ಸೋಮವಾರ, ಮಾರ್ಚ್ 30, 2020
19 °C

ಇಳಯದಳಪತಿ ಸಂಭಾವನೆ ₹80 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರರಂಗದಲ್ಲಿರುವ ಒಂದು ಪ್ರಮುಖ ಗುಟ್ಟಿನ ವಿಷಯವೆಂದರೆ ಅದು ಸಂಭಾವನೆ ವಿಷಯ.

ಯಾವುದೇ ನಟ– ನಟಿ ಯಾವ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು ನಿಖರವಾಗಿ ಗೊತ್ತಿರುವುದು ಅದು ಕೊಟ್ಟವರಿಗೆ ಮತ್ತು ತೆಗೆದುಕೊಂಡವರಿಗೆ ಮಾತ್ರ. ಹೊರಜಗತ್ತಿನಲ್ಲಿ ನಡೆಯುವ ಸಂಭಾವನೆಯ ಚರ್ಚೆ ಅಂತೆ– ಕಂತೆಯ ಗಾಸಿಪ್‌ಗೆ ಮಾತ್ರ ಸೀಮಿತ ಎನ್ನುವಂತಾಗಿರುತ್ತದೆ. ಈ ಸೀಕ್ರೆಟ್‌ ಸಾಮಾನ್ಯವಾಗಿ ಹೊರಬರುವುದು ಕಡಿಮೆ. ಆದರೆ, ತಮಿಳಿನ ಜನಪ್ರಿಯ ನಟ ಇಳಯದಳಪತಿ ವಿಜಯ್‌ ಪಡೆಯುತ್ತಿರುವ ಸಂಭಾವನೆ ಈಗ ಜಗಜ್ಜಾಹೀರಾಗಿದೆ. ಇದು ಸಿನಿರಂಗದಲ್ಲಿ ಚರ್ಚೆಯ ಮುನ್ನಲೆಗೂ ಬಂದಿದೆ.

ವಿಜಯ್ ತಾವು ನಟಿಸಿದ್ದ ‘ಬಿಗಿಲ್’ ಚಿತ್ರಕ್ಕೆ ₹50 ಕೋಟಿ ಮತ್ತು ತಮ್ಮ ಮುಂದಿನ ಚಿತ್ರ ‘ಮಾಸ್ಟರ್’ಗೆ ₹80 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರಂತೆ. ಐ.ಟಿ ಇಲಾಖೆ ನೀಡಿರುವ ಈ ಮಾಹಿತಿ ಆಧರಿಸಿ ನಟಿ ಖುಷ್ಬು ಕೂಡ ಟ್ವೀಟ್‌ ಮಾಡಿದ್ದಾರೆ.

‘ಬಿಗಿಲ್’ ಚಿತ್ರ ತಮಿಳು, ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರ ಸುಮಾರು ₹ 300 ಕೋಟಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿತ್ತು.

ತೆರಿಗೆ ವಂಚನೆ ಸಂಬಂಧ ಚಿತ್ರದ ನಿರ್ಮಾಪಕ ಅಂಬು ಚೆಝಿಯನ್ ಅವರ ಕಚೇರಿ ಹಾಗೂ ನಿವಾಸದ ಮೇಲೆ ಹಾಗೂ ವಿಜಯ್‌ ಅವರ ಚೆನ್ನೈನಲ್ಲಿರುವ ನಿವಾಸದ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕೋಟಿಗಟ್ಟಲೆ ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದರು. 

‘ಬಿಗಿಲ್’ ಮತ್ತು ‘ಮಾಸ್ಟರ್’ ಚಿತ್ರಗಳಿಗೆ ಪಡೆದಿರುವ ಸಂಭಾವನೆಗೆ ಸೂಕ್ತ ತೆರಿಗೆಯನ್ನು ವಿಜಯ್‌ ಪಾವತಿಸಿದ್ದು, ಐ.ಟಿ ತನಿಖೆಯ ಕುಣಿಕೆಯಿಂದ ಸದ್ಯ ಪಾರಾಗಿದ್ದಾರಂತೆ. ತಮಿಳು ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರನೆಂದೇ ಜನಪ್ರಿಯರಾಗಿರುವ ‘ಇಳಯದಳಪತಿ’ಯ ಸಂಭಾವನೆ ಚಿತ್ರದಿಂದ ಚಿತ್ರಕ್ಕೆ ಏರರುಗತಿಯಲ್ಲಿ ಸಾಗಿದೆ. 

ಮಾಸ್ಟರ್‌ ಚಿತ್ರಕ್ಕೆ ಲೋಕೇಶ್ ಕನಗರಾಜ್ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬಹು ತಾರಾಗಣವೇ ಇದ್ದು, ವಿಜಯ್ ಸೇತುಪತಿ, ಮಾಳವಿಕಾ ಮೋಹನನ್ ಹಾಗೂ ಆಂಡ್ರಿಯಾ ಜೆರೆಮಯ್ಯಾ ಬಣ್ಣ ಹಚ್ಚಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)