ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಕವಿಯೂರು ಪೊನ್ನಮ್ಮ ಇಂದು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ 6 ದಶಕಗಳಿಂದ ಬಹುತೇಕ ತಾಯಿ ಪಾತ್ರಗಳಲ್ಲಿ ಅವರು ಗಮನ ಸೆಳೆದಿದ್ದರು.
ಕಳೆದ ಮೇ ತಿಂಗಳಿನಿಂದ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ 3ರಂದು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಇಂದು ಸಂಜೆ 5.33ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ಧಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅಗಲಿದ ನಟಿಯ ಅಂತಿಮ ದರ್ಶನಕ್ಕೆ ಕಲಮಶೇರಿಯ ಪುರಭವನದಲ್ಲಿ ಶನಿವಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಬಳಿಕ, ಅವರ ಹುಟ್ಟೂರು ಅಲುವಾಕ್ಕೆ ಮೃತದೇಹವನ್ನು ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.
ತಮ್ಮ 6 ದಶಕಗಳ ವೃತ್ತಿ ಜೀವನದಲ್ಲಿ ಪೊನ್ನಮ್ಮ 700 ಚಿತ್ರಗಳಲ್ಲಿ ನಟಿಸಿದ್ದಾರೆ. ತಾಯಿ ಪಾತ್ರದ ಮೂಲಕ ಅವರು ಮನೆಮಾತಾಗಿದ್ದರು.
1962ರಲ್ಲಿ 'ಶ್ರೀರಾಮ ಪಟ್ಟಾಭಿಷೇಕ' ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 2021ರವರೆಗೆ ನಟನಾ ವೃತ್ತಿಯಲ್ಲಿ ಸಕ್ರಿಯರಾಗಿದ್ದರು. 27 ಮಲಯಾಳಂ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು, ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದರು.