11:02 IST
ಅಕ್ಷರ ಗಾತ್ರ

ಚಂದನವನದಲ್ಲಿ ಸಂಚಲನ ಹುಟ್ಟಿಸಿರುವ #MeToo ಅಭಿಯಾನ ಕೇವಲ ‘ಜನಪ್ರಿಯತೆಯ ಸ್ಟಂಟ್’ ಎಂದು ನಟಿ ಹರ್ಷಿಕಾ ಪೂಣಚ್ಚ ಟೀಕಿಸಿದ್ದಾರೆ. ಮಂಗಳವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಹರ್ಷಿಕಾ, ‘ನಮ್ಮ ಮಿತಿಯಲ್ಲಿ ನಾವಿದ್ದರೆ ಯಾರೂ ನಮ್ಮನ್ನು ಏನೂ ಮಾಡಲಾರರು’ ಎಂದು ಹೇಳಿದ್ದಾರೆ. ‘ನಿಮಗೆ ಇಷ್ಟವಿಲ್ಲದ ಕೆಲಸ ಮಾಡಲು ಒತ್ತಾಯಿಸಿ ಯಾರೊಬ್ಬರೂ ನಿಮ್ಮ ಮೇಲೆ ಅತ್ಯಾಚಾರ ಎಸಗಲು ಅಥವಾ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ. ಎರಡೂ ಕೈ ಸೇರಿದರೆ ತಾನೆ ಚಪ್ಪಾಳೆ ಆಗುವುದು’ ಎಂದು ಸಿನಿ ಉದ್ಯಮದಲ್ಲಿ ಚರ್ಚೆಯಾಗುತ್ತಿರುವ ಲೈಂಗಿಕ ಶೋಷಣೆಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ.

‘ಜೈಕರ್ನಾಟಕ’ ಎಂದು ಕೊನೆಗೊಳ್ಳುವ ಅವರ ಇಂಗ್ಲಿಷ್ ಪೋಸ್ಟ್‌ನ ಕನ್ನಡ ಅನುವಾದ ಇಲ್ಲಿದೆ...

***

ಹಲವು ವರ್ಷಗಳಿಂದ ಸಿನಿಮಾ ಉದ್ಯಮದಲ್ಲಿರುವ ನಾನು ಬಹಳ ಹತ್ತಿರದಿಂದ ಎಲ್ಲವನ್ನೂ ಗಮನಿಸಿದ್ದೇನೆ. ಮಹಿಳೆಯರಿಗೆ ಅಗೌರವ ತೋರುವುದು ಅಥವಾ ಅವರ ಇಚ್ಛೆಗೆ ವಿರುದ್ಧವಾದ ಕೆಲಸ ಮಾಡಿಸುವುದು ನನಗೆ ಇಷ್ಟವಾಗುವುದಿಲ್ಲ.ಆದರೆ ಕೆಲ ನಟಿಯರು ‘ನಾನೊಂದು ಹೆಣ್ಣು’ ಎನ್ನುವುದನ್ನೇ ಆಯುಧವಾಗಿ ಬಳಸಿಕೊಂಡು ಜನಪ್ರಿಯತೆ ಗಿಟ್ಟಿಸಿಕೊಳ್ಳುವುದನ್ನು ನೋಡಿದಾಗ ಅಸಹ್ಯ ಎನಿಸುತ್ತದೆ. ಇವರು ಜನಪ್ರಿಯತೆ ಪಡೆದುಕೊಳ್ಳಲು ಒಬ್ಬ ವ್ಯಕ್ತಿಯ ಕುಟುಂಬ ಹಾಳು ಮಾಡುವುದು, ಅವನ ಹೆಂಡತಿ ಮಕ್ಕಳಿಗೆ ಅವಮಾನ ಮಾಡುವುದು, ವರ್ಷಗಟ್ಟಲೆ ಪರಿಶ್ರಮದಿಂದ ಕಟ್ಟಿಕೊಂಡ ವೃತ್ತಿಬದುಕನ್ನು ಕೇವಲ ಒಂದು ಹೇಳಿಕೆಯಿಂದ ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ.

ಈಗ ನೇರ ವಿಷಯಕ್ಕೆ ಬರ್ತೀನಿ.ನಾನು ಸಿನಿಮಾ ಉದ್ಯಮದಲ್ಲಿ 10 ವರ್ಷಗಳಿಂದ ಇದ್ದೇನೆ. ಇಲ್ಲಿನ ಎಲ್ಲ ವಿದ್ಯಮಾನಗಳನ್ನು ಸ್ವಂತ ಕಣ್ಣುಗಳಿಂದ ನೋಡಿದ್ದೇನೆ.ಚಳವಳಿಗಳಲ್ಲಿ ಗುರುತಿಸಿಕೊಂಡಿರುವ ಎನ್ನಲಾದ ಈ ನಟಿಯರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ತಮಗೆ ಬೇಕಿರುವುದನ್ನು ದಕ್ಕಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಒಳ್ಳೇ ಚಿತ್ರಗಳಲ್ಲಿ ಅವಕಾಶ, ಹಣ, ಪ್ರತಿಷ್ಠಿತರ ಸಂಪರ್ಕ, ಪ್ರಯಾಣ, ಐಷಾರಾಮಿ ಜೀವನದ ಆಸೆಗಳಿಂದ ತುಡಿಯುತ್ತಿರುತ್ತಾರೆ. ಈಗ ಯಾರನ್ನು ಅವರು ತಮ್ಮ ಸ್ವಾರ್ಥಕ್ಕಾಗಿ ದೂರುತ್ತಿದ್ದಾರೆಯೋ, ಆಗ ಅವರಿಗೆ ತಮ್ಮೊಡನೆ ಬೇಕುಬೇಕಾದಂತೆ ವರ್ತಿಸಲು ಸ್ವಾತಂತ್ರ್ಯ ಕೊಟ್ಟಿರುತ್ತಾರೆ.

ವೃತ್ತಿಯಲ್ಲಿ ಒಂದು ಹಂತ ಮುಟ್ಟಿದ ನಂತರ ಹಳೆಯದ್ದು ಅಪಥ್ಯ ಎನಿಸುತ್ತೆ.ಒಂದು ಕಾಲದಲ್ಲಿ ನೋಡಿದ ತಕ್ಷಣ ಮುಗುಳ್ನಗುತ್ತಿದ್ದ, ಮತ್ತು ಕೈಲಿಕೈಹಿಡಿದು ವಾಕಿಂಗ್ ಮಾಡುತ್ತಿದ್ದ ನಟರನ್ನೇ ದೂರಲು ಆರಂಭಿಸುತ್ತಾರೆ.ಮಹಾನ್ ಚಳವಳಿಕಾರ್ತಿಯರು ಎನ್ನಿಸಿಕೊಂಡ ಹಲವು ನಟಿಯರು ಗಾಂಜಾ ಸೇದುವುದನ್ನು,ಖ್ಯಾತ ಪುರುಷರ ಮೈಮೇಲೆ ಬೇಕುಬೇಕಾಗಿಯೇ ಬೀಳುವುದನ್ನು ಕಣ್ಣಾರೆ ಕಂಡಿದ್ದೇನೆ. ಮಲೇಷ್ಯಾ, ದುಬೈ, ಸಿಂಗಪುರ ಸೇರಿದಂತೆ ಹಲವೆಡೆ ಇಂಥ ನಟಿಯರು ಇತರ ಭಾಷೆಗಳ ಸಿನಿಮಾ ನಟರು, ನಿರ್ಮಾಪಕರು, ರಿಯಲ್‌ ಎಸ್ಟೇಟ್ ಉದ್ಯಮಿಗಳ ಜೊತೆಗೆ ಆಪ್ತವಾಗಿ ನಡೆದುಕೊಂಡಿದ್ದನ್ನೂ ಗಮನಿಸಿದ್ದೇನೆ. ಅವರು ಎಷ್ಟೋ ನಡವಳಿಕೆಗಳನ್ನು ಬರೆಯಲೂ ನನ್ನಿಂದ ಸಾಧ್ಯವಿಲ್ಲ.

ನಿಮಗೇನು ಬೇಕು ಅದನ್ನು ದಕ್ಕಿಸಿಕೊಳ್ಳುವವರೆಗೆ, ಸಿನಿಮಾಗಳಿಂದ ಮನೆಮಾತಾಗುವವರೆಗೆ ನಿಮಗೆ ಇಂಥದ್ದರ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ ಈಗ ಬೇಕಾದ್ದು ದಕ್ಕಿ ಆಗಿದೆ. ಹೀಗಾಗಿ ನಿಮ್ಮನ್ನು ಎತ್ತರಕ್ಕೆ ಏರಿಸಿದ ಪುರುಷರ ವಿರುದ್ಧವೇನಾನಾ ಆರೋಪಗಳನ್ನು ಮಾಡುತ್ತಿದ್ದೀರಿ.10, 5, 2 ವರ್ಷಗಳ ಹಿಂದೆ ಎಲ್ಲಿ ಹೋಗಿತ್ತು ನಿಮ್ಮ #MeToo ಭಾವನೆಗಳು. ಓಹ್! ಆಗ ಇದೆಲ್ಲವೂ ನಿಮಗೆ ಪರವಾಗಿಲ್ಲ ಎನಿಸಿರಬಹುದು. ಆದರೆ ಈಗ ಮಾತ್ರ ನೀವು ಇಂಥ ದೈತ್ಯ ಪುರುಷರಿಂದ ಜಗತ್ತಿನಲ್ಲಿರುವ ಎಲ್ಲ ಮಹಿಳೆಯರನ್ನೂ ಕಾಪಾಡಬೇಕು ಎಂದು ಮುಂದೆ ಬಂದಿದ್ದೀರಿ. ಇದು ಹುಚ್ಚುತನ, ಅತಿ ಹುಚ್ಚುತನ.

ನಿಮಗೆ ಯಾವುದೇ ಸಿನಿ ಉದ್ಯಮದ ಸೂಪರ್‌ಸ್ಟಾರ್‌ಗಳ ಹೆಸರು ಹೇಳುವ ಧೈರ್ಯವಿದೆಯೇ? ಯಾಕೆ ಯಾವುದೇ ಸಿನಿ ಉದ್ಯಮದ ಸೂಪರ್‌ಸ್ಟಾರ್ ನಟಿಯರು ಇಂಥ ಆರೋಪಗಳನ್ನು ಮಾಡುತ್ತಿಲ್ಲ?ನನಗೆ ಗೊತ್ತಿರುವ ಒಬ್ಬ ಖ್ಯಾತ ನಿರ್ಮಾಪಕರು ಒಂದು ವಿಡಿಯೊ ತೋರಿಸಿದ್ದರು. ಗಾಂಜಾ ಸೇದುತ್ತಿದ್ದ ಕೆಲ MeToo ನಟಿಯರು ಖ್ಯಾತ ವ್ಯಕ್ತಿಯೊಬ್ಬನ ಭುಜದ ಮೇಲೆ ಒರಗಿ ಪ್ರಸಿದ್ಧರಾದವರ ಹೆಸರನ್ನು ಹೇಗೆ ಹಾಳುಮಾಡಬಹುದು ಎಂದು ಚರ್ಚಿಸುತ್ತಿದ್ದ ದೃಶ್ಯ ಅದರಲ್ಲಿತ್ತು. ನಾನು ಇನ್ನೂ ಒಂದು ವಿಡಿಯೊ ನೋಡಿದ್ದೆ. ಪ್ರಸಿದ್ಧ ನಟನೊಬ್ಬ ಆ ವಿಡಿಯೊ ಶೂಟ್ ಮಾಡಿದ್ದ. ಕಾರಿನಲ್ಲಿದ್ದ ಅರೆಬೆತ್ತಲೆ ನಟಿ, ‘ನಿನ್ನಮುಂದಿನ ಚಿತ್ರದಲ್ಲಿಯೂ ನಾನಿರಬೇಕು, ಸರಿನಾ?’ ಎಂದು ಕೇಳುತ್ತಿದ್ದಳು.

ಇದು ಇರಬೇಕಾದುದು ಹೀಗಲ್ಲ, ಸರಿತಾನೆ?

ನಾನು ಓರ್ವ ನಟಿ. ಕೆಲವರು ನನ್ನಿಂದಲೂ ಅನುಕೂಲಗಳನ್ನು ಪಡೆದುಕೊಳ್ಳಲು ಯತ್ನಿಸಿದ್ದು ಉಂಟು. ಅಂಥ ಸಂದರ್ಭಗಳಲ್ಲಿ ನಾನು ತುಂಬಾ ಸಭ್ಯವಾಗಿ ಅವರ ಕೋರಿಕೆಗಳನ್ನು ನಿರಾಕರಿಸಿದ್ದೇನೆ. ನನ್ನ ಆದ್ಯತೆಗಳು ಮತ್ತು ನಾನು ನಂಬಿರುವ ಮೌಲ್ಯಗಳನ್ನು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ.ಬಣ್ಣದ ಲೋಕಕ್ಕೆ ಬಂದು ಹತ್ತು ವರ್ಷಗಳಾದ ನಂತರವೂ ಯಾರೂ ನನ್ನತ್ತ ಬೊಟ್ಟು ಮಾಡಿ ತೋರುವಂತೆ ನಡೆದುಕೊಂಡಿಲ್ಲ. ಶುದ್ಧವಾಗಿ ಉಳಿದುಕೊಂಡಿದ್ದೇನೆ, ಕೆಲಸವನ್ನೂ ಅದೇ ರೀತಿ ಮಾಡಿದ್ದೇನೆ. ಇದೇ ಕಾರಣಕ್ಕೆ ನಾನು ಸೂಪರ್‌ಸ್ಟಾರ್‌ಗಳ ಜೊತೆಗೆ ನಟಿಸುವ ಹಲವು ಅವಕಾಶಗಳನ್ನು ಕಳೆದುಕೊಂಡಿರಬಹುದು. ಆದರೆ ನಾನು ತುಂಬಾ ಖುಷಿಯ ವ್ಯಕ್ತಿಯಾಗಿ ಬದುಕಿದ್ದೇನೆ. ವಿವಿಧ ಭಾಷೆಗಳ ಸಿನಿ ಉದ್ಯಮಿಗಳೊಂದಿಗೆ ಉತ್ತಮ ಸಂಬಂಧವನ್ನೂ ಕಾಪಾಡಿಕೊಂಡಿದ್ದೇನೆ.

ನನ್ನ ಮಾತನ್ನು ಕೆಲವರು ವಿರೋಧಿಸಬಹುದು. ಆದರೆ ಇದು ವಾಸ್ತವ ಮತ್ತು ಇದು ಸದಾ ಕಾಲಕ್ಕೂ ವಾಸ್ತವವಾಗಿಯೇ ಉಳಿಯುತ್ತದೆ.ಉತ್ತಮ ಅವಕಾಶದ ಆಮಿಷವೊಡ್ಡಿ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುವ ಕೆಟ್ಟ ಪುರುಷರು ಇರಬಹುದು. ಆದರೆ ನಿಮಗೆ ಇಷ್ಟವಿಲ್ಲದ ಕೆಲಸ ಮಾಡಲು ಒತ್ತಾಯಿಸಿ ಯಾರೊಬ್ಬರೂ ನಿಮ್ಮ ಮೇಲೆ ಅತ್ಯಾಚಾರ ಎಸಗಲು ಅಥವಾ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ.

ಗಟ್ಟಿದನಿಯಲ್ಲಿ ‘ಇಲ್ಲ’ ಎನ್ನುವ ಅವಕಾಶ ನಿಮಗೆ ಯಾವಾಗಲೂ ಇದ್ದೇ ಇರುತ್ತದೆ. ಎರಡೂ ಕೈ ಸೇರಿದರೆ ತಾನೆ ಚಪ್ಪಾಳೆ ಆಗುವುದು. ಎಲ್ಲ ಚಳವಳಿಕಾರ್ತಿ ನಟಿಯರಿಗೆ, ಅಷ್ಟೇಕೆ ಸಿನಿರಂಗದಲ್ಲಿರುವ ಎಲ್ಲ ಮಹಿಳೆಯರಿಗೆ ನಾನು ಹೇಳಲು ಬಯಸುವುದು ಇಷ್ಟೇ. #BeReal ವಾಸ್ತವ ಅರ್ಥವಾಡಿಕೊಳ್ಳಿ. ಪುರುಷರು #WeToo ಅಭಿಯಾನ ಆರಂಭಿಸಲು ಇದು ಸರಿಯಾದ ಕಾಲ ಎಂದು ನನಗೆ ಅನ್ನಿಸುತ್ತದೆ. ತಮ್ಮ ಸ್ವಾರ್ಥಕ್ಕಾಗಿ ಪುರುಷರನ್ನು ಬಳಸಿಕೊಳ್ಳುವ ಈ ನಟಿಯರು ಒಂದು ಹಂತ ಮುಟ್ಟಿದ ಮೇಲೆ, ಹೆಸರು–ಹಣ ಗಳಿಸಿದ ಮೇಲೆ ಏರಿದ ಏಣಿಯನ್ನು ಒದ್ದುಬಿಡುತ್ತಾರೆ.

ನನ್ನ ಜೊತೆಯ ನಟಿಯರ ಬಗ್ಗೆ ಮಾತನಾಡುವುದು ಸರಿಯೇ ತಪ್ಪೇ ಎಂದು ಯೋಚಿಸುತ್ತಾ ಇಷ್ಟು ದಿನ ಸುಮ್ಮನಿದ್ದೆ. ಆದರೆ ನಮಗೆ ಅನ್ನಕೊಟ್ಟ ಉದ್ಯಮದ ಬಗ್ಗೆ ಮತ್ತು ಇತರ ನಟಿಯರ ಬಗ್ಗೆ ಅಣಕ ಮಾಡುವುದು ನನಗೆ ಸರಿಕಾಣುವುದಿಲ್ಲ. ಜೈ ಕರ್ನಾಟಕ.

ಆರು ತಿಂಗಳ ಹಿಂದೆ ಹರ್ಷಿಕಾ ಹೀಗೆ ಹೇಳಿದ್ದರು

ಬಾಲಿವುಡ್‌ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಆದ್ದರಿಂದಲೇ ನಾನು ಎರಡು ಬಾಲಿವುಡ್ ಸಿನಿಮಾಗಳ ಅವಕಾಶವನ್ನು ಕೈಬಿಟ್ಟೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದರು. ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಈ ಬಗ್ಗೆ ಮಾತನಾಡಿದ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. 15ನೇ ವಯಸ್ಸಿನಿಂದ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ನನಗೆ ಈ ರೀತಿಯ ಅನುಭವಾಗಿಲ್ಲ. ಆದರೆ, ಬಾಲಿವುಡ್ ನಲ್ಲಿ ನನಗಾದ ಈ ಕಹಿ ಅನುಭವದಿಂದ ನಾನು ನೊಂದಿದ್ದೇನೆ ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT