ಗುರುವಾರ , ಜುಲೈ 16, 2020
24 °C

‘ಮೇಕಪ್‌’ ಮಾಡಿ ₹35 ಕೋಟಿ ಮೌಲ್ಯದ ಆಸ್ತಿ ಕಳೆದುಕೊಂಡಿದ್ದ ಜಗ್ಗೇಶ್‌! 

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮದೇ ಅಭಿನಯದ, ಪತ್ನಿ ಪರಿಮಳಾ ನಿರ್ಮಾಣದ ‘ಮೇಕಪ್‌’ ಚಿತ್ರದಿಂದ ತಮಗಾದ ನಷ್ಟವನ್ನು ಜಗ್ಗೇಶ್‌ ಇಂದು ಬಹಿರಂಗಗೊಳಿಸಿದ್ದಾರೆ. 

ಗಳಿಕೆಯ ದೃಷ್ಟಿಯಿಂದ ಸೋತ ‘ಮೇಕಪ್‌’ ಚಿತ್ರದ ನಿರ್ಮಾಣಕ್ಕೆ ಮಾಡಲಾದ ಸಾಲ ತೀರಿಸಲು ಹೋಗಿ ತಾವು ಕಳೆದುಕೊಂಡ ಆಸ್ತಿ ಮತ್ತು ಅದರ ಮೌಲ್ಯದ ಬಗ್ಗೆ ಜಗ್ಗೇಶ್‌ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. 

‘ಕನ್ನಡ ಮೂವೀಸ್‌ ಫೋರಮ್‌’ ಎಂಬ ಟ್ವಿಟರ್‌ ಹ್ಯಾಂಡಲ್‌ ಇಂದು ‘ಮೇಕಪ್‌ ಚಿತ್ರ’ ಪೋಸ್ಟರ್‌ಗಳನ್ನು ಹಂಚಿಕೊಂಡಿತ್ತು. ಇದನ್ನು ಬೇಸರದೊಂದಿಗೆ ರೀಟ್ವೀಟ್‌ ಮಾಡಿರುವ ಜಗ್ಗೇಶ್‌, ‘ಕನ್ನಡಿಗರಿಗೆ ವಿಭಿನ್ನ ಚಿತ್ರ ನೀಡಬೇಕು ಹಾಗೂ ಹೊರ ರಾಜ್ಯಕ್ಕೆ ನನ್ನ ಪ್ರತಿಭೆ ನಿರೂಪಿಸಬೇಕು ಎಂದು ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ ‘ಮೇಕಪ್‌’. ದೌರ್ಭಾಗ್ಯ, ಚಿತ್ರದಿಂದ 2002ರಲ್ಲೆ ₹75 ಲಕ್ಷ ಕಳೆದುಕೊಂಡೆ! ಆ ಸಾಲ ತೀರಿಸಲು ಅಂದು ನಾನು ಮಾರಿದ ಮನೆ ಇಂದು ₹35 ಕೋಟಿ ಬೆಲೆ ಬಾಳುವ ಆಸ್ತಿಯಾಗಿದೆ. ಅದನ್ನು ಕೊಂಡುಕೊಂಡ ನನ್ನ ಮಿತ್ರನಿಗೆ ಇಂದು ₹16 ಲಕ್ಷ ಬಾಡಿಗೆ ಬರುತ್ತಿದೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

‘ಜಗ್ಗೇಶ್‌ ಚಿತ್ರ’ ಬ್ಯಾನರ್‌ನಡಿ ಮೂಡಿ ಬಂದಿದ್ದ ಈ ಚಿತ್ರವನ್ನು ಜಗ್ಗೇಶ್‌ ಪತ್ನಿ ಪರಿಮಳಾ ನಿರ್ಮಾಣ ಮಾಡಿದ್ದರು. ಸಂಗೀತಂ ಶ್ರೀನಿವಾಸ ರಾವ್‌ ಅವರು ಚಿತ್ರ ನಿರ್ದೇಶನ ಮಾಡಿದ್ದರು. ನಟಿ ಲೈಲಾ ಪಟೇಲ್‌ ಅವರು ಜಗ್ಗೇಶ್‌ ಅವರೊಂದಿಗೆ ನಾಯಕ ನಟಿಯಾಗಿ ನಟಿಸಿದ್ದರು. ಜಗ್ಗೇಶ್‌ ಸೋದರ ಕೋಮಲ್‌ ಅವರೂ ಪೋಷಕ ಪಾತ್ರ ನಿಭಾಯಿಸಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು