ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚುಗತ್ತಿಯ ಕಥಾನಕ

Last Updated 20 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

‘ಬಿಚ್ಚುಗತ್ತಿ ಚಾಪ್ಟರ್‌ 1’ ಚಿತ್ರದುರ್ಗದ ಅಪ್ರತಿಮ ವೀರ ಭರಮಣ್ಣ ನಾಯಕನ ಕಥೆ ಆಧರಿಸಿದ ಐತಿಹಾಸಿಕ ಚಿತ್ರ. ‘ಅಲೆಮಾರಿ’, ‘ವಿಕ್ಟರಿ 2’ ಮತ್ತು ‘ಕಾಲೇಜ್‌ಕುಮಾರ್‌’ ಚಿತ್ರಗಳನ್ನು ನಿರ್ದೇಶಿಸಿದ್ದ ಹರಿ ಸಂತೋಷ್‌ ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ಬಿ.ಎಲ್‌. ವೇಣು ಅವರ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಅವರೇ ಇದಕ್ಕೆ ಚಿತ್ರಕಥೆ ಬರೆದಿದ್ದಾರೆ. ಹದಿನಾರನೇ ಶತಮಾನದ ಅಂತ್ಯವು ದುರ್ಗದ ಕರಾಳ ದಿನಗಳಾಗಿದ್ದವು. ಆಗ ಅಧಿಕಾರಕ್ಕಾಗಿ ನಡೆದ ನೆತ್ತರಿನ ಸುತ್ತ ಕಥೆ ಹೆಣೆಯಲಾಗಿದೆ. ದಳವಾಯಿ ದಂಗೆ ಬಗ್ಗೆ ಸಿನಿಮಾ ಕಟ್ಟಿಕೊಡಲಿದೆಯಂತೆ. ಫೆ. 28ರಂದು ಚಿತ್ರ ಬಿಡುಗಡೆಯಾಗಲಿದೆ. ಇತ್ತೀಚೆಗೆ ಟ್ರೇಲರ್‌ ಬಿಡುಗಡೆಗೊಂಡಿದ್ದು, ಜನರಿಂದ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಾಗಿದೆ. ಕೋಟೆನಾಡಿನ ಐತಿಹಾಸಿಕ ಕ್ಷಣಗಳ ತುಣುಕುಗಳು ನೋಡುಗರಿಗೆ ಬೆರಗು ಹುಟ್ಟಿಸುತ್ತವೆ.

ಭರಮಣ್ಣನಾಗಿ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್‌ ಬಣ್ಣ ಹಚ್ಚಿದ್ದಾರೆ. ಈ ಪಾತ್ರಕ್ಕಾಗಿ ಅವರು ದೇಹ ದಂಡಿಸಿರುವುದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತದೆ. ಚಿತ್ರಕ್ಕಾಗಿ ಅವರು ಕುದುರೆ ಸವಾರಿ, ಕಳರಿಪಯಟ್ಟು ಕಲಿತಿರುವುದು ವಿಶೇಷ.

ನಟಿ ಹರಿಪ್ರಿಯಾ ಅವರದು ರಾಣಿ ಸಿದ್ಧಾಂಬೆಯ ಪಾತ್ರ. ಇದಕ್ಕಾಗಿ ಅವರು ಕತ್ತಿವರಸೆ, ಕುದುರೆ ಸವಾರಿ ಕಲಿತು ನಟಿಸಿದ್ದಾರೆ.

ಚಿತ್ರದುರ್ಗದ ಕೋಟೆಯಲ್ಲಿ ಸಿನಿಮಾದ ಶೂಟಿಂಗ್‌ ನಡೆಸಲಾಗಿದೆ. ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗುರುಪ್ರಶಾಂತ್‌ ರಾಜ್‌ ಅವರದ್ದು. ಎಸ್‌.‍ಪಿ. ಗಣೇಶ್‌ ಮತ್ತು ತೇಜಸ್ವಿ ಬಂಡವಾಳ ಹೂಡಿದ್ದಾರೆ. ಭರತ್‌ರಾಜ್‌ ಅವರ ಸಂಕಲನವಿದೆ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT