ಮಂಗಳವಾರ, ಡಿಸೆಂಬರ್ 6, 2022
24 °C

‘ಸಾವರ್ಕರ್’ ಚಿತ್ರದೊಂದಿಗೆ ನಿರ್ದೇಶನಕ್ಕಿಳಿದ ರಣದೀ‍ಪ್‌

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸಾವರ್ಕರ್‌

ಸದ್ಯ ಬಾಲಿವುಡ್‌ನಲ್ಲಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳ ಟ್ರೆಂಡ್‌. ಆ ಪಟ್ಟಿಗೆ ಸಾವರ್ಕರ್ ಸೇರಿದ್ದು ಗೊತ್ತೇ ಇದೆ. ‘ಸರಬ್ಜಿತ್‌’ ಬಳಿಕ ಮತ್ತೆ ಸಾವರ್ಕರ್‌ ಬದುಕು ‘ಸ್ವಾತಂತ್ರ್ಯ ವೀರ ಸಾವರ್ಕರ್’ಚಿತ್ರವಾಗಿ ಬರುತ್ತಿರುವುದು ಸುದ್ದಿಯಾಗಿತ್ತು. ಚಿತ್ರಕ್ಕೆ ನಾಯಕರಾಗಿದ್ದ ಬಾಲಿವುಡ್‌ನ ಖ್ಯಾತ ನಟ ರಣದೀಪ್‌ ಹೂಡ, ಈಗ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಹೂಡ, ಕ್ಲಾಪ್‌ ಬೋರ್ಡ್‌ನೊಂದಿಗೆ ಚಿತ್ರೀಕರಣ ಆರಂಭಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಜೊತೆಗೆ ನಿರ್ದೇಶನಕ್ಕಿಳಿದಿರುವುದನ್ನು ಅಧಿಕೃತಪಡಿಸಿದ್ದಾರೆ.

‘ಲೈಟ್ಸ್‌, ಕ್ಯಾಮೆರ, ಇತಿಹಾಸ’ ನನ್ನ ಮುಂದಿನ ಚಿತ್ರದ ಚಿತ್ರೀಕರಣ ಪ್ರಾರಂಭ ಎಂದು ನಿರ್ಮಾಪಕರಾದ ಆನಂದ್‌ ಪಂಡಿತ್‌, ಸಂದೀಪ್‌ ಸಿಂಗ್‌ ಜೊತೆಗೆ ಚಿತ್ರಕ್ಕೆ ಕ್ಲಾಪ್ ಮಾಡಿದ ಫೋಟೊ ಹಂಚಿಕೊಂಡಿದ್ದಾರೆ. ಸಾರ್ವಕರ್‌ 140ನೇ ಜನ್ಮದಿನವಾದ ಮೇ.26,2023ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕಂಗನಾ ರನೌತ್‌ ಅವರ ‘ಮಣಿಕರ್ಣಿಕಾ’, ವಿಕ್ಕಿ ಕೌಶಲ್‌ ಅವರ ‘ಸರ್ದಾರ್‌ ಉದ್ದಮ್‌’ ಬಳಿಕ ಇದೀಗ ಸಾವರ್ಕರ್‌ ಜೀವನ ಚರಿತ್ರೆ ಸೆಟ್ಟೇರಿದೆ.

ಮಾನ್ಸೂನ್‌ ವೆಡ್ಡಿಂಗ್‌, ಕಾಕ್‌ಟೇಲ್‌, ಕಿಕ್‌ ಮೊದಲಾದ ಸಿನಿಮಾ ಖ್ಯಾತಿಯ ರಣದೀಪ್ ಹೂಡ ಸಾವರ್ಕರ್ ಆಗಿ ನಟಿಸಲಿದ್ದು, ಮಹೇಶ್ ಮಾಂಜ್ರೇಕರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಈಗ ಹೂಡ ಅವರೇ ತಮ್ಮ ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.

‘‘ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಹಳಷ್ಟು ಜನರು ಕಾರಣರಾಗಿದ್ದಾರೆ. ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳು ಹಾಗೂ ಚರ್ಚೆಗಳು ನಡೆದಿವೆ. ಅವರ ಕತೆಯನ್ನು ಜನರಿಗೆ ಹೇಳಬೇಕು. ಇದಕ್ಕಾಗಿ ‘ಸರಬ್ಜಿತ್’ ನಂತರ ಸಂದೀಪ್ ಅವರೊಂದಿಗೆ ಸೇರಿ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗಿದೆ’’ ಎಂದು ಈ ಹಿಂದೆ ರಣದೀಪ್ ಹೇಳಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು