ಮುಂಬೈ: ‘ಆರ್‌ಆರ್‌ಆರ್’ನ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇದೀಗ ಜಪಾನ್ ಮಹಿಳೆಯೊಬ್ಬರು ತಮ್ಮ ಮಗುವಿಗೆ ‘ಆರ್‌ಆರ್‌ಆರ್’ ಚಿತ್ರವನ್ನು ಸುಲಭವಾಗಿ ಅರ್ಥಮಾಡಿಸಲು ಫ್ಲಿಪ್ ಪುಸ್ತಕ ತಯಾರಿಸಿದ್ದಾರೆ.
ಈ ಫ್ಲಿಪ್ ಪುಸ್ತಕದಲ್ಲಿ ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್.ಟಿ.ಆರ್ ಅವರ ಭಾವಚಿತ್ರಗಳನ್ನು ಬಿಡಿಸಿರುವ ಮಹಿಳೆ, ತಮ್ಮ 7 ವರ್ಷದ ಮಗುವಿಗೆ ಸಿನಿಮಾವನ್ನು ಜಪಾನ್ ಭಾಷೆಯಲ್ಲಿ ಸುಲಭವಾಗಿ ಅರ್ಥಮಾಡಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
‘ಆರ್‌ಆರ್‌ಆರ್’ ಚಿತ್ರವನ್ನು ಸುರ್ಧೀಘ 3 ಗಂಟೆಗಳ ಕಾಲ ಚಿತ್ರದ ಉಪಶೀರ್ಷಿಕೆಯಲ್ಲಿ ನೋಡಲು ಹಾಗೂ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಮಹಿಳೆ ಈ ರೀತಿ ಉಪಾಯ ಮಾಡಿದ್ದಾರೆ.
ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘ಆರ್‌ಆರ್‌ಆರ್’ ಸಿನಿಮಾದ ಅಭಿಮಾನಿ ಬಳಗ ಹಂಚಿಕೊಂಡಿದೆ.
ಈ ಸಿನಿಮಾದ 'ನಾಟು ನಾಟು' ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ದೊರೆತಿದೆ.
ಭಾರತ ಸ್ವಾತಂತ್ರ್ಯ ಗಳಿಸುವುದಕ್ಕೂ ಮೊದಲು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ ಅವರ ಜೀವನಾಧಾರಿತ ಸಿನಿಮಾ ‘ಆರ್‌ಆರ್‌ಆರ್’ನಲ್ಲಿ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಮತ್ತು ಶ್ರಿಯಾ ಶರಣ್ ನಟಿಸಿದ್ದಾರೆ.