ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದು ಮಿನಿಮಯ್ ಗ್ಯಾರಂಟಿ

Last Updated 15 ನವೆಂಬರ್ 2018, 19:31 IST
ಅಕ್ಷರ ಗಾತ್ರ

ನಾಲ್ಕು ತಲೆಮಾರಿನ ಕನ್ನಡದ ಪ್ರೇಕ್ಷಕರಿಗೆ ನವರಸ ಉಣಬಡಿಸಿದ ಕಲಾವಿದ, ವಿಶಿಷ್ಟ ಹಾವಭಾವದ ಮೂಲಕ ಜನರ ಮನಗೆದ್ದ ಕಾಮಿಡಿ ನಾಯಕ ನಟ, ರಾಜಕಾರಣಿ– ಜಗ್ಗೇಶ್‌ ಬಗ್ಗೆ ಹೇಳಲು ಹೊರಟರೆ ಅವರ ವ್ಯಕ್ತಿತ್ವದ ಹಲವು ಮುಖಗಳು ಮುನ್ನೆಲೆಗೆ ಬರುತ್ತವೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ಮನೆಗೆ ಸಂದರ್ಶನಕ್ಕೆಂದು ಹೋದಾಗ ಮೊದಲಿಗೆ ಕಾಣಿಸಿದ್ದು ಅಲ್ಲಿನ ಆಧ್ಯಾತ್ಮಿಕ ಪರಿಸರ. ‘ರಣಧೀರ’ ಚಿತ್ರೀಕರಣದ ವೇಳೆ ಅವರ ತಾಯಿ ಕೊಡಿಸಿದ ಬೈಕ್‌ ತೋರಿಸುತ್ತಾ ಅಂದಿನ ದಿನಗಳನ್ನು ಮೆಲುಕು ಹಾಕತೊಡಗಿದರು. ಪಕ್ಕದಲ್ಲಿಯೇ ಇದ್ದ ತನ್ನ ಪ್ರೀತಿಯ ನಾಯಿಗಳ ಸಮಾಧಿ ತೋರಿಸುತ್ತಾ ಭಾವುಕರಾದರು. ಈ ಶುಕ್ರವಾರ ತೆರೆಕಾಣುತ್ತಿರುವ ‘8ಎಂಎಂ’ ಚಿತ್ರದ ಬಗ್ಗೆ ಕೇಳಿದಾಗಲೇ ಅವರು ಭಾವುಕ ಪ್ರಪಂಚದಿಂದ ಹೊರಬಂದರು.

* ನವರಸ ನಾಯಕನ ಕೈಯಲ್ಲಿ ಗನ್‌ ಬಂದಿದ್ದು ಏಕೆ?

ಕಲಾವಿದನಿಗೆ ತನ್ನ ಏಕತಾನತೆಯ ಬದುಕಿನಲ್ಲಿ ಬದಲಾವಣೆ ಬೇಕು ಅನಿಸುತ್ತದೆ. ಅವತ್ತಿನ ದಿನಕ್ಕೆ ನಾನು ಮಾಡಿದ ಚಿತ್ರಗಳು ಚೆನ್ನಾಗಿದ್ದವು. ಐವತ್ತು ಪ್ಲಸ್‌ ಆದ ಮೇಲೆ ವಿಭಿನ್ನವಾದ ಪಾತ್ರ ಮಾಡಬೇಕೆಂಬ ಆಸೆ ಕಾಡುತ್ತೆ. ಅಮಿತಾಭ್‌ ಬಚ್ಚನ್‌, ರಜನೀಕಾಂತ್‌, ರಾಜ್‌ಕುಮಾರ್‌ಗೂ ಇದು ಕಾಡಿತ್ತು. ಬೇರೆ ತರಹದ ಪಾತ್ರಗಳು ಮಾಡಬೇಕೆಂದು ಹಸಿವಾದಾಗಲೇ ರಾಜ್‌ಕುಮಾರ್‌ ಅವರು ಅಂದಿನ ಕಾಲದ ರೈಟರ್‌ಗಳೊಟ್ಟಿಗೆ ಚರ್ಚಿಸಿದ್ದರು. ಆಗಲೇ ‘ವಸಂತಗೀತ’ದಂತಹ ಚಿತ್ರದಲ್ಲಿ ಅವರು ನಟಿಸಿದ್ದು.

ಒಂದೇ ತರಹದ ಪಾತ್ರದಲ್ಲಿ ಒಬ್ಬ ನಟನನ್ನು ನೋಡಿದ ಪ್ರೇಕ್ಷಕರು ಬದಲಾವಣೆ ಬಯಸುತ್ತಾರೆ. ಅದನ್ನು ಕಲಾವಿದ ಕೊಟ್ಟರೆ ಅವರು ಸಂತೃಪ್ತರಾಗುತ್ತಾರೆ. ನಾನು ಕೂಡ ಅದಕ್ಕಾಗಿ ಕಾಯುತ್ತಿದ್ದೇನೆ. ‘ನೀರ್‌ದೋಸೆ’ ಚಿತ್ರ ₹ 14 ಕೋಟಿಯಷ್ಟು ವ್ಯವಹಾರ ನಡೆಸಿತು. ಅದನ್ನು ಜನರು ಪ್ರೀತಿಯಿಂದ ಸ್ವೀಕರಿಸಿದರು. ಹಾಗಾಗಿ, ಭಿನ್ನವಾದ ಪ್ರಯಾಣ ಮಾಡುವುದೇ ಸೇಫ್‌ ಅನಿಸುತ್ತೆ. ಅದಕ್ಕಾಗಿಯೇ ಈ ಚಿತ್ರ ಒಪ್ಪಿಕೊಂಡೆ.

* ‘8ಎಂಎಂ’ ಚಿತ್ರವನ್ನು ಜನರು ಏಕೆ ನೋಡಬೇಕು?

ನನಗೆ ಭಿನ್ನವಾದ ಚಿತ್ರದಲ್ಲಿ ನಟಿಸುವ ಆಸೆಯಿತ್ತು. ಹಾಗಾಗಿಯೇ, ಎರಡೂವರೆ ವರ್ಷದಿಂದ ಹನ್ನೆರಡು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದರೂ ಒಪ್ಪಿಕೊಳ್ಳಲಿಲ್ಲ. ಇದರಲ್ಲಿ ನೆಗೆಟಿವ್‌ ಶೇಡ್‌ ಇರುವವರು ಪಾಸಿಟಿವ್‌ ಪಾತ್ರ ಮಾಡುತ್ತಾರೆ. ಪಾಸಿಟಿವ್‌ ಪಾತ್ರ ಮಾಡಿರುವವರು ನೆಗೆಟಿವ್‌ ಪಾತ್ರ ಮಾಡಬೇಕಾಗುತ್ತದೆ. ನಿರ್ದೇಶಕರು, ನಿರ್ಮಾಪಕರು ಸ್ಕ್ರಿಪ್ಟ್‌ ಕಳುಹಿಸಿದಾಗ ಇದನ್ನು ಜಗ್ಗೇಶ್‌ ಒಪ್ಪಿಕೊಳ್ಳುವುದಿಲ್ಲ ಎಂದುಕೊಂಡಿದ್ದರಂತೆ.

ಪೊಲೀಸ್‌ ಇಲಾಖೆ ಮತ್ತು ಆತನ(ಜಗ್ಗೇಶ್‌) ನಡುವಿನ ಕಚ್ಚಾಮುಚ್ಚಾಲೆಯ ಕಥೆ ಇದು. ಕಟ್ಟಕಡೆಯವರೆಗೂ ಆತ ಅ‍ಪರಾಧ ಕೃತ್ಯದಲ್ಲಿ ಏಕೆ ಭಾಗಿಯಾಗುತ್ತಾನೆ ಎಂಬುದನ್ನು ತೋರಿಸುವುದಿಲ್ಲ. ಕೊನೆಯ ಎರಡು ದೃಶ್ಯಗಳೇ ಚಿತ್ರದ ಜೀವಾಳ. ಆ ದೃಶ್ಯಗಳನ್ನು ಒಂದೇ ಟೇಕ್‌ನಲ್ಲಿ ಮುಗಿಸಿದೆ. ಕ್ಲೈಮ್ಯಾಕ್ಸ್‌ನಲ್ಲಿ ಆತನ ನೆಗೆಟಿವ್‌ ಶೇಡ್‌ ಕೊಚ್ಚಿಹೋಗುತ್ತದೆ. ಆತನ ಬಗ್ಗೆ ನೋಡುಗರಲ್ಲಿ ಒಳ್ಳೆಯ ಭಾವನ ಮೂಡುತ್ತದೆ. ನನ್ನ ವಯೋಮಾನದ ತಂದೆಯರಿಗೆ, ಹಿರಿಯರಿಗೆ ಪಾತ್ರ ಇಷ್ಟವಾಗುತ್ತದೆ.

ನನ್ನ ವೃತ್ತಿಬದುಕಿನ ಮೋಸ್ಟ್‌ ಕಾನ್ಫಿಡೆಂಟ್‌ ರೋಲ್‌ ಇದು. ನನ್ನ ಬೆಸ್ಟ್ ಜರ್ನಿಯೂ ಹೌದು. ಇದು ಜನರಿಗೆ ತಲುಪಬೇಕು ಎನ್ನುವುದೇ ನನ್ನಾಸೆ. ಇಲ್ಲಿ ಕಾಣುವ ಜಗ್ಗೇಶ್‌ ಬೇರೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ನಲವತ್ತಕ್ಕೂ ಹೆಚ್ಚು ಹೊಸ ಸೀನ್‌ಗಳನ್ನು ಅಳವಡಿಸಿದ್ದೇವೆ.

* ಜಗ್ಗೇಶ್‌ ಆ್ಯಕ್ಷನ್‌ ಹೀರೊ ಆಗುವುದು ಯಾವಾಗ?

ಆ್ಯಕ್ಷನ್‌ ಚಿತ್ರದ ಬಜೆಟ್‌ ಜಾಸ್ತಿ. ನಾನು ನಿರ್ಮಾಪಕರನ್ನು ಸೇಫ್‌ ಆಗಿ ಕರೆದುಕೊಂಡು ಹೋಗುವ ಆರ್ಟಿಸ್ಟ್‌. ಹಾಗಾಗಿಯೇ, ನನ್ನನ್ನು ‘ಎಂಜಿ ಹೀರೊ’ ಎನ್ನುತ್ತಾರೆ(ಮಿನಿಮಯ್ ಗ್ಯಾರಂಟಿ). ಹಾಕಿದ ಬಂಡವಾಳ ವಾಪಸ್‌ ಬರುತ್ತದೆ ಎನ್ನುವುದು ನಿರ್ಮಾಪಕರ ನಂಬಿಕೆ. ಇಂದಿಗೂ ಆ ಮಾತನ್ನು ಸುಳ್ಳು ಮಾಡಿಲ್ಲ. ಈಗಾಗಲೇ, ಈ ಚಿತ್ರದ ಟಿ.ವಿ. ಹಕ್ಕುಗಳೂ ಒಳ್ಳೆಯ ದರಕ್ಕೆ ಸೇಲ್‌ ಆಗಿದೆ. ಅಭಿಮಾನಿಗಳು ಚಪ್ಪಾಳೆ ಹೊಡೆದರೆ ಮೂರೇ ದಿನಕ್ಕೆ ನಿರ್ಮಾಪಕರು ಸೇಫ್‌ ಆಗುತ್ತಾರೆ. ನಾನು ತುಂಬಾ ಲೆಕ್ಕಾಚಾರದ ಮನುಷ್ಯ. ₹ 10 ಕೋಟಿ ಹೂಡಿ ಚಿತ್ರ ಮಾಡಿ ಎಂದು ಹೇಳುವುದಿಲ್ಲ. ನನ್ನ ಚಿತ್ರಕ್ಕೆ ₹ 4ರಿಂದ 5 ಕೋಟಿ ವ್ಯಯಿಸಿದರೆ ಸೇಫ್‌ ಆಗುತ್ತೇವೆ. ನಾನು ಇಲ್ಲಿಯವರೆಗೆ 29 ಚಿತ್ರ ನಿರ್ಮಿಸಿರುವೆ. 40 ಚಿತ್ರಗಳ ವಿತರಣೆ ಮಾಡಿರುವೆ. ಶೋಕಿಗಾಗಿ ಸಿನಿಮಾ ಮಾಡಿಲ್ಲ. ಹಾಗಾಗಿ, ನಷ್ಟ ಅನುಭವಿಸಿಲ್ಲ.

* ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸುವುದು ಯಾವಾಗ?

ನನ್ನ ಮಗನಿಗಾಗಿ ಒಂದು ಕಥೆ ಸಿದ್ಧಪಡಿಸಿಕೊಂಡಿದ್ದೇನೆ. ಯುವಜನರಿಗೆ ಇಷ್ಟವಾಗುವ ಕಥೆ ಇದು. ಅವನಿಗಾಗಿ ಮತ್ತೆ ನಿರ್ದೇಶನ ಮಾಡುತ್ತಿದ್ದೇನೆ.

* ನಿಮ್ಮ ಆತ್ಮಕಥೆ ಪುಸ್ತಕ ಯಾವ ಹಂತದಲ್ಲಿದೆ?

‘ನವರಸ ನಾಯಕನ ನಾಲ್ಕು ಹೆಜ್ಜೆಗಳು’ ಪುಸ್ತಕ ಮುಗಿಯುವ ಹಂತದಲ್ಲಿದೆ. ಎರಡರಿಂದ ಮೂರು ಅಧ್ಯಾಯಗಳು ಬಾಕಿಯಿವೆ. ನಾನು ಕಡುಬಡತನದಿಂದ ಬಣ್ಣದಲೋಕಕ್ಕೆ ಬಂದ ವ್ಯಕ್ತಿ. ಬಾಲ್ಯಾವಸ್ಥೆ, ವೃತ್ತಿಬದುಕಿನಿಂದ ಹಿಡಿದು ಇತ್ತೀಚಿನ ರಾಜಕೀಯದವರೆಗೆ ಎಲ್ಲವನ್ನೂ ಬರೆದಿದ್ದೇನೆ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ.

* ರಾಜಕೀಯ ಪ್ರವೇಶ ನಿಮ್ಮ ಬಣ್ಣದ ಬದುಕು, ಅಭಿಮಾನಿಗಳ ಮೇಲೆ ಪರಿಣಾಮ ಬೀರಿಲ್ಲವೇ?

ಎಲ್ಲ ರಾಜಕೀಯ ಪಕ್ಷದಲ್ಲೂ ನನ್ನ ಅಭಿಮಾನಿಗಳಿದ್ದಾರೆ. ನನ್ನದೇ ಆದ ಸಿದ್ಧಾಂತವಿದೆ. ನಾನು ರಾಜಕೀಯ ಪ್ರವೇಶಿಸಿದ್ದು ಕೆಲವರಿಗೆ ಇಷ್ಟವಾಗದಿರಬಹುದು. ಆದರೆ, ನನ್ನ ವೃತ್ತಿಬದುಕಿಗೆ ತೊಂದರೆಯಾಗಿಲ್ಲ. ಚಿತ್ರದ ಲಾಭ, ನಷ್ವವನ್ನು ಪ್ರೇಕ್ಷಕರ ಮೇಲೆ ಅಳೆಯುತ್ತೇವೆ. ಚಿತ್ರಮಂದಿರದ ಪ್ರತಿ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರ ಸಂಖ್ಯೆ ಇದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.ಚಿತ್ರವೊಂದು ₹ 50 ಕೋಟಿ ಲಾಭಗಳಿಸಿತು ಎಂದಿಟ್ಟುಕೊಳ್ಳಿ. ಆ ಸಿನಿಮಾ ನೋಡಿದವರ ಸಂಖ್ಯೆ 14ರಿಂದ 16 ಲಕ್ಷವಷ್ಟೇ. 7ರಿಂದ 9 ಲಕ್ಷ ಜನರು ನನ್ನ ಚಿತ್ರ ನೋಡುತ್ತಾರಷ್ಟೇ. ದೃಶ್ಯಮಾಧ್ಯಮಗಳ ಟಿಆರ್‌ಪಿ ತೆಗೆದುಕೊಂಡರೆ 2 ಕೋಟಿ ಜನರು ನನ್ನ ಚಿತ್ರ ವೀಕ್ಷಿಸಿದ ನಿದರ್ಶನವಿದೆ. ಪ್ರೀ ಮೀಡಿಯಾದಲ್ಲಿ ಮಾತ್ರ ಇದು ಸಾಧ್ಯ. ‘ನೀರ್‌ದೋಸೆ’ ನೋಡಿದವರ ಸಂಖ್ಯೆ ಎಂಟು ಲಕ್ಷ ಅಷ್ಟೇ. ಇದಕ್ಕೆ ನನ್ನ ಬಳಿ ದಾಖಲೆಯಿದೆ.

* ವಾರಕ್ಕೆ ಏಳೆಂಟು ಚಿತ್ರಗಳು ತೆರೆಕಾಣುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು?

ಹಿಂದೆ ಎ, ಬಿ, ಸಿ, ಡಿ ಗ್ರೇಡ್‌ ಎಂಬ ವರ್ಗೀಕರಣವಿತ್ತು. ಎ ಗ್ರೇಡ್‌ನಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ರವಿಚಂದ್ರನ್ ಚಿತ್ರಗಳು ಓಡುತ್ತಿದ್ದವು. ಬಿ ಗ್ರೇಡ್‌ನಲ್ಲಿ ನಾವಿದ್ದೆವು. ಸಿ ಗ್ರೇಡ್‌ನಲ್ಲಿ ಹೊಸಬರ ಚಿತ್ರಗಳು ಬರುತ್ತಿದ್ದವು. ಈಗ ಇರುವುದೇ ತಾರಾವರ್ಚಸ್ಸಿನ ನಟರ ವರ್ಗ ಮತ್ತು ಹೊಸಬರ ವರ್ಗ. ಮೊದಲ ಗ್ರೇಡ್‌ನಲ್ಲಿ ಸ್ಟಾರ್‌ ನಟರ ಚಿತ್ರಗಳು ತೆರೆಕಂಡು ದುಡ್ಡು ಮಾಡುತ್ತವೆ. ಉಳಿದ ಗ್ರೇಡ್‌ನಲ್ಲಿ ಹೊಸಬರ ಚಿತ್ರಗಳು ಬರುತ್ತಿವೆ. ಹಾಗಾಗಿಯೇ, ಚಿತ್ರಗಳ ಸಂಖ್ಯೆ ನೂರೈವತ್ತು ದಾಟುತ್ತಿದೆ. ಕೆಲವು ಚಿತ್ರಗಳನ್ನು ಪ್ರಯೋಗಾತ್ಮಕವೆಂದು ಮಾಧ್ಯಮಗಳು ಬರೆದರೂ ವ್ಯಾವಹಾರಿಕವಾಗಿ ಸೋತಿರುತ್ತವೆ.

ಕಲಾವಿದನೊಬ್ಬ ಗಟ್ಟಿಯಾಗಿ ನೆಲೆಯೂರಲು ಕನಿಷ್ಠ ಹತ್ತು ಚಿತ್ರಗಳಲ್ಲಿಯಾದರೂ ನಟಿಸಬೇಕಾದ ಪರಿಸ್ಥಿತಿಯಿದೆ. ಪೇಸ್‌ವ್ಯಾಲ್ಯೂ ಇಲ್ಲದಿದ್ರೆ ಜನರು ಒ‍ಪ್ಪಿಕೊಳ್ಳುವುದು ಕಷ್ಟ. ಜನರಿಗೆ ಚಿತ್ರ ನೋಡುವುದನ್ನು ಅಭ್ಯಾಸ ಮಾಡಿಸಬೇಕು. ಒಳ್ಳೆಯ ಹಿಟ್‌ ಚಿತ್ರ ಕೊಡಬೇಕು. ಚಿತ್ರರಂಗ, ಕಲಾರಂಗ ಯಾರೊಬ್ಬರ ಸ್ವತ್ತಲ್ಲ. ಒಮ್ಮೆ ಜನರ ಮನದಲ್ಲಿ ಕುಳಿತ ಕಲಾವಿದ ಸ್ಟಾರ್‌ ಆಗುತ್ತಾನೆ. ‘ಭಂಡ ನನ್ನ ಗಂಡ’ ಚಿತ್ರ ತೆರೆಕಂಡ ಮಾರನೇ ದಿನವೇ ನಾನು ಸ್ಟಾರ್‌ ಆದೆ. ಈಗ ಅಂತಹ ವಾತಾವರಣವಿಲ್ಲ.

* ಇತ್ತೀಚೆಗೆ ಕಿರುತೆರೆಯತ್ತ ಹೆಚ್ಚು ವಾಲುತ್ತಿದ್ದೀರಲ್ಲ?

ಟಿ.ವಿಯಲ್ಲಿ ನನಗೆ ದಿನವೊಂದಕ್ಕೆ ₹ 8.50 ಲಕ್ಷ ಸಂಭಾವನೆ ನೀಡುತ್ತಾರೆ. ನಾನು ಅತಿಹೆಚ್ಚು ಸಂಭಾವನೆ ಪಡೆಯುವ ಜಡ್ಜ್‌. ಆ ಕೆಲಸ ಮನಸ್ಸಿಗೆ ತೃಪ್ತಿ ಕೊಟ್ಟಿದೆ. ಅಲ್ಲಿ ಸಿಗುವ ಆನಂದವೇ ಬೇರೆ. ಪ್ರಾಮಾಣಿಕವಾಗಿ ವರ್ಷಕ್ಕೆ ₹ 18 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿಸುತ್ತೇನೆ. ಸಿನಿಮಾದಲ್ಲಿ ಇದ್ದಿದ್ದರಿಂದಲೇ ನಾನು ಕಿರುತೆರೆಗೆ ಪ್ರವೇಶಿಸಲು ಸಾಧ್ಯವಾಯಿತು. ಎಲ್ಲದ್ದಕ್ಕೂ ಸಿನಿಮಾವೇ ಮದರ್.

* ನಿಮ್ಮ ಕನಸಿನ ಹೀರೊಯಿನ್‌ ಯಾರು?

ನನ್ನ ಕನಸಿನ ಹೀರೊಯಿನ್‌ ಯಾರೂ ಇಲ್ಲ. ನನ್ನ ಯಾವುದೇ ಚಿತ್ರಕ್ಕೆ ನಾಯಕಿಯರನ್ನು ರಿಪೀಟ್‌ ಮಾಡಿಲ್ಲ. ಅತಿಹೆಚ್ಚು ಹೊಸ ನಾಯಕಿಯರನ್ನು ಪರಿಚಯಿಸಿದ್ದೇ ನಾನು.

* ಹೊಸ ಯೋಜನೆಗಳ ಬಗ್ಗೆ ಹೇಳಿ

‘ಪ್ರೀಮಿಯರ್‌ ಪದ್ಮಿನಿ’ ಚಿತ್ರದಲ್ಲಿ ವಿಚ್ಛೇದನದ ಹಂತದಲ್ಲಿರುವ ಗಂಡನ ಪಾತ್ರ. ‘ತೋತಾಪುರಿ’ಯಲ್ಲಿ ಧರ್ಮಗಳ ಸಂಕಷ್ಟದ ಬಗ್ಗೆ ಹೆಣೆದ ಕಥೆಯಲ್ಲಿ ನಟಿಸುತ್ತಿದ್ದೇನೆ. ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆ ಕುರಿತ ಚಿತ್ರದಲ್ಲೂ ನಟಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ ಕುರಿತು ಕಥೆಗಳಿಗೆ ನನ್ನ ಮೊದಲ ಆದ್ಯತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT