ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಕನ್ನಡ ಚಿತ್ರರಂಗ ಸಂಪೂರ್ಣ ಸ್ತಬ್ಧ

ಚಿತ್ರೋದ್ಯಮಕ್ಕೆ ಪೆಟ್ಟು: ಫಿಲ್ಮ್‌ ಚೇಂಬರ್‌ ಸಭೆ ನಾಳೆ
Last Updated 14 ಮಾರ್ಚ್ 2020, 11:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ 19 ಭೀತಿಯ ಪರಿಣಾಮ ರಾಜ್ಯ ಸರ್ಕಾರ ಒಂದು ವಾರ ಕಾಲ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿರುವುದರಿಂದ ಕನ್ನಡ ಚಿತ್ರರಂಗ ಸಂಪೂರ್ಣ ಸ್ಥಬ್ತಗೊಂಡಿದೆ. ವರನಟ ಡಾ.ರಾಜ್‌ಕುಮಾರ್‌ ಅವರನ್ನು ದಂತಚೋರ ವೀರಪ್ಪನ್‌ ಅಪಹರಿಸಿದ್ದಾಗ 108 ದಿನಗಳ ಕಾಲ ಚಿತ್ರರಂಗ ಸ್ಥಗಿತಗೊಂಡಿತ್ತು. ಅದಾದ ಬಳಿಕ ಈಗ ಚಿತ್ರೋದ್ಯಮ ಬಂದ್‌ ಆಗಿದೆ.

ಶುಕ್ರವಾರ ತೆರೆ ಕಂಡಿದ್ದ ‘ಶಿವಾರ್ಜುನ’, ‘5 ಅಡಿ 7 ಅಂಗುಲ’, ‘ಅಂಬಾನಿ ಪುತ್ರ’, ‘ನರಗುಂದ ಬಂಡಾಯ’ ಸಿನಿಮಾಗಳ ಪ್ರದರ್ಶನ ಸ್ಥಗಿತಗೊಂಡಿದೆ. ಗಾಂಧಿನಗರದಲ್ಲಿರುವ ನರ್ತಕಿ, ಸಂತೋಷ್‌, ತ್ರಿವೇಣಿ, ಅನುಪಮ, ಸ್ವಪ್ನ ಚಿತ್ರಮಂದಿರಗಳು ಸೇರಿದಂತೆ ಮಲ್ಟಿಫ್ಲೆಕ್ಸ್‌ಗಳ ಬಹುಪರದೆಗಳಲ್ಲೂ ಪ್ರದರ್ಶನ ರದ್ದಾಗಿದೆ. ವಾರಾಂತ್ಯದಲ್ಲಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದ ಥಿಯೇಟರ್‌ಗಳು ಭಣಗುಡುತ್ತಿವೆ. ಚಿತ್ರಮಂದಿರಗಳ ಮುಂಭಾಗ ‘ಕೋವಿಡ್‌ ಭೀತಿಯಿಂದಾಗಿ ಸರ್ಕಾರದ ಸೂಚನೆಗೆ ಮೇರೆಗೆ ಸಿನಿಮಾ ಪ್ರದರ್ಶನ ಇರುವುದಿಲ್ಲ’ ಎಂಬ ಫಲಕ ಅಳವಡಿಸಲಾಗಿದೆ.

ಸರ್ಕಾರದ ಆದೇಶದಿಂದಾಗಿ ಕನ್ನಡ ಚಿತ್ರೋದ್ಯಮಕ್ಕೆ ₹ 60 ಕೋಟಿ ನಷ್ಟವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಟಿಕೆಟ್‌ವೊಂದಕ್ಕೆ ಶೇಕಡ 18ರಷ್ಟು ಜಿಎಸ್‌ಟಿ ಪಾವತಿಯಾಗುತ್ತದೆ. ಹಾಗಾಗಿ, ದಿನವೊಂದಕ್ಕೆ ಸರ್ಕಾರಗಳ ಬೊಕ್ಕಸಕ್ಕೆ ₹ 15 ಲಕ್ಷಕ್ಕೂ ಹೆಚ್ಚು ತೆರಿಗೆ ನಷ್ಟವಾಗಲಿದೆ. ಜೊತೆಗೆ, ವಾರಕ್ಕೆ ಒಂದು ಥಿಯೇಟರ್‌ಗೆ ₹ 60 ಸಾವಿರದಿಂದ ₹ 1 ಲಕ್ಷದವರೆಗೆ ನಷ್ಟವಾಗಲಿದೆ.

ಸ್ಟಾರ್‌ ನಟರ ಸಿನಿಮಾಗಳ ಶೂಟಿಂಗ್‌ ಮೇಲೂ ಕೋವಿಡ್‌ ಭೀತಿ ಪರಿಣಾಮ ಬೀರಿದೆ. ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ನಟ ಪುನೀತ್‌ ರಾಜ್‌ಕುಮಾರ್‌ ನಾಯಕರಾಗಿರುವ ‘ಯುವರತ್ನ’ ಚಿತ್ರದ ಎರಡು ಹಾಡುಗಳ ಶೂಟಿಂಗ್‌ಗಾಗಿ ಯುರೋಪ್‌ಗೆ ತೆರಳಲು ನಿರ್ಧರಿಸಿದ್ದ ಚಿತ್ರತಂಡ ಕೋವಿಡ್‌ ಭಯದಿಂದ ಹಿಂದಡಿ ಇಟ್ಟಿದೆ. ಯೋಗರಾಜ್ ಭಟ್‌ ನಿರ್ದೇಶನದ ಗಣೇಶ್‌ ನಾಯಕರಾಗಿರುವ ‘ಗಾಳಿಪಟ 2’, ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’, ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇರುವ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರದ ಮೇಲೂ ಪರಿಣಾಮ ಬೀರಿದೆ.

ಮಾರ್ಚ್‌ 16ಕ್ಕೆ ಸಭೆ

ಯುಗಾದಿ ಹಬ್ಬದ ಅವಧಿಯಲ್ಲಿ ಸಿನಿಮಾಗಳ ಕಲೆಕ್ಷನ್‌ ಹೆಚ್ಚಿರುತ್ತದೆ. ಥಿಯೇಟರ್‌ಗಳ ಸ್ಥಗಿತದಿಂದ ಚಿತ್ರೋದ್ಯಮಕ್ಕೆ ಆಗುವ ನಷ್ಟದ ಬಗ್ಗೆ ಚರ್ಚಿಸಲು ಮಾರ್ಚ್‌ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಿರ್ಮಾಪಕರು, ವಿತರಕರು, ಪ್ರದರ್ಶಕರು ಮತ್ತು ಚಿತ್ರರಂಗದ ಹಿರಿಯ ನಟ, ನಟಿಯರ ಸಭೆ ಕರೆದಿದೆ.

‘ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ಆದೇಶ ನೀಡಿದೆ. ಅದನ್ನು ಪಾಲಿಸುವುದು ಮಂಡಳಿಯು ಜವಾಬ್ದಾರಿ. ಕೋವಿಡ್‌ ಭೀತಿ ಮುಂದುವರಿದರೆ ಸಿನಿಮಾಗಳ ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರಿಂದ ಉದ್ಯಮ ಚೇತರಿಸಿಕೊಳ್ಳಲು ಕಷ್ಟಕರವಾಗಲಿದೆ. ನಿರ್ಮಾಪಕರು ಭಾರೀ ನಷ್ಟ ಅನುಭವಿಸಲಿದ್ದಾರೆ. ಹಾಗಾಗಿ, ಸಭೆಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಡಿ.ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT