ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮೋಡ ಸರಿದು ಹೊಸ ಹಾಡು ತೆರೆದು...

Last Updated 25 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

‘ಒಬ್ಬ ಹುಡುಗನ ಜೀವನದಲ್ಲಿ ಕಾರ್ಮೋಡಗಳು ಕವಿದ ವಾತಾವರಣ ಇರುತ್ತದೆ. ಆ ಕಾರ್ಮೋಡಗಳು ಸರಿದ ನಂತರ ಏನಾಗುತ್ತದೆ ಎಂಬುದು ಸಿನಿಮಾ ಕಥೆ. ಆ ಹುಡುಗನ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ನಾವು ಕೆಲವರು ಸಹಾಯ ಮಾಡುತ್ತೇವೆ...’ ಎಂದರು ಕಲಾವಿದ ಶ್ರೀಧರ್.

ಕುದುರೆಮುಖ ಟಾಕೀಸ್ ಲಾಂಛನದ ಅಡಿ ನಿರ್ಮಾಣ ಆಗಿರುವ ‘ಕಾರ್ಮೋಡ ಸರಿದು’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲ ಮೊದಲು ಮಾತನಾಡಿದ್ದು ಶ್ರೀಧರ್. ಮೊದಲ ಮಾತಿನಲ್ಲೇ ಅವರು ಚಿತ್ರದ ಕಥೆಯ ಎಳೆ ಏನು ಎಂಬುದನ್ನು ತಿಳಿಸಿದರು.

‘ಇದು ಹಾಸ್ಯ, ರಂಜನೆ ತುಂಬಿರುವ ಸಿನಿಮಾ. ಬಹಳ ದಿನಗಳ ನಂತರ ನಾನು ಈ ಚಿತ್ರದಲ್ಲಿ ನಗುನಗುತ್ತ ನಟಿಸಿದ್ದೇನೆ’ ಎಂದರು ಶ್ರೀಧರ್.

ಈ ಸಿನಿಮಾ ಚಿತ್ರೀಕರಣ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಕುದುರೆಮುಖ ಪರಿಸರದಲ್ಲಿ. ಈ ಚಿತ್ರದಲ್ಲಿ ಲೊಕೇಷನ್ ಕೂಡ ಪ್ರಮುಖ ಪಾತ್ರಧಾರಿ ಎಂದೂ ಅವರು ಹೇಳಿದರು. ಅಂದಹಾಗೆ, ಚಿತ್ರವು ನಿರ್ದೇಶಕರು ವಿವರಿಸಿದ್ದಕ್ಕಿಂತ ಹೆಚ್ಚು ಸುಂದರವಾಗಿ ಮೂಡಿಬಂದಿದೆಯಂತೆ.

ಚಿತ್ರದ ನಾಯಕನ ಪಾತ್ರಕ್ಕೆ ಜೀವ ತುಂಬಿರುವವರು ಮಂಜು ರಾಜಣ್ಣ. ‘ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಇದು ಹೊಸ ಹುಡುಗರ ಸಿನಿಮಾ’ ಎಂದರು ಮಂಜು.

ಈ ಚಿತ್ರದ ನಿರ್ದೇಶನ ಉದಯ್ ಕುಮಾರ್ ಅವರದ್ದು. ಇದಕ್ಕೂ ಮುನ್ನ ಅವರು ಸಂಕಲನಕಾರರಾಗಿ ಕೆಲಸ ಮಾಡುತ್ತಿದ್ದರು. ‘ಇಷ್ಟಕಾಮ್ಯ’ ಚಿತ್ರದ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ನಂಟು ಬೆಳೆಸಿಕೊಂಡವರು ಉದಯ್. ‘ಇದು ಎಲ್ಲರೂ ಜೊತೆಯಾಗಿ ಕುಳಿತು ನೋಡಬಲ್ಲ ಸಿನಿಮಾ. ಚಿತ್ರದ ಸ್ಕ್ರೀನ್‌ಪ್ಲೇ ಅನುಕ್ರಮಣಿಕೆಯಲ್ಲಿ ಇಲ್ಲ. ಒತ್ತಡದ ಬದುಕಿನಲ್ಲಿ ನಾವು ಭಾವನೆಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಚಿತ್ರದ ಮೂಲ ಎಳೆ’ ಎಂದರು ಉದಯ್.

‘ಚಿತ್ರದ ಕ್ಲೈಮ್ಯಾಕ್ಸ್‌ ಬಹಳ ಮುಖ್ಯ ಎನ್ನುವ ಮಾತಿದೆ. ಈ ಸಿನಿಮಾದ ಅಂತ್ಯ ಯಾರ ಊಹೆಗೂ ಸಿಗುವಂಥದ್ದಲ್ಲ. ಆದರೆ ಅದನ್ನು ಎಲ್ಲರೂ ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ನಟಿ ಅದ್ವಿತಿ ಅವರು ಇದರಲ್ಲಿ ವೈದ್ಯೆಯ ಪಾತ್ರ ನಿಭಾಯಿಸಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಕುದುರೆಮುಖ ಹೇಗಿರುತ್ತದೆ ಎಂಬುದನ್ನು ನೋಡದವರು ಈ ಸಿನಿಮಾ ನೋಡಬೇಕು ಎನ್ನುತ್ತಾರೆ ಅದ್ವಿತಿ. ‘ನಾವು ನಮ್ಮ ಸಂಬಂಧಗಳಿಗೆ ಹೇಗೆ ಬೆಲೆ ಕೊಡಬೇಕು ಎಂಬುದನ್ನು ಹೇಳುತ್ತದೆ’ ಎಂದರು ಅವರು.

ಈ ಚಿತ್ರದಲ್ಲಿ ಹಾಡುಗಳನ್ನು ಹಾಡಿರುವವರು ಹೈದರಾಬಾದ್‌ನವರು. ಅವರು ಬಾಹುಬಲಿ ಚಿತ್ರದಲ್ಲೂ ಹಾಡಿದ್ದರಂತೆ. ‘ನಾಯಕನ ಮುಗ್ಧತೆಯನ್ನು ತೋರಿಸುವ ಉದ್ದೇಶ ನಮ್ಮದು. ಹಾಗಾಗಿ, ನಮಗೆ ಭಿನ್ನವಾದ ದನಿ ಬೇಕಿತ್ತು’ ಎಂದರು ಸಂಗೀತ ನಿರ್ದೇಶಕ ಸತೀಶ್ ಬಾಬು. ಚಿತ್ರದ ಛಾಯಾಗ್ರಹಣ ಅರುಣ್ ಸುರೇಶ್ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT