ಬುಧವಾರ, ಮೇ 18, 2022
29 °C

ಇನ್‌ಸ್ಪೆಕ್ಟರ್‌ ವಿಕ್ರಂನ ಕಾಮಿಡಿ ಕಮಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂರು ದಶಕದ ಹಿಂದೆ ಶಿವರಾಜ್‌ಕುಮಾರ್‌ ನಟನೆಯ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರ ತೆರೆ ಕಂಡಿತ್ತು. ಈಗ ನಿರ್ದೇಶಕ ಶ್ರೀನರಸಿಂಹ ಮತ್ತು ಪ್ರಜ್ವಲ್‌ ದೇವರಾಜ್‌ ಕಾಂಬಿನೇಷನ್‌ನಡಿ ಹೊಸರೂಪದಲ್ಲಿ ಪ್ರೇಕ್ಷಕರಿಗೆ ಕಚಗುಳಿ ಇಡಲು ‘ಇನ್‌ಸ್ಪೆಕ್ಟರ್‌ ವಿಕ್ರಂ’ ಸಜ್ಜಾಗಿದ್ದಾನೆ.

ಇದು ಪಕ್ಕಾ ಕಾಮಿಡಿ ಚಿತ್ರ. ಪ್ರಜ್ವಲ್‌ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಭಾವನಾ ಮೆನನ್‌ ನಾಯಕಿ. ರಘು ಮುಖರ್ಜಿ ಖಳನಟನಾಗಿ ಬಣ್ಣಹಚ್ಚಿದ್ದಾರೆ. ಈ ಮೂವರ ಪಾತ್ರಗಳು ತೆರೆಯ ಮೇಲೆ ತೆರೆದುಕೊಳ್ಳುವ ರೀತಿಯೇ ವಿಶಿಷ್ಟವಾಗಿದೆ ಎಂಬುದು ಚಿತ್ರತಂಡ ವಿವರಣೆ.

ಅಂದಹಾಗೆ ಈ ಚಿತ್ರ ನಿರ್ದೇಶಿಸಿರುವುದು ಶ್ರೀನರಸಿಂಹ. ಅವರು ಕಾಶೀನಾಥ್‌ ಅವರ ಶಿಷ್ಯ. ಇದು ಅವರ ಮೊದಲ ಚಿತ್ರವೂ ಹೌದು.‌ ನಟ ದರ್ಶನ್‌ ಕೂಡ ಇದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೋಕರ್ಣ, ಪಾಂಡವಪುರ, ಬೆಂಗಳೂರು ಮತ್ತು ಕಾರವಾರದ ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ ಮಾರ್ಚ್‌ನಲ್ಲಿ ಜನರ ಮುಂದೆ ಬರಲು ಸಿದ್ಧತೆ ನಡೆಸಿದೆ.

ಸಿನಿಮಾ ಬಗ್ಗೆ ನಿರ್ದೇಶಕ ಶ್ರೀನರಸಿಂಹ ವಿವರಿಸುವುದು ಹೀಗೆ: ‘ಶಿವಣ್ಣ ನಟನೆಯ ಇನ್ಸ್‌ಪೆಕ್ಟರ್‌ ವಿಕ್ರಂ ಚಿತ್ರದ ಕಥೆಗೂ ಮತ್ತು ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಕಾಮಿಡಿ ಮೂಲಕ ಕಥೆ ಹೇಳಲು ಹೊರಟಿದ್ದೇನೆ. ಆ ಚಿತ್ರದಲ್ಲಿ ಶಿವಣ್ಣ ನಾನು ಕರ್ನಾಟಕ ಪೊಲೀಸ್‌ ಇಲಾಖೆಯ ಕೊಹಿನೂರ್‌ ವಜ್ರವೆಂದು ಹೇಳುವ ಡೈಲಾಗ್‌ ಇದೆ. ಇದರಲ್ಲಿ ಪ್ರಜ್ವಲ್‌ ಅವರ ಪಾತ್ರ ಎರಡನೇ ಕೊಹಿನೂರ್‌ ವಜ್ರದಂತಿದೆ. ಶಿವಣ್ಣ ಪೋಷಿಸಿದ ಪಾತ್ರವನ್ನು ಇಟ್ಟುಕೊಂಡೇ ಹೊಸದಾದ ಕಥೆ ಹೇಳುತ್ತಿದ್ದೇನೆ’ ಎನ್ನುತ್ತಾರೆ.

‘ದರ್ಶನ್‌ ಅವರ ಪ್ರವೇಶ ಕಥೆಗೊಂದು ತಿರುವು ನೀಡುತ್ತದೆ. ಅವರ ಪಾತ್ರವನ್ನು ಚಿತ್ರದಲ್ಲಿಯೇ ನೋಡಬೇಕು. ತೆರೆಯ ಮೇಲೆ ಅವರು ಇರುವಷ್ಟು ಜನರಿಗೆ ರಂಜನೆ ಸಿಗಲಿದೆ’ ಎನ್ನುತ್ತಾರೆ ಅವರು.

ಜೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ನವೀನ್‌ಕುಮಾರ್‌ ಐ. ಅವರ ಛಾಯಾಗ್ರಹಣವಿದೆ. ಹರೀಶ್‌ ಕೊಮ್ಮೆ ಅವರ ಸಂಕಲನವಿದೆ. ಎ.ಆರ್‌. ವಿಖ್ಯಾತ್‌ ಬಂಡವಾಳ ಹೂಡಿದ್ದಾರೆ. ಫೆ. 14ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು