ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಹೆಜ್ಜೆ: ನೆಮ್ಮದಿ ಜೀವನಕ್ಕೆ ನಟಿ ಬಿ.ಜಯಾ ಸೂತ್ರ

Last Updated 3 ಜೂನ್ 2021, 14:49 IST
ಅಕ್ಷರ ಗಾತ್ರ


2012ರಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದ್ದ `ಬೆಳ್ಳಿ ಹೆಜ್ಜೆ' ಮುಖಾಮುಖಿ ಸಂವಾದ ಕಾರ್ಯಕ್ರಮದಲ್ಲಿ ನಟಿ ಬಿ.ಜಯಾ ಅವರು ಮನದಾಳದ ಮಾತುಗಳನ್ನು ಬಿಚ್ಚಿದ್ದರು. 2012ರ ಮಾರ್ಚ್‌ 25ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಅದರ ವರದಿ ಇಲ್ಲಿದೆ.

`ಕಲಾವಿದರು ಬಿಡುವಿಲ್ಲದೆ ದುಡಿಯಬೇಕು. ಚಿತ್ರೋದ್ಯಮ ಕೂಡ ಪ್ರತಿಭೆಯನ್ನು ಗುರುತಿಸಿ ಕಲಾವಿದರಿಗೆ ನಿರಂತರ ಅವಕಾಶ ನೀಡಬೇಕು. ಆಗ ಮಾತ್ರ ಕಲಾವಿದರು ಸಂಕಷ್ಟಕ್ಕೆ ಸಿಲುಕದೆ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ~ ಎಂದು ಹಿರಿಯ ನಟಿ ಬಿ. ಜಯಾ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದ್ದ 'ಬೆಳ್ಳಿ ಹೆಜ್ಜೆ' ಮುಖಾಮುಖಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ 56 ವರ್ಷಗಳಿಂದ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ಹಿರಿಯ ನಟಿ ಜಯಾ, `ಕನ್ನಡ ಚಿತ್ರರಂಗ ನನಗೆ ಒಳ್ಳೆಯ ಹೆಸರು, ತೃಪ್ತಿ, ನೆಮ್ಮದಿಯನ್ನೂ ಕೊಟ್ಟಿದೆ. ಇದಕ್ಕೆಲ್ಲಾ ನನ್ನಲ್ಲಿನ ಪ್ರತಿಭೆ ಜತೆಗೆ, ಉತ್ಸಾಹವೂ ಕಾರಣ ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.

`ನಾನು ನಾಟಕಗಳಲ್ಲಿ ಮೊದಲಿನಿಂದಲೂ ನಟಿಸಿದ್ದರಿಂದ ಚಿತ್ರರಂಗದಲ್ಲಿಯೂ ಕ್ಯಾಮೆರಾ ಎದುರಿಸಲು ಕಷ್ಟವಾಗಲಿಲ್ಲ. ಇಂದಿನ ಚಿತ್ರರಂಗದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಟೆಲಿವಿಷನ್‌ಗಳು ಬಂದ ನಂತರ ನಾಟಕಗಳನ್ನು ನೋಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಇದರಿಂದ ನಾನು ನನ್ನ ನಾಟಕ ಕಂಪೆನಿಯನ್ನೂ ಮುಚ್ಚಬೇಕಾಯಿತು ಎಂದರು.

ಓದಿ– ಖ್ಯಾತ ನಟಿ ಬಿ.ಜಯಾ ನಿಧನ

ಹಾಸ್ಯ ಪಾತ್ರ ಮಾಡಿದವರು ಎಲ್ಲ ಪಾತ್ರಗಳಿಗೂ ಸೈ: `ಹಾಸ್ಯ ಪಾತ್ರ ಮಾಡಿದವರು ಯಾವುದೇ ಪಾತ್ರ ನಿರ್ವಹಿಸಿ ಸೈ ಅನ್ನಿಸಿಕೊಳ್ಳಬಹುದು. ಆದರೆ, ಇಂದಿನ ಚಿತ್ರಗಳಲ್ಲಿ ಹಾಸ್ಯವೇ ಇಲ್ಲ. ನಟ-ನಟಿಯರೇ ಹಾಸ್ಯ ಪಾತ್ರಗಳನ್ನು ನಿರ್ವಹಿಸುವಂತಾಗಿದೆ. ಇಂದಿನ ಚಿತ್ರಗಳಲ್ಲಿ ಹಾಸ್ಯವನ್ನು ಕೀಳಾಗಿ ಬಳಸಿಕೊಳ್ಳುತ್ತಿರುವುದರಲ್ಲಿ ಕಲಾವಿದರ ಪಾತ್ರವಿಲ್ಲ. ಬದಲಿಗೆ ನಿರ್ದೇಶಕರು ಹಾಗೂ ಸಂಭಾಷಣೆಕಾರರೇ ಇದರ ಹೊಣೆ ಹೊರಬೇಕು ಎಂದು ಅವರು ಪ್ರತಿಕ್ರಿಯಿಸಿದರು.

`ಮದ್ರಾಸ್‌ನಿಂದ ವಾಪಸಾಗುಷ್ಟರಲ್ಲಿ ವಯಸ್ಸಾಗಿತ್ತು. ಇದರಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ~ ಎಂದು ಹೇಳಿದ ಅವರು, ಸಂವಾದ ನಡೆಸಿಕೊಟ್ಟ ನಿರೂಪಕರು ಎಷ್ಟೇ ಪ್ರಯತ್ನ ಮಾಡಿದರೂ ತಮ್ಮ ಯೌವ್ವನದ ಗುಟ್ಟನ್ನು ಬಿಟ್ಟುಕೊಡಲೇ ಇಲ್ಲ. ಬದಲಿಗೆ, ಅಭ್ಯಾಸ ಬಲದಿಂದ ಇಂದಿಗೂ ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ. ಕಲೆಗೆ ಯಾವುದೇ ವಯಸ್ಸಿನ ಅಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಂದು ದುಡ್ಡಿಗೆ ಬೆಲೆ ಇತ್ತು: `ಈ ಹಿಂದೆ ಒಬ್ಬ ಕಲಾವಿದೆ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆದರೂ ದುಡ್ಡಿಗೆ ಬಹಳ ಬೆಲೆಯಿತ್ತು. ಈಗ ಲಕ್ಷಗಟ್ಟಲೆ ದುಡಿದರೂ ಹಣಕ್ಕೆ ಬೆಲೆ ಇಲ್ಲ. ಅಂದು ಇಡೀ ಕಲಾವಿದರು ಒಂದು ಕುಟುಂಬದಂತಿದ್ದರು. ಎಲ್ಲರ ನಡುವಿನ ಸ್ನೇಹ-ಸಂಬಂಧ ಪರಸ್ಪರ ಅನ್ಯೋನ್ಯವಾಗಿತ್ತು.

ಯಾರಿಗೂ ದ್ವೇಷ-ಅಸೂಯೆ ಮನೋಭಾವ ಇರಲಿಲ್ಲ~ ಎಂದು `ಭಕ್ತ ಪ್ರಹ್ಲಾದ~ ಚಿತ್ರದ ಮೂಲಕ ಬಾಲ ನಟಿಯಾಗಿ ಬೆಳ್ಳಿ ತೆರೆ ಪ್ರವೇಶಿಸಿದ ಕಲಾವಿದೆ ಬಿ. ಜಯಾ ಅಂದು ಹಾಗೂ ಇಂದಿನ ಚಿತ್ರರಂಗದ ನಡುವಿನ ವ್ಯತ್ಯಾಸವನ್ನು ಬಿಡಿಸಿಟ್ಟರು.ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಮಾತನಾಡಿದರು. ಪತ್ರಕರ್ತ ಗಣಪತಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

`ಬೆಳ್ಳಿ ಹೆಜ್ಜೆ ಹಾಕಲು ಜಯಮ್ಮ ಕಾರಣ

`ನಮಗೆ ಮೊದಲು ಜಯಮ್ಮಳೇ ಐಶ್ವರ್ಯ ರೈ- ಹೇಮಾಮಾಲಿನಿ ಆಗಿದ್ದಳು. `ಬೆಳ್ಳಿ ಮೋಡ~ದಲ್ಲಿ ಆಕೆಯ ಜತೆ ನಟಿಸಿದ್ದರಿಂದ ನನ್ನ ಜನ್ಮ ಸಾರ್ಥಕ ಅನಿಸಿತು. ನಾನು ಚಿತ್ರರಂಗದಲ್ಲಿ ಬೆಳ್ಳಿ ಹೆಜ್ಜೆ ಹಾಕಲು ಬಿ.ಜಯಾ ಅವರೇ ಕಾರಣ~ ಎಂದು ನಟ, ನಿರ್ಮಾಪಕ ದ್ವಾರಕೀಶ್ ಹೇಳಿದರು.

`ನನ್ನನ್ನು ನಾಟಕಗಳಲ್ಲಿ ಅಭಿನಯಿಸಲು ತಯಾರು ಮಾಡಿದ್ದೇ ಜಯಾ. ನಾಟಕಗಳಲ್ಲಿ ಬಂದ ಹಣದಿಂದಲೇ ನಾನು ಎನ್.ಆರ್. ಕಾಲೋನಿಯಲ್ಲಿ ಮನೆ ಕಟ್ಟಿದೆ. ಜಯಾ ದೊಡ್ಡ ಬಂಗಲೆ ಕಟ್ಟದಿದ್ದರೂ ಎಲ್ಲರ ಮನಸ್ಸಿನಲ್ಲಿ ದೊಡ್ಡ ಬಂಗಲೆ ಕಟ್ಟಿದ್ದಾರೆ. ಅವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಆರ್ಥಿಕವಾಗಿ ಸಹಾಯ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT