ಗುರುವಾರ , ಫೆಬ್ರವರಿ 27, 2020
19 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

‘ಕಾಣದಂತೆ ಮಾಯವಾದನು’ ಮೇಲೆ ವಿಕಾಸ ನೋಟ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

‘ನಾವು ಬೇರೆಯವರ ಸಿನಿಮಾಗಳಿಗೆ ಚಿತ್ರಕಥೆ ಬರೆಯುತ್ತೇವೆ. ಆದರೆ, ನಾವೇ ಹೀರೊ ಆಗಬೇಕಾದರೆ ಅದಕ್ಕೆ ದೇವರು ಬೇರೊಬ್ಬರಿಂದ ಸ್ಕ್ರಿಫ್ಟ್ ಬರೆಯಿಸಬೇಕು. ಆ ಸಮಯಕ್ಕಾಗಿ ನಾವು ಕಾಯಬೇಕು. ನನಗೆ ಇದೀಗ ಆ ಸಮಯ ಬಂದಿದೆ...’ –‘ಕಾಣದಂತೆ ಮಾಯವಾದನು’ ಚಿತ್ರದ ಮೂಲಕ, ಮೊದಲ ಸಲ ನಾಯಕ ನಟನಾಗಿ ಪದಾರ್ಪಣೆಗೆ ಮಾಡುತ್ತಿರುವ ವಿಕಾಸ್ ತಮ್ಮ ಸಿನಿಮಾ ಬದುಕಿನ ಬಗ್ಗೆ ಮೆಲುಕು ಹಾಕಿದ್ದು ಹೀಗೆ...

2013ರಲ್ಲಿ ತೆರೆ ಕಂಡಿದ್ದ ದುನಿಯಾ ವಿಜಯ್ ನಟನೆಯ ‘ಜಯಮ್ಮನ ಮಗ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ವಿಕಾಸ್‌ಗೆ ಬೆಳ್ಳಿತೆರೆ ಹೊಸದೇನಲ್ಲ. ಈಗಾಗಲೇ ಹಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕನಾಗಬೇಕೆಂಬ ಕನಸು ಹೊತ್ತು ಬಣ್ಣದ ಲೋಕಕ್ಕೆ ಧುಮುಕಿದ ಅವರ ಮುಖ ಕಿರುತೆರೆಗೂ ಪರಿಚಿತ.

ಕೆಲ ವರ್ಷಗಳಿಂದ ತೆರೆಯ ಹಿಂದಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ವಿಕಾಸ್, ಇದೀಗ ‘ಕಾಣದಂತೆ ಮಾಯವಾದನು’ ಸಿನಿಮಾದ ಮೂಲಕ ಹೊಸ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅನಿರೀಕ್ಷಿತ ಆಫರ್

‘ಜಯಮ್ಮನ ಮಗ’ ಚಿತ್ರ ನಿರ್ದೇಶನದ ಬಳಿಕ, ಅದೇ ರೀತಿಯ ಆಫರ್‌ಗಳು ಬಂದವು. ಆದರೆ ನನಗೆ ಚಿತ್ರಕಥೆ ಬರೆಯುವುದಲ್ಲೇ ಹೆಚ್ಚು ಆಸಕ್ತಿ. ಯೋಗರಾಜ ಭಟ್ಟರ ಜತೆ ‘ಡ್ರಾಮಾ’ ಸಿನಿಮಾದಲ್ಲಿ ಕೆಲಸ ಮಾಡುವಾಗ, ರಾಜು ಪತ್ತಿಪಾಟಿ ಪರಿಚಯವಾಗಿದ್ದರು. ‘ಲೈಫು ಇಷ್ಟೇನೆ’ ಚಿತ್ರದಲ್ಲಿ ಕೆಲಸ ಮಾಡಿದ್ದ ಅವರಿಗೆ ನಿರ್ದೇಶನದಲ್ಲಿ ವಿಪರೀತ ಆಸಕ್ತಿ. ಇದೇ ವೇಳೆ ಅವರು ‘ಕಾಣದಂತೆ ಮಾಯವಾದನು’ ಚಿತ್ರದ ಕಥೆಯ ಎಳೆಯನ್ನು ಹೇಳಿದ್ದರು. ನನಗೂ ತುಂಬಾ ಇಷ್ಟವಾಗಿತ್ತು’ ಎಂದು ಚಿತ್ರದ ನಿರ್ದೇಶಕ ರಾಜು ಪತ್ತಿಪಾಟಿ ಜತೆಗಿನ ಒಡನಾಟ ಆರಂಭವನ್ನು ವಿಕಾಸ್ ಹಂಚಿಕೊಂಡರು.

‘ನನಗೆ ನಟನಾಗಬೇಕು ಎಂಬ ಆಸಕ್ತಿ ಇರಲಿಲ್ಲ. ‘ಡ್ರಾಮಾ’ ಶೂಟಿಂಗ್‌ ಸಂದರ್ಭದಲ್ಲಿ ಜನ ನನ್ನನ್ನು ಮುತ್ತಿಕೊಂಡು ಮಾತನಾಡಿಸುತ್ತಿದ್ದರು. ಅದನ್ನು ಗಮನಿಸಿದ್ದ ರಾಜು, ಒಮ್ಮೆ ನೀವೇ ನನ್ನ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಬೇಕು ಎಂದರು. ‘ನನಗೆ ವಯಸ್ಸಾಗಿದೆ, ಬೇರೆಯವರನ್ನು ನೋಡಿಕೊಳ್ಳಿ’ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದೆ. ಆದರೂ, ಒತ್ತಾಯ ನಿಲ್ಲಲಿಲ್ಲ. ಕಡೆಗೆ, ಒಪ್ಪಿಕೊಂಡೆ. ಆರಂಭದಲ್ಲಿ ಕೆಲ ದೃಶ್ಯಗಳನ್ನು ಚಿತ್ರೀಕರಿಸಿ ನೋಡಿದೆವು. ಆಗ ನನಗೆ ನಾಯಕನ ಸ್ಥಾನಕ್ಕೆ ನ್ಯಾಯ ಒದಗಿಸಬಲ್ಲೆ ಎಂಬ ವಿಶ್ವಾಸ ಬಂತು’ ಎಂದರು.

ಹಾರರ್ ಅಲ್ಲದ ಆತ್ಮದ ಸೇಡು

ಚಿತ್ರದಲ್ಲಿ ನಾಯಕ ನಟ ರಮ್ಮಿ, ನಾಯಕಿ ವಂದನಾಳನ್ನು ಮತ್ತೆ ಭೇಟಿಯಾಗುವುದಾಗಿ ಹೇಳಿ ಹೋಗುತ್ತಾನೆ. ಆದರೆ, ದುಷ್ಕರ್ಮಿಗಳು ಆತನನ್ನು ಕೊಲೆ ಮಾಡುತ್ತಾರೆ. ಮತ್ತೆ ಸಿಗುವುದಾಗಿ ಹೇಳಿದ ಪ್ರೇಮಿ, ನಾಯಕಿಯ ದೃಷ್ಟಿಯಲ್ಲಿ ನಾಪತ್ತೆಯಾಗಿರುತ್ತಾನೆ. ಇದೇ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕ್ಕೆ ‘ಕಾಣದಂತೆ ಮಾಯವಾದನು’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

‘ಆತ್ಮಗಳಿಗೆ ಯಾವುದೇ ಶಕ್ತಿ ಇರುವುದಿಲ್ಲ. ಅವು ಬೇರೆಯವರ ಮೂಲಕ ತಮ್ಮ ಸೇಡು ತೀರಿಸಿಕೊಳ್ಳುತ್ತವೆ. ಕೊಲೆಯಾದ ಬಳಿಕ ಆತ್ಮವಾಗುವ ನಾಯಕ ರಮ್ಮಿ, ತನ್ನನ್ನು ಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ? ಎಂಬುದು ಚಿತ್ರದ ತಿರುಳು. ಪ್ರೀತಿ, ತ್ಯಾಗ, ದ್ವೇಷ,
ಅಸೂಯೆ, ಸಾಹಸ, ಹಾಸ್ಯ ಎಲ್ಲವೂ ಚಿತ್ರದಲ್ಲಿದೆ. ಮೇಲ್ನೊಟಕ್ಕೆ ಹಾರರ್ ಎನಿಸಿದರೂ, ಭಯಪಡುವಂತಹ ಯಾವ ದೃಶ್ಯಗಳೂ ಚಿತ್ರದಲ್ಲಿಲ್ಲ’ ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟರು.

ಹಳೇ ದಾರಿ ಇದ್ದೇ ಇದೆ

‘ಒಳ್ಳೆಯ ಕಥೆಯ ಸಿನಿಮಾ. ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಹಾಗಾಗಿ, ಗೆಲ್ಲುವ ವಿಶ್ವಾಸವಿದೆ. ಒಂದು ವೇಳೆ ಸೋತರೂ ಸೊರಗುವುದಿಲ್ಲ. ಹಳೇ ದಾರಿ ಇದ್ದೇ ಇದೆ. ಬದುಕಿನಲ್ಲಿ ಇಷ್ಟಪಡುವ ಕೆಲಸದ ಜತೆಗೆ, ಹೊಸ ಪ್ರಯತ್ನಗಳನ್ನು ಮಾಡಬೇಕು ಎಂದು ಬಯಸುವವನು ನಾನು. ಈ ಸಿನಿಮಾ ಕೂಡ ಅಂತಹ ಪ್ರಯತ್ನದ ಒಂದು ಭಾಗ’ ಎನ್ನುವ ವಿಕಾಸ್ ಅವರಿಗೆ, ‘ಕಾರ್ಪೊರೇಟ್ ಮಾದರಿಯಲ್ಲಿ ಒಂದೇ ಸಲ ನಾಲ್ಕೈದು ಸಿನಿಮಾಗಳನ್ನು ನಿರ್ಮಿಸುವ ಕೆಲಸ ಮಾಡಬೇಕು’ ಎಂಬ ಮಹದಾಸೆ ಇದೆಯಂತೆ.⇒v

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು