ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಸಿನಸರ ಸಿನಿಮಾ ವಿಮರ್ಶೆ: ‘ಕಾಸಿನಸರ’ದ ಸುತ್ತ ಸುದೀರ್ಘ ಪಯಣ

Last Updated 10 ಮಾರ್ಚ್ 2023, 6:38 IST
ಅಕ್ಷರ ಗಾತ್ರ

ಸಿನಿಮಾ: ಕಾಸಿನಸರ (ಕನ್ನಡ)

ನಿರ್ದೇಶನ: ಎನ್.ಆರ್. ನಂಜುಂಡೇಗೌಡ

ನಿರ್ಮಾಪಕ: ಈ. ದೊಡ್ಡನಾಗಯ್ಯ

ತಾರಾಗಣ: ವಿಜಯ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಉಮಾಶ್ರೀ, ನೀನಾಸಂ ಅಶ್ವಥ್‌, ಮಂಡ್ಯ ರಮೇಶ್‌, ಸುಧಾ ಬೆಳವಾಡಿ ಮತ್ತಿತರರು.

‘ಹೆಬ್ಬೆಟ್‌ ರಾಮಕ್ಕ’ ಬಳಿಕ ನಿರ್ದೇಶಕ ಎನ್‌.ಆರ್‌. ನಂಜುಂಡೇಗೌಡ ಅವರ ಮತ್ತೊಂದು ಸಾಮಾಜಿಕ ಚಿತ್ರ ‘ಕಾಸಿನಸರ’. ‘ಇದು ಕೇವಲ ಆಭರಣವಲ್ಲ’ ಎನ್ನುವುದು ಸಿನಿಮಾ ಶೀರ್ಷಿಕೆಯ ಅಡಿಬರಹ. ಹೀಗಾಗಿ ‘ಕಾಸಿನಸರ’ದ ಸುತ್ತಲೇ ಕಥೆ ಕಟ್ಟುತ್ತಾ ಹೋಗುತ್ತಾರೆ ನಿರ್ದೇಶಕರು. ರೈತರು ಸಾವಯವ ಕೃಷಿಯತ್ತ ಹೊರಳಲಿ; ರಸಗೊಬ್ಬರ ಕಂಪನಿಗಳ ಬೆಣ್ಣೆ ಮಾತಿಗೆ ಮರುಳಾಗಬೇಡಿ ಎನ್ನುವ ಕಿವಿಮಾತನ್ನು ಸುಮಾರು ಎರಡೂವರೆ ಗಂಟೆಯ ಸುದೀರ್ಘ ಚಿತ್ರಕಥೆಯಲ್ಲಿ ‘ರಾಜಕೀಯ’ ಬೆರೆಸಿ ಹೇಳಿದ್ದಾರೆ.

ಚಿತ್ರದ ಮೂಲಕಥೆ ಆರಂಭವಾಗುವುದೇ ದ್ವಿತೀಯಾರ್ಧದಲ್ಲಿ. ಇದಕ್ಕೆ ಪೀಠಿಕೆಯಾಗಿ ಮೊದಲಾರ್ಧವನ್ನು ಬಳಸಿಕೊಂಡಿದ್ದಾರೆ ನಿರ್ದೇಶಕರು. ಇಡೀ ಕಥೆಯು ಗಂಭೀರವಾಗಿದೆ. ಎಂಟು ಚಿನ್ನದ ಪದಕಗಳೊಂದಿಗೆ ಕೃಷಿ ಪದವಿ ಪಡೆದು ಹಳ್ಳಿಗೆ ಮರಳುವ ಸುಂದರೇಶ್ (ವಿಜಯ ರಾಘವೇಂದ್ರ) ತನ್ನ ಊರಿನ ರೈತರು ಸಾಂಪ್ರದಾಯಿಕ ಕೃಷಿಯತ್ತ ಮರಳಲಿ ಎನ್ನುವ ಆಶಯ ಹೊತ್ತವನು. ಈ ಪದ್ಧತಿಯ ಬಗ್ಗೆ ಆರಂಭದಲ್ಲೇ ತನ್ನ ಅಣ್ಣ ಪರಮೇಶಿಯೊಂದಿಗೆ(ನೀನಾಸಂ ಅಶ್ವಥ್‌) ವಾದಕ್ಕೆ ಇಳಿಯುವ ಸುಂದರೇಶ್‌ ತನ್ನ ಕೃಷಿ ಪದವಿಯ ಜ್ಞಾನವನ್ನು ಹರಿಯಬಿಡುತ್ತಾನೆ. ಆಧುನಿಕ ಕೃಷಿ ಪದ್ಧತಿಯನ್ನು ವಿರೋಧಿಸುವ ಸುಂದರೇಶ್‌, ಕಂಪನಿಗಳಿಂದ ಬಂದ ಕೆಲಸದ ಆಫರ್‌ಗಳನ್ನೂ ತಿರಸ್ಕರಿಸುತ್ತಾನೆ. ಕೃಷಿ ಪದವಿ ಪಡೆದವನಿಗೆ ನಗರದಲ್ಲೇನು ಕೆಲಸ; ರೈತರನ್ನು ಆತ್ಮಹತ್ಯೆಯ ಕೂಪಕ್ಕೆ ತಳ್ಳುವ ಇಂಥ ಕಂಪನಿಗಳಲ್ಲಿ ಕೆಲಸ ಬೇಡ ಎನ್ನುತ್ತಾ ತನ್ನ ನಿಲುವು ಸಡಿಲಿಸದೆ ಅಣ್ಣ, ಅತ್ತಿಗೆಯ ಕೋಪಕ್ಕೆ ಕಾರಣವಾಗುತ್ತಾನೆ. ಸಾಲ ಮಾಡಿ ತಮ್ಮನನ್ನು ಓದಿಸಿದ ಪರಮೇಶಿ ಪತ್ನಿಯ ಮಾತು ಕೇಳಿ ಆಸ್ತಿಯಲ್ಲಿ ಪಾಲು ಕೇಳುತ್ತಾನೆ. ನಂತರದಲ್ಲಿ ಮನೆ ಬಿಟ್ಟು ಪಟ್ಟಣ ಸೇರಿಕೊಳ್ಳುತ್ತಾನೆ. ತನ್ನೊಂದಿಗೇ ಕಾಲೇಜಿನಲ್ಲಿ ಓದಿದ್ದ ‘ಸಂಪಿಗೆ’ (ಹರ್ಷಿಕಾ ಪೂಣಚ್ಚ) ಎನ್ನುವ ಶ್ರೀಮಂತ ಕುಟುಂಬದ ಹುಡುಗಿಯನ್ನು ಮದುವೆಯಾಗುವ ಸುಂದರೇಶ್, ಹೊಲದಲ್ಲಿ ಸಾವಯವ ಕೃಷಿ ಅನುಸರಿಸಿ ಬಂಪರ್‌ ಬೆಳೆ ಬೆಳೆಯುತ್ತಾನೆ. ಇದೇ ಸಂದರ್ಭದಲ್ಲಿ ಸ್ಥಿರಾಸ್ತಿಯಲ್ಲಿ ತನ್ನ ಪಾಲನ್ನು ಕಂಪನಿಯೊಂದಕ್ಕೆ ಪರಮೇಶಿ ಮಾರುತ್ತಾನೆ. ಕಥೆ ಆರಂಭವಾಗುವುದೇ ಇಲ್ಲಿಂದ. ಮುಂದೆ ಊರಿನ ರೈತರ ಜಮೀನನ್ನು ಕಂಪನಿಯೊಂದರಿಂದ ಸುಂದರೇಶ ಹೇಗೆ ಕಾಪಾಡುತ್ತಾನೆ ಎನ್ನುವುದೇ ಮುಂದಿನ ಕಥೆ. ಈ ಎಲ್ಲ ಕಥೆಯ ಹಿನ್ನೆಲೆಯಲ್ಲಿ ‘ಕಾಸಿನಸರ’ವೂ ಸಾಗುತ್ತದೆ.

ಚಿತ್ರಕಥೆಯ ಹಲವು ಸನ್ನಿವೇಶಗಳು ಬಹಳ ಕೃತಕವಾಗಿವೆ ಎನಿಸುತ್ತದೆ. ಆರಂಭದಲ್ಲಿ ಪರಮೇಶಿ ಹಾಗೂ ಆತನ ಪತ್ನಿಯಲ್ಲಿ ಆಗುವ ಬದಲಾವಣೆ, ಕ್ಲೈಮ್ಯಾಕ್ಸ್‌ನಲ್ಲಿ ಅವರು ಮತ್ತೆ ಕುಟುಂಬಕ್ಕೆ ಮರಳುವುದು ವೀಕ್ಷಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಹಲವು ದೃಶ್ಯಗಳು ಅನಗತ್ಯ ಎನಿಸುವಷ್ಟಿದೆ. ಇದನ್ನೇ ಚೊಕ್ಕವಾಗಿ ಕಟ್ಟಿಕೊಟ್ಟಿದ್ದರೆ ಸುಮಾರು ಅರ್ಧಗಂಟೆಯಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು. ತೆರೆಯಲ್ಲಿದ್ದಷ್ಟು ಸಮಯ ವಿಜಯ ರಾಘವೇಂದ್ರ ಹಾಗೂ ಹರ್ಷಿಕಾ ಪೂಣಚ್ಚ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಸುಂದರೇಶನ ತಾಯಿ ‘ತಾಯವ್ವ’ ಪಾತ್ರದಲ್ಲಿ ಉಮಾಶ್ರೀ ಅವರ ನಟನೆ ಮನಸ್ಸು ತಟ್ಟುತ್ತದೆ. ನೀನಾಸಂ ಸತೀಶ್‌ ಅವರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಂಡ್ಯ ರಮೇಶ್‌ ಅವರು ಬಣ್ಣಹಚ್ಚಿದ ‘ಪುಕ್ಸಟ್ಟೆ’ ಎಂಬ ಪಾತ್ರದ ಸೃಷ್ಟಿಯೇ ಕೃತಕವಾಗಿದೆ.

ಕಾಸಿನಸರಕ್ಕೆ ಇರುವ ಮೌಲ್ಯ, ಪರಂಪರೆ, ಸಂಪ್ರದಾಯವನ್ನು ಕೃಷಿಭೂಮಿಗೆ ಹೋಲಿಸಿ, ಉಳುವ ಭೂಮಿಯ ಮೌಲ್ಯವನ್ನು ನಿರ್ದೇಶಕರು ವೀಕ್ಷಕರಿಗೆ, ರೈತರಿಗೆ ಹೇಳಿದ್ದಾರೆ. ಮಾರುಕಟ್ಟೆಯ ಹಲವು ವಾಸ್ತವವನ್ನು ತೆರೆಗೆ ತಂದಿದ್ದಾರೆ. ಇಷ್ಟೆಲ್ಲಾ ವಿಷಯಗಳನ್ನು ಹೇಳಲು ತೆಗೆದುಕೊಂಡ ಅವಧಿ ಸುದೀರ್ಘವಾಗಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆಯಾಗುತ್ತದೆ. ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ರಾಜ್ಯ ಸರ್ಕಾರದ ಪ್ರಸಕ್ತ ಸಹಕಾರ ಸಚಿವರೇ ಏಕೆ ಬಂದರು ಎನ್ನುವ ನಿಗೂಢ ಪ್ರಶ್ನೆಯೂ ಉಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT