ಶನಿವಾರ, ಮಾರ್ಚ್ 6, 2021
32 °C

ಹಾಲಿವುಡ್‌ಗೆ ಕ್ಯಾಟ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ನಲ್ಲಿ ಮಿಂಚಿ, ಹಾಲಿವುಡ್‌ಗೆ ಹಾರಿದವರು ನಟಿ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ. ಈಗ ಈ ಸಾಲಿಗೆ ಕತ್ರಿನಾ ಕೈಫ್‌ ಕೂಡ ಸೇರುತ್ತಿದ್ದಾರೆ. 

ಬಾಲಿವುಡ್‌ನ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಈಗ ಹಾಲಿವುಡ್‌ನತ್ತ ದೃಷ್ಟಿ ನೆಟ್ಟಿದ್ದಾರೆ. ಈಚೆಗೆ ಕಾರ್ಯಕ್ರಮವೊಂದರಲ್ಲಿ ಇಂಗ್ಲಿಷ್‌ ಸಿನಿಮಾದಲ್ಲಿ ನಟಿಸುವ ತನ್ನ ಒಲವನ್ನು ಅವರು ಹಂಚಿಕೊಂಡಿದ್ದು, ‘ನಾನು ಚಿತ್ರಕತೆ ಓದಿದ ಬಳಿಕ ಸಿನಿಮಾದಲ್ಲಿ ನಟಿಸಲು ಒಪ್ಪುತ್ತೇನೆ. ಇಂಗ್ಲಿಷ್‌ ಸಿನಿಮಾದ ಚಿತ್ರಕತೆ ಇಷ್ಟ’ ಎಂದು ಹಾಲಿವುಡ್‌ ಪ್ರವೇಶಿಸುವ ಸೂಚನೆಯನ್ನು ನೀಡಿದ್ದರು.  

ಗಾಳಿಸುದ್ದಿಯ ಪ್ರಕಾರ, ನಟಿ ಅಮೆರಿಕ ಪ್ರವಾಸ ತೆರಳಿದ ಸಂದರ್ಭದಲ್ಲಿ ಫಾಕ್ಸ್‌ ಸ್ಟುಡಿಯೊದ ಜೊತೆ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅವೆಂಜರ್ಸ್‌ ಖ್ಯಾತಿಯ ಜೆರೆಮಿ ಬೆನ್ನೆರ್‌ ಅವರ ಚಿತ್ರದಲ್ಲಿ ಕತ್ರಿನಾ ನಟಿಸಲಿದ್ದಾರೆ. ಇದು ನಿಜವಾದಲ್ಲಿ ಸದ್ಯದಲ್ಲಿ ಹಾಲಿವುಡ್‌ ಸಿನಿಮಾದಲ್ಲಿ ಕತ್ರಿನಾಳನ್ನು ಕಣ್ತುಂಬಿಕೊಳ್ಳಬಹುದು. 

ಸವಾಲಿನ ಪಾತ್ರಗಳ ಬಗ್ಗೆ ಕತ್ರಿನಾ ಒಲವು

‘ಭಾರತ್‌’ ಸಿನಿಮಾದಲ್ಲಿ ವಿಭಿನ್ನವಾದ ಲುಕ್‌ನಿಂದ ಅಭಿಮಾನಿಗಳನ್ನು ಸೆಳೆದ ಕತ್ರಿನಾ ಕೈಫ್‌ ಈಗ ಸವಾಲಿನ ಪಾತ್ರದ ನಿರೀಕ್ಷೆಯಲ್ಲಿದ್ದಾರಂತೆ.

ಸಲ್ಮಾನ್‌ ಖಾನ್‌ ಸಿನಿಮಾಗಳಲ್ಲಿ ನಟಿಯರಿಗೆ ಹೆಚ್ಚಿನ ಕೆಲಸ ಇರುವುದಿಲ್ಲ ಎಂಬ ವಿಮರ್ಶಕರ ಮಾತನ್ನು ಕತ್ರಿನಾ ಯಾವಾಗಲೂ ತಳ್ಳಿ ಹಾಕಿದ್ದಾರೆ. ಆದರೆ ಭಾರತ್‌ ಸಿನಿಮಾ ಯಶಸ್ಸಿನ ಬಳಿಕ ಅವರು ಈಗ ‘ಇನ್ನೂ ಹೆಚ್ಚಿನ ಸವಾಲು ಇರುವ ಪಾತ್ರಗಳನ್ನು ಮಾಡಬೇಕು’ ಎಂದು ಹೇಳಿದ್ದಾರೆ.

‘ಈ ಮೊದಲು ಯಾವಾಗಲೂ ಮಾಡಿರದ ಪಾತ್ರಗಳನ್ನು ಇನ್ನು ಮುಂದೆ ಆಯ್ಕೆ ಮಾಡಿಕೊಳ್ಳಲು ಬಯಸುತ್ತೇನೆ. ದ್ವಿಪಾತ್ರ, ಕಾಮಿಡಿ ಸಿನಿಮಾದಲ್ಲಿ ಇನ್ನೂ ಮಾಡಿಲ್ಲ. ಸಿಂಗಲ್‌ ಮದರ್‌ ಪಾತ್ರಗಳೂ ಇದ್ದರೆ ನಟಿಯರಿಗೆ ಹೆಚ್ಚಿನ ಕೆಲಸ ಸಿಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಇಲ್ಲಿಯವರೆಗೂ ನಾನು ಮಾಡಿರುವ ಕೆಲವು ಸಿನಿಮಾಗಳಲ್ಲಿ ನಿರ್ದೇಶಕ ಅಥವಾ ನಿರ್ಮಾಪಕರಿಗೆ ನಾನೇ ಮೊದಲ ಆಯ್ಕೆಯಾಗಿರಲಿಲ್ಲ. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಸಿನಿಮಾಗಳನ್ನು ನಾನು ಮಾಡಿರಬಹುದು. ಆದರೆ ಜನರಿಗೆ ಹತ್ತಿರವಾಗುವ ಪಾತ್ರವೊಂದನ್ನು ಮಾಡುವ ಕನಸಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಈಗ ರೋಹಿತ್‌ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್‌ಕುಮಾರ್‌ ಜೊತೆ ನಟಿಸುತ್ತಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು