ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವನಟನ ಶವ ಪರೀಕ್ಷೆ ಏಕೆ ನಡೆಸಲಿಲ್ಲ?: ಇಂದ್ರಜಿತ್‌ ಲಂಕೇಶ್‌ ಪ್ರಶ್ನೆ

Last Updated 29 ಆಗಸ್ಟ್ 2020, 11:35 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಆಳವಾಗಿ ಬೇರೂರಿರುವ ಡ್ರಗ್ಸ್‌ ಪೂರೈಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಜಾಲದ ಬೇರುಗಳು ಗಾಂಧಿನಗರಕ್ಕೂ ಚಾಚಿಕೊಂಡಿರುವುದು ಈಗ ಬಟಾಬಯಲಾಗಿದೆ. ಆರೋಪಿಗಳ ಜೊತೆಗೆ ಕನ್ನಡ ಚಿತ್ರರಂಗದ ಹಲವು ನಟ, ನಟಿಯರು ನಂಟು ಬೆಳೆಸಿಕೊಂಡಿದ್ದಾರೆ. ಅವರಿಗೆ ನೋಟಿಸ್ ನೀಡಿ ತನಿಖೆ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಈ ಬೆಳವಣಿಗೆಯ ನಡುವೆಯೇ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಇತ್ತೀಚೆಗೆ ಮೃತಪಟ್ಟ ಯುವನಟನ ಸಾವಿನ ಬಗ್ಗೆ ಗಂಭೀರ ಪ್ರಶ್ನೆಯೊಂದನ್ನು ಎತ್ತಿರುವುದು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ಮೃತಪಟ್ಟ ಯುವನಟನ ಶವ ಪರೀಕ್ಷೆಯನ್ನು ಏಕೆ ನಡೆಸಲಿಲ್ಲ. ಇದರ ಹಿಂದಿರುವ ಕಾಣದ ಕೈಗಳು ಯಾವುವು. ರಾಜಕಾರಣಿಗಳು ಇದ್ದಾರೆಯೇ’ ಎಂದು ಪ್ರಶ್ನಿಸಿರುವ ಅವರು, ಆ ಯುವನಟನ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ.

‘ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ಕೆಲವು ವರ್ಷಗಳ ಹಿಂದೆ ಕಾರೊಂದು ಅಪಘಾತಕ್ಕೆ ತುತ್ತಾಗಿತ್ತು. ಅದರಲ್ಲಿ ಚಿತ್ರರಂಗಕ್ಕೆ ಸೇರಿದವರು ಇದ್ದರು. ಪೊಲೀಸರು ತನಖೆ ನಡೆಸಿದಾಗ ಕಾರಿನಲ್ಲಿ ಮಾದಕ ವಸ್ತು ಕೂಡ ಸಿಕ್ಕಿದ್ದ ಬಗ್ಗೆ ಸುದ್ದಿಯಾಗಿತ್ತು. ಆದರೆ, ಆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದವರ ವಿರುದ್ಧ ತನಿಖೆ ನಡೆಸಿ ಶಿಕ್ಷೆ ಯಾಕೆ ವಿಧಿಸಲಿಲ್ಲ’ ಎಂಬುದು ಇಂದ್ರಜಿತ್‌ ಅವರ ಪ್ರಶ್ನೆ.

‘ಕೆಲವು ನಟಿಯರು ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವನೆ ಮಾಡುತ್ತಾರೆ. ಚಿತ್ರೀಕರಣದ ವೇಳೆ ವ್ಯಾನಿಟಿ ವ್ಯಾನ್‌ನಲ್ಲೂ ತೆಗೆದುಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದು ಹೇಳಿದ್ದಾರೆ.

‘ಚಂದನವನಕ್ಕೆ ಮಾದಕ ವಸ್ತುಗಳ ಪೂರೈಕೆ ಜಾಲದ ನಂಟು ಇರುವುದು ಸತ್ಯ. ತಮಗೆ ರಕ್ಷಣೆ ಕೊಟ್ಟರೆ ಎಲ್ಲ ಮಾಹಿತಿಯನ್ನು ನಾನು ಪೊಲೀಸರಿಗೆ ತಿಳಿಸುತ್ತೇನೆ’ ಎಂದಿದ್ದಾರೆ. ಹಾಗಾಗಿ, ಅವರಿಗೆ ಮಾಹಿತಿ ಹಂಚಿಕೊಳ್ಳುವಂತೆ ಸಿಸಿಬಿ ಪೊಲೀಸರು ನೋಟಿಸ್‌ ಕೂಡ ನೀಡಿದ್ದಾರೆ.

ಇಂದ್ರಜಿತ್‌ ಅವರ ಮಾತುಗಳು ಚಿತ್ರರಂಗದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿರುವುದು ದಿಟ. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರು ಮತ್ತು ನಿರ್ಮಾಪಕರ ಸಂಘಗಳು ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 250ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಬಾಲಿವುಡ್‌ ಸೇರಿದಂತೆ ಇತರೇ ಚಿತ್ರರಂಗಗಳಿಗೆ ಹೋಲಿಸಿದರೆ ಅತಿಹೆಚ್ಚು ಚಿತ್ರಗಳು ನಿರ್ಮಾಣವಾಗುತ್ತಿರುವುದು ಕನ್ನಡದಲ್ಲಿಯೇ. ಸಾಕಷ್ಟು ಸಂಖ್ಯೆಯಲ್ಲಿ ಯುವ ನಟ ಮತ್ತು ನಟಿಯರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈಗ ಡ್ರಗ್ಸ್‌ ಜಾಲದಲ್ಲಿ ಅಂತಹವರೇ ತೊಡಗಿಸಿಕೊಂಡಿರುವುದು ಚಿತ್ರರಂಗದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT