ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview|ಆ ‘ನಿಕೋಟಿನ್ನೇ’ ಈ ‘ಧೂಮಂ’: ಪವನ್‌ ಕುಮಾರ್‌

Published 22 ಜೂನ್ 2023, 23:30 IST
Last Updated 22 ಜೂನ್ 2023, 23:30 IST
ಅಕ್ಷರ ಗಾತ್ರ

ವಿನಾಯಕ ಕೆ.ಎಸ್‌.

‘ಲೂಸಿಯಾ’, ‘ಯುಟರ್ನ್‌’ ಖ್ಯಾತಿಯ ನಿರ್ದೇಶಕ ಪವನ್‌ ಕುಮಾರ್‌ ಅವರ ‘ಧೂಮಂ’ ಸಿನಿಮಾ ಇಂದು(ಜೂನ್‌ 23) ಮಲಯಾಳಂ ಮತ್ತು ಕನ್ನಡದಲ್ಲಿ ತೆರೆ ಕಾಣುತ್ತಿದೆ. ಬಹು ಬೇಡಿಕೆಯ ನಟ ಎನಿಸಿರುವ ಫಹಾದ್‌ ಫಾಸಿಲ್‌ ಪವನ್‌ಗೆ ಸಿಕ್ಕಿದ್ದು ಹೇಗೆ? ಇದಕ್ಕೆ ಹೊಂಬಾಳೆ ಜೊತೆಯಾಗಿದ್ದು ಏಕೆ? ಎಂಬಿತ್ಯಾದಿ ವಿಷಯಗಳ ಕುರಿತು ಪವನ್‌ ಕುಮಾರ್‌ ಮಾತನಾಡಿದ್ದಾರೆ...

ಪ್ರ

ಇದು ದಶಕಗಳ ಹಳೆಯ ಕನಸಿನ ಕಥೆಯೇ? ಇದಕ್ಕೆ ಫಹಾದ್‌ ಜೊತೆಯಾಗಿದ್ದು ಹೇಗೆ?

ಹೌದು. 2008ರಲ್ಲಿ ಬರೆದ ಕಥೆ. ಇದನ್ನು ‘ನಿಕೋಟಿನ್‌’ ಎಂಬ ಸಿನಿಮಾ ಮಾಡಬೇಕೆಂದು 2–3 ಸಲ ಪ್ರಯತ್ನಿಸಿದೆ. 2014ರಲ್ಲಿ ಇನ್ನೊಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾ ಮಾಡಲು ಸಿದ್ಧನಾದೆ. ಕಾಲ ಕೂಡಿ ಬರಲಿಲ್ಲ. ಆಗಾಗ ಕುಳಿತುಕೊಂಡು ಸ್ಕ್ರಿಪ್ಟ್‌ ಅಪ್‌ಗ್ರೇಡ್‌ ಮಾಡುತ್ತಿದ್ದೆ. ತಂಬಾಕಿನ ಕುರಿತಾದ ಕಥೆಯಿದು. 2008ರಲ್ಲಿಯೂ ತಂಬಾಕು ಇತ್ತು. ಈಗಲೂ ಇದೆ. 2030ರಲ್ಲಿಯೂ ಇರುತ್ತದೆ. ತಂಬಾಕು ಇರುವವರೆಗೂ ಈ ಕಥೆ ಜೀವಂತವಾಗಿರುತ್ತದೆ. 

ಪ್ರ

ಈ ಯೋಜನೆಗೆ ಫಹಾದ್‌ ಬಂದಿದ್ದು ಹೇಗೆ?

ಈ ಸಿನಿಮಾಕ್ಕೆ ಫಹಾದ್‌ ಪ್ರವೇಶವಾಗಿದ್ದು 2022ರಲ್ಲಿ. ಹೊಂಬಾಳೆ ಫಿಲ್ಮ್ಸ್‌ ಮಲೆಯಾಳಂನಲ್ಲಿ ಸಿನಿಮಾ ಮಾಡಬೇಕೆಂದು ಸ್ಕ್ರಿಪ್ಟ್‌ ಹುಡುಕುತ್ತಿತ್ತು. ಆಗ ನನ್ನ ಕಥೆಗೆ ಅಲ್ಲಿಗೆ ಹೋಯಿತು. ನಾನು ಕೂಡ ಕಥೆಗೆ ಸೂಕ್ತವಾಗಬಲ್ಲ ನಾಯಕ ಮತ್ತು ಒಳ್ಳೆಯ ನಿರ್ಮಾಣ ಸಂಸ್ಥೆಯನ್ನು ಹುಡುಕುತ್ತಿದ್ದೆ. ಫಹಾದ್‌ ಕಥೆ ಕೇಳಿ ಇಷ್ಟಪಟ್ಟರು. ನಿರ್ಮಾಣ ಸಂಸ್ಥೆ ಕೈಜೋಡಿಸಿತು. ನಂತರ ಮುಂದಿನ ಕೆಲಸಗಳು ಪ್ರಾರಂಭಗೊಂಡವು.

ಪ್ರ

ಪುನೀತ್‌ ಅವರಿಗೆ ಮಾಡಬೇಕಿದ್ದ ‘ದ್ವಿತ್ವ’ವೇ ‘ಧೂಮಂ’ ಆಯಿತಾ? ಅಥವಾ ಆ ಕಥೆಯನ್ನು ಬೇರೆ ನಟರಿಗೆ ಮಾಡುತ್ತೀರಾ?

ಇಲ್ಲ ಅದೇ ಬೇರೆ ಕಥೆ, ಇದೇ ಬೇರೆ. ನಾನೇ ಒಂದು ಸಂದರ್ಶನದಲ್ಲಿ ‘ದ್ವಿತ್ವ’ವನ್ನು ಮಲೆಯಾಳಂನಲ್ಲಿ ಮಾಡುವುದಿದ್ದರೆ ಫಹಾದ್‌ ಮಾಡಬಹುದು ಎಂದಿದ್ದೆ. ಹಾಗಾಗಿ ‘ದ್ವಿತ್ವ’ ಕನ್ನಡ, ತೆಲುಗಿನಲ್ಲಿ ಪುನೀತ್‌, ಮಲೆಯಾಳಂ, ತಮಿಳಿನಲ್ಲಿ ಫಹಾದ್‌ ಮಾಡುತ್ತಾರೆ ಎಂಬ ಮಾತು ಕೇಳಿಬಂದಿದ್ದು. ಆದರೆ ಆ ಯೋಜನೆ ಮುಂದುವರಿಯಲಿಲ್ಲ. ಸದ್ಯಕ್ಕೆ ಆ ಕಥೆಯನ್ನು ಬೇರೆಯವರಿಗೆ ಮಾಡುವ ಕುರಿತು ಆಲೋಚನೆ ಮಾಡಿಲ್ಲ. 

ಪ್ರ

ಕನ್ನಡದ ನಿರ್ದೇಶಕರಾಗಿ ಮಲೆಯಾಳಂನಲ್ಲಿ ಎದುರಾದ ಸವಾಲುಗಳು ಯಾವುವು?

ಅಷ್ಟೇನೂ ಕಷ್ಟವಾಗಲಿಲ್ಲ. ಪ್ರಾರಂಭದಿಂದ ಕನ್ನಡ ಮತ್ತು ಮಲೆಯಾಳಂ ಎರಡೂ ಗೊತ್ತಿರುವ ಸಹಾಯಕರನ್ನು ಇಟ್ಟುಕೊಂಡಿದ್ದೆ. ಮೊದಲೆರಡು ದಿನ ಸೆಟ್‌ನಲ್ಲಿ ನನಗೆ ಗೊಂದಲವಿದ್ದರೆ ಅವರು ಭಾಷಾಂತರ ಮಾಡಿ ಹೇಳುತ್ತಿದ್ದರು. ನಟರ ಭಾವನೆ ಮತ್ತು ಧ್ವನಿ ಗೊತ್ತಾಗುತ್ತಿತ್ತು. ನಿರ್ದೇಶಕನಿಗೆ ಅಷ್ಟು ಗೊತ್ತಾದರೆ ಸಾಕು. ಸೆಟ್‌ನಲ್ಲಿ ಎಲ್ಲರಿಗೂ ಇಂಗ್ಲಿಷ್‌ ಗೊತ್ತಿತ್ತು. ಹೀಗಾಗಿ ನಮ್ಮ ಸಂವಹನ ಇಂಗ್ಲಿಷ್‌ನಲ್ಲಿ ನಡೆದು, ಭಾಷೆಯ ಸಮಸ್ಯೆ ಬರಲಿಲ್ಲ. 

ಪ್ರ

ಫಹಾದ್‌ ಅವರಂತಹ ನಟರಿಗೆ ನಿರ್ದೇಶನ ಎಷ್ಟು ಕಷ್ಟ ಮತ್ತು ಎಷ್ಟು ಸುಲಭ?

ಫಹಾದ್‌ ಬೇರೆ ರೀತಿಯ ನಟ. ಹೆಚ್ಚಾಗಿ ಅವರು ನಟಿಸುವಾಗ ಇದ್ಯಾಕೆ ಹೀಗೆ ಅಂತ ಪ್ರಶ್ನಿಸುತ್ತಾರಂತೆ. ಎರಡು ಮೂರು ದಿನ ಆದ ನಂತರ ಸಮಾಧಾನವಿಲ್ಲದೆ ಹಳೆಯದನ್ನು ಮರು ಚಿತ್ರೀಕರಣ ಮಾಡಿಸುತ್ತಾರಂತೆ ಎಂಬೆಲ್ಲ ಅಭಿಪ್ರಾಯವಿತ್ತು. ಆದರೆ ನಮ್ಮ ಸೆಟ್‌ನಲ್ಲಿ ಯಾವ ದೃಶ್ಯವೂ ಮರು ಚಿತ್ರೀಕರಣಗೊಳ್ಳಲಿಲ್ಲ. ಸ್ಕ್ರಿಪ್ಟ್‌ ನೀಟಾಗಿ ಮಾಡಿಕೊಂಡಿದ್ದೆವು. ಎರಡು ತಿಂಗಳು ಪ್ರೀಪ್ರೊಡಕ್ಷನ್‌ ಮಾಡಿ ಸರಿಯಾಗಿ ಪ್ಲಾನಿಂಗ್‌  ಮಾಡಿಕೊಂಡಿದ್ದೆವು. ಒಟ್ಟಾರೆ 46 ದಿನಗಳಲ್ಲಿ ಚಿತ್ರೀಕರಣ ಮುಗಿಯಿತು. 2002ರ ಸೆಪ್ಟೆಂಬರ್‌ನಲ್ಲಿ ಚಿತ್ರದ ಕೆಲಸ ಪ್ರಾರಂಭವಾಗಿದ್ದು. ಒಂಬತ್ತು ತಿಂಗಳಲ್ಲಿ ತೆರೆಗೆ ಬಂದಿದ್ದೇವೆ.

ಪ್ರ

ಸತತ ಹಿಟ್‌ ಕೊಟ್ಟರೂ ಬಹಳ ಸಮಯ ತೆಗೆದುಕೊಂಡು ಸಿನಿಮಾ ಮಾಡುವುದು ಏಕೆ?

ನನಗೆ ಬಾಕ್ಸ್‌ ಆಫೀಸ್‌ನಲ್ಲಿ ವರ್ಕ್‌ ಆಗುವ ರೀತಿ ಕೆಲಸ ಮಾಡಲು ಬರುವುದಿಲ್ಲ. ಹೀಗಾಗಿ ಹಿಂದಿನ ಚಿತ್ರದ ಫಲಿತಾಂಶ ಮರೆತು ಬಿಡುತ್ತೇನೆ. ಪ್ರತಿ ಸಿನಿಮಾವನ್ನು ಮೊದಲ ಸಿನಿಮಾವೆಂದು ಯೋಚಿಸುತ್ತೀನಿ. ಇದನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ, ಇಲ್ಲವಾ? ನಾನು ಹೇಳುತ್ತಿರುವುದು ಸರಿಯಾಗಿದೆಯಾ, ಇಲ್ಲವೋ? ಎಂಬ ಭಯ ಯಾವಾಗಲೂ ನನ್ನೊಳಗೆ ಇರುತ್ತದೆ. ಪ್ರತಿ ಸಿನಿಮಾ ಬಿಡುಗಡೆ ಹೇಗೆ ಆಗಬಹುದೆಂದು ಕಾತರವಿರುತ್ತದೆ. ಹೀಗಾಗಿ ಕೆಲವು ಸಲ ಬರವಣಿಗೆಗೆ ಸಮಯ ಹೋಗುತ್ತದೆ. ಇನ್ನು ಕೆಲವು ಸಲ ಬೇಗ ಬರೆದಿರುತ್ತೇನೆ. ಬೇರೆ ಕೆಲಸಗಳು ತಡವಾಗುತ್ತವೆ. ಜೊತೆಗೆ ದೊಡ್ಡ ಬಜೆಟ್‌ ಬೇಡುವ ಸಿನಿಮಾಗಳನ್ನು ರಿಕವರ್‌ ಮಾಡಿಕೊಡಬಲ್ಲ ಬೆರಳೆಣಿಕೆಯಷ್ಟು ನಾಯಕರು ಮಾತ್ರ ಕನ್ನಡದಲ್ಲಿ ಇರುವುದು. ಅವರಿಗೆ ಅವರದ್ದೇ ಆದ ಅಭಿಮಾನಿಗಳು ಇರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಸ್ಕ್ರಿಪ್ಟ್‌ ಬರೆಯಲು ಬರುವುದಿಲ್ಲ. ಬರೆದಿದ್ದದ್ದನ್ನು ದೊಡ್ಡ ನಟರಿಗೆ ಸರಿ ಹೊಂದಿಸುವಾಗ ಸಮಯವಾಗುತ್ತದೆ.

ಪ್ರ

ಕನ್ನಡದಲ್ಲಿ ಸಿನಿಮಾಗಳನ್ನು ಮಾಡುವ ಆಲೋಚನೆ ಇಲ್ಲವೆ? ‘ಧೂಮಂ’ ಯಶಸ್ವಿಯಾದರೆ ಮಲೆಯಾಳಂನತ್ತಲೇ ಮುಖ ಮಾಡುವಿರಾ?

ಹಾಗೇನಿಲ್ಲ. ಸದ್ಯಕ್ಕೆ ಈ ಸಿನಿಮಾ ಮಾಡಿರುವೆ. ಇದರ ಬಿಡುಗಡೆ ಪ್ರಕ್ರಿಯೆಯಲ್ಲ ಮುಗಿದು ಸಾಮಾನ್ಯ ಬದುಕಿಗೆ ಮರಳಲು ನನಗೆ ಒಂದು ತಿಂಗಳು ಬೇಕು. ನಂತರ ಮುಂದಿನ ಯೋಚನೆ. ಅಲ್ಲಿವರೆಗೆ ಮುಂದಿನದರ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಪ್ರ

ಸಣ್ಣ ಸಿನಿಮಾಗಳನ್ನು ಪ್ರಸ್ತುತಪಡಿಸಿ ಒಳ್ಳೆಯ ತಂಡಗಳ ಬೆನ್ನುತಟ್ಟುವುದನ್ನು ನಿಲ್ಲಿಸಿದ್ರಾ?

ಒಂದು ಸಿನಿಮಾ ಪ್ರಸ್ತುತಪಡಿಸಿ, ಬಿಡುಗಡೆ ಮಾಡುವುದರ ಹಿಂದೆ ಸಾಕಷ್ಟು ಶ್ರಮವಿದೆ. ಜೊತೆಗೆ ಬಹಳ ಸಮಯ ಬೇಕು. ಅಷ್ಟು ಸಮಯ ಕೊಡಲು ಸಾಧ್ಯವಿಲ್ಲ ಎನ್ನಿಸಿತು. ಜೊತೆಗೆ ಇವತ್ತು ಸಾಕಷ್ಟು ಬೇರೆ ತಂಡಗಳು ಈ ಕೆಲಸ ಮಾಡುತ್ತಿವೆ. ಅವೇ ಚೆನ್ನಾಗಿ ಮಾಡುತ್ತಿವೆ. ಹೀಗಾಗಿ ಆ ಬಗ್ಗೆ ಗಮನಹರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT