ಶುಕ್ರವಾರ, ಫೆಬ್ರವರಿ 26, 2021
30 °C

ಹಾಲಿವುಡ್‌ಗೆ ಕಾಜಲ್ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತ ಚಿತ್ರರಂಗ ಹಾಗೂ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿರುವವರು ನಟಿ ಕಾಜಲ್‌ ಅಗರವಾಲ್‌. ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ನಟಿ ಸುದ್ದಿ ಮಾಡುತ್ತಿದ್ದಾರೆ. ವಿಷ್ಯ ಏನು ಅಂದ್ರೆ ಹಾಲಿವುಡ್‌ ಚಿತ್ರಕ್ಕೆ ಕಾಜಲ್‌ ಸಹಿ ಮಾಡಿದ್ದಾರೆ. 

ಇಂಗ್ಲಿಷ್‌ ಹಾಗೂ ತೆಲುಗು ಎರಡೂ ಭಾಷೆಯಲ್ಲಿ  ಬಿಡುಗಡೆಗೊಳ್ಳಲಿರುವ ನಟ, ನಿರ್ಮಾಪಕ ವಿಷ್ಣು ಮಂಚು ಅವರ ಚಿತ್ರದಲ್ಲಿ ಕಾಜಲ್‌ ನಾಯಕಿಯಾಗಿ ನಟಿಸಲಿದ್ದಾರೆ. ಹಿಂದಿಯ ‘ಕ್ಯೂ ಹೋ ಗಯಾ ನಾ’ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪ್ರವೇಶಿಸಿದ್ದರು. ಬಳಿಕ ತೆಲುಗು ಚಿತ್ರ ‘ಲಕ್ಷ್ಮೀ ಕಲ್ಯಾಣಂ’ ಮೂಲಕ 2007ರಲ್ಲಿ ಟಾಲಿವುಡ್‌ಗೆ ಬಂದಿದ್ದರು. ಆ ಬಳಿಕ ಅವರು ತಿರುಗಿ ನೋಡಿದ್ದೇ ಇಲ್ಲ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್‌ ನಟಿಯಾಗಿ ಬೆಳೆದಿದ್ದರು. ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇಲ್ಲಿನ ಖ್ಯಾತ ನಟಿಯರಲ್ಲಿ ಅವರೂ ಒಬ್ಬರು. 

ಈಗ ಅತಿ ದೊಡ್ಡ ಬಜೆಟ್‌ ಚಿತ್ರವಾಗಿರುವ ವಿಷ್ಣು ಮಂಚು ಅವರ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರ ಎಲ್ಲಾ ವರ್ಗದ ಜನರಿಗೆ ಇಷ್ಟವಾಗಲಿದೆ. ಈ ಚಿತ್ರಕ್ಕಾಗಿ ನಾಯಕಿಯರ ಹುಡುಕಾಟ ಮಾಡುತ್ತಿದ್ದಾಗ ನಿರ್ಮಾಪಕ ವಿಷ್ಣು ಮಂಚು ಅವರು ಕಾಜಲ್‌ ಅಗರ್‌ವಾಲ್‌ ಅವರ ಹೆಸರನ್ನು ಸೂಚಿಸಿದ್ದಾರೆ. ಚಿತ್ರಕತೆ ಅವರಿಗೆ ಇಷ್ಟವಾಗಿದ್ದು, ನಿರ್ದೇಶಕರ ಜೊತೆ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ. 

‘ಮಾತುಕತೆ ಇನ್ನೂ ಮೊದಲ ಹಂತದಲ್ಲಿದೆ. ಕಾಜಲ್‌ ಅವರಿಗೆ ಚಿತ್ರಕತೆ ತುಂಬಾ ಇಷ್ಟವಾಗಿದೆ. ಅವರು ಬೇಗ ಚಿತ್ರಕ್ಕೆ ಸಹಿ ಮಾಡಲಿದ್ದಾರೆ. ಅವರು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತಾ ಈ ಪಾತ್ರ ವಿಭಿನ್ನವಾಗಿರಲಿದೆ’ ಎಂದು ಚಿತ್ರದ ಮೂಲಗಳು ತಿಳಿಸಿವೆ. 

ಕಾಜಲ್‌ ಈಗಾಗಲೇ ಬಿಗ್‌ ಬಜೆಟ್‌ ಚಿತ್ರಗಳಾದ ಪ್ಯಾರಿಸ್‌ ಪ್ಯಾರಿಸ್‌, ಕೋಮಲಿ, ರಣರಂಗಂನಲ್ಲಿ ನಟಿಸುತ್ತಿದ್ದಾರೆ. ಈ ಹಾಲಿವುಡ್‌ ಚಿತ್ರವಲ್ಲದೇ ಮತ್ತೊಂದು ಮಹಿಳಾ ಪ್ರದಾನ ಕತೆಯುಳ್ಳ ಚಿತ್ರವನ್ನೂ ಕಾಜಲ್‌ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಇದೆ. ಈ ಚಿತ್ರವನ್ನು ಪ್ರಶಾಂತ್‌ ವರ್ಮಾ ನಿರ್ದೇಶನ ಮಾಡುತ್ತಿದ್ದು, ಕಲ್ಕು ಖ್ಯಾತಿಯ ಸಿ ಕಲ್ಯಾಣ್‌ ನಿರ್ಮಾಣ ಮಾಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು