ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ ಸೆಲೆಬ್ರಿಟಿಯೇ ಇರಬಹುದು, ಆದರೆ...: ಮುಂಬೈ ಕೋರ್ಟ್‌ ತಪರಾಕಿ

Last Updated 24 ಮಾರ್ಚ್ 2022, 12:30 IST
ಅಕ್ಷರ ಗಾತ್ರ

ಮುಂಬೈ: ನಟಿ ಕಂಗನಾ ರನೌತ್‌ ಅವರು ಸೆಲೆಬ್ರಿಟಿಯೇ ಆಗಿರಬಹುದು. ಅವರಿಗೆ ವೃತ್ತಿಪರ ನಿಯಮಿತ ಕೆಲಸಗಳು ಇರಬಹುದು. ಆದರೆ, ಅವರು ಒಂದು ಪ್ರಕರಣದ ಆರೋಪಿ ಎಂಬುದನ್ನು ಮರೆಯಬಾರದು ಎಂದು ಮುಂಬೈ ಸ್ಥಳೀಯ ಕೋರ್ಟ್‌ ತಪರಾಕಿ ಹಾಕಿದೆ.

ಬಾಲಿವುಡ್‌ನ ಗೀತೆ ರಚನೆಕಾರ ಜಾವೇದ್‌ ಅಖ್ತರ್‌ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಎದುರಿಸುತ್ತಿರುವ ಕಂಗನಾ ರನೌತ್‌ ವಿಚಾರಣೆಗೆ ಹಾಜರಾಗುವ ಪ್ರಕ್ರಿಯೆಯಿಂದ ಶಾಶ್ವತ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಹಿಂದಿ ಸಿನಿಮಾ ಕ್ಷೇತ್ರದ ದೊಡ್ಡ ನಟಿಯರ ಪೈಕಿ ತಾವು ಒಬ್ಬರಾಗಿದ್ದು, ದೇಶ ಮತ್ತು ವಿದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿರಬೇಕಾಗುತ್ತದೆ. ಹಾಗಾಗಿ ಕೋರ್ಟ್‌ಗೆ ಹಾಜರಾಗುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ಅಂಧೇರಿ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಆರ್‌ ಖಾನ್‌ ಅವರು ಮಂಗಳವಾರ ಕಂಗನಾ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಕೋರ್ಟ್‌ ಆದೇಶದ ವಿಸ್ತೃತ ವರದಿ ಗುರುವಾರ ಮಾಧ್ಯಮಕ್ಕೆ ಸಿಕ್ಕಿದ್ದು, ಆರೋಪಿಯು ಈ ಪ್ರಕರಣದಲ್ಲಿ ತನ್ನ ಮನಸ್ಸಿಗೆ ಬಂದಂತೆ ಕೋರ್ಟ್‌ಗೆ ನಿರ್ದೇಶನ ನೀಡುತ್ತಿದ್ದಾರೆ. ಸಧ್ಯಕ್ಕೆ ಅವರು ವಿಚಾರಣೆಯಿಂದ ಶಾಶ್ವತ ವಿನಾಯಿತಿ ಕೋರಿ ಹಕ್ಕೊತ್ತಾಯ ಮಾಡುವಂತಿಲ್ಲ. ಆರೋಪಿಯು ಕೋರ್ಟ್‌ನ ನೀತಿ-ನಿಯಮಗಳನ್ನು ಪಾಲಿಸಬೇಕು' ಎಂದು ತಿಳಿಸಿದೆ.

ಇದುವರೆಗೆ ಗೈರಾದ ದಿನಾಂಕಗಳಿಗೆ ಕಂಗನಾರ ಕೋರಿಕೆ ಮೇರೆಗೆ ಯಾವುದೇ ದಂಡ ವಿಧಿಸದೆ ಅನುಮತಿ ನೀಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್‌ ಆದೇಶದಲ್ಲಿ ತಿಳಿಸಿದ್ದಾರೆ.

ನವೆಂಬರ್‌ 2020ರಲ್ಲಿ ಕಂಗನಾರ ವಿರುದ್ಧ ಅಖ್ತರ್‌ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಟಿವಿ ಸಂದರ್ಶನವೊಂದರಲ್ಲಿ ತಮ್ಮ ವಿರುದ್ಧ ಹೇಳಿಕೆ ನೀಡುವ ಮೂಲಕ ತಮ್ಮ ಘನತೆಗೆ ಕುಂದು ತಂದಿರುವುದಾಗಿ ಆರೋಪಿಸಿ ಅಖ್ತರ್‌ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT