ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಸಂಭಾವನೆ ಪರ ಕರಣ್ ದನಿ

Last Updated 21 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಕಲಾವಿದರಿಗೆ ನೀಡುವ ಸಂಭಾವನೆಯಲ್ಲಿನ ತಾರತಮ್ಯದ ವಿರುದ್ಧ ಕರಣ್ ಜೋಹರ್ ದನಿ ಎತ್ತಿದ್ದಾರೆ. ತಮ್ಮ ಸಾರಥ್ಯದ ಧರ್ಮ ಪ್ರೊಡಕ್ಷನ್ಸ್‌ನಲ್ಲಿ ಸಂಭಾವನೆ ವಿಚಾರದಲ್ಲಿ ತಾರತಮ್ಯ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಕಲಾವಿದರ ಕಲೆ, ಸಾಮರ್ಥ್ಯಕ್ಕೆ ಒಳ್ಳೆಯ ಸಂಭಾವನೆಯು ಪುರುಷ–ಮಹಿಳೆ ಎಂಬ ಭೇದ ಇಲ್ಲದೆ ಸಿಗಬೇಕು. ಇದು ಧರ್ಮ ಪ್ರೊಡಕ್ಷನ್ಸ್‌ ಸಂಸ್ಥೆ ಪಾಲಿಸಿಕೊಂಡು ಬಂದಿರುವ ಮೌಲ್ಯ ಎಂದು ಜೋಹರ್ ಹೇಳಿದ್ದಾರೆ. ‘ನಾವು ಇಲ್ಲಿ ವಾಣಿಜ್ಯ ವಹಿವಾಟು ನಡೆಸುತ್ತಿದ್ದೇವೆ. ಜೊತೆಗೆ, ಕಲೆಯನ್ನೂ ಪೋಷಿಸುತ್ತ ಇದ್ದೇವೆ. ಇವೆರಡರಲ್ಲಿ ಯಾವುದೋ ಒಂದು ಮಾತ್ರ ನಮಗೆ ಸಂಬಂಧಿಸಿದ್ದು ಎಂಬ ಧೋರಣೆ ಹೊಂದಿಲ್ಲ. ಮಹಿಳೆಯರು ಪ್ರಧಾನವಾಗಿ ಕೆಲಸ ಮಾಡುವ ಸಿನಿಮಾಗಳಲ್ಲಿ ಕೂಡ ಸಂಭಾವನೆ ವಿಚಾರದಲ್ಲಿ ತಾರತಮ್ಯ ಆಗದಂತೆ ನಾವು ಯಾವತ್ತಿಗೂ ನೋಡಿಕೊಂಡಿದ್ದೇವೆ’ ಎಂದು ಕರಣ್ ಹೇಳಿಕೊಂಡಿದ್ದಾರೆ.

ಈಗೀಗ ಸಿನಿಮಾ ಲಾಭಾಂಶದಲ್ಲಿ ಒಂದು ಪಾಲನ್ನು ನೀಡುವ ಪ್ರವೃತ್ತಿ ಜಾರಿಗೆ ಬಂದಿದೆ. ಅಷ್ಟೇ ಅಲ್ಲ, ಸಿನಿಮಾದ ನೇತೃತ್ವ ವಹಿಸಿದ ಮಹಿಳೆಯರಿಗೆ ‘ನಿರ್ಮಾಪಕಿ’ ಎಂಬ ಗೌರವ ನೀಡುವುದೂ ಇದೆ ಎಂದು ಕರಣ್ ಜೋಹರ್‌ ಸುದ್ದಿಗಾರರ ಬಳಿ ಹೇಳಿದ್ದಾರೆ. ಈ ವಿಚಾರಗಳನ್ನೆಲ್ಲ ಅವರು ಹೇಳಿದ್ದು ತಾವು ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ‘ಗುಡ್‌ ನ್ಯೂಸ್‌’ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ.

ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ದಿಲ್ಜಿತ್ ದೋಸಾಂಜ್ ಮತ್ತು ಕಿಯಾರಾ ಅಡ್ವಾಣಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಾನ ಸಂಭಾವನೆ ಪರವಾಗಿ ಅಕ್ಷಯ್ ಕುಮಾರ್ ಅವರೂ ಮಾತನಾಡಿದ್ದಾರೆ.

‘ನಾನು ಧರ್ಮ ಪ್ರೊಡಕ್ಷನ್ಸ್‌ ಸೇರಿದಂತೆ ಇತರ ಹಲವು ನಿರ್ಮಾಣ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ಸಮಾನ ಸಂಭಾವನೆ ವಿಚಾರದಲ್ಲಿ ಕರಣ್ ಆಡಿರುವ ಮಾತುಗಳು ನನಗೆ ಸಂತಸ ತಂದಿವೆ’ ಎಂದು ಅಕ್ಷಯ್ ಹೇಳಿದ್ದಾರೆ.

ಸಮಾನ ಸಂಭಾವನೆ ವಿಚಾರದಲ್ಲಿ ಕರಣ್ ಮತ್ತು ಅಕ್ಷಯ್ ಆಡಿದ ಮಾತುಗಳಿಗೆ ಪೂರಕವಾಗಿ ಅಥವಾ ಪ್ರತಿಕ್ರಿಯೆಯ ರೂಪದಲ್ಲಿ ಕಿಯರಾ ಮತ್ತು ಕರೀನಾ ಏನನ್ನೂ ಹೇಳಲಿಲ್ಲ. ಏನಾದರೂ ಹೇಳುವಂತೆ ಅವರನ್ನು ಯಾರೂ ಒತ್ತಾಯಿಸಲೂ ಇಲ್ಲ! ಕರ‌ಣ್ ಮತ್ತು ಅಕ್ಷಯ್ ಅವರು ‘ಬ್ರದರ್ಸ್‌’ ಹಾಗೂ ‘ಕೇಸರಿ’ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT