ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಬರಲಿದೆಯೇ ಇನ್ನೊಂದು ಭಾಗ? ಬಜೆಟ್ ಎಷ್ಟು?

Last Updated 9 ನವೆಂಬರ್ 2018, 13:10 IST
ಅಕ್ಷರ ಗಾತ್ರ

ಬೆಂಗಳೂರು: 'ಕನ್ನಡಿಗನೊಬ್ಬ ನಿರ್ಮಾಣ ಮಾಡಿರುವ ಅತಿದೊಡ್ಡ ಬಜೆಟ್‌ನ ಸಿನಿಮಾ' ಎಂದು ಹೇಳಿಕೊಂಡಿರುವ, ನಟ ಯಶ್ ಅವರ ಮಹತ್ವಾಕಾಂಕ್ಷೆಯ 'ಕೆಜಿಎಫ್‌'ನ ಟ್ರೇಲರ್‌ ಬಿಡುಗಡೆ ಆಗಿದೆ. ಚಿತ್ರವನ್ನು ಐದು ಭಾಷೆಗಳಲ್ಲಿ ಸಿದ್ಧಪಡಿಸಲಾಗಿದ್ದು, ಡಿಸೆಂಬರ್‌ 21ರಂದು ತೆರೆಗೆ ಬರಲಿದೆ.

ಇದರ ಜೊತೆಯಲ್ಲೇ, ಇನ್ನೊಂದು ಅಚ್ಚರಿ ಹಾಗೂ ಪ್ರಶ್ನೆಯನ್ನು ಇದು ಸಿನಿಮಾ ಪ್ರೇಮಿಗಳಲ್ಲಿ ಹುಟ್ಟುಹಾಕಿದೆ. ಎರಡು ನಿಮಿಷ, ನಲವತ್ತನಾಲ್ಕು ಸೆಕೆಂಡ್‌ಗಳಷ್ಟು ಇರುವ ಈ ಟ್ರೇಲರ್‌ನ ಕೊನೆಯ ಭಾಗದಲ್ಲಿ 'ಚಾಪ್ಟರ್‌ 1' ಎನ್ನುವ ಒಕ್ಕಣಿಕೆ ಬರುತ್ತದೆ. ಅಂದರೆ, ಕೆಜಿಎಫ್‌ ಸಿನಿಮಾದ ಇನ್ನೂ ಒಂದು ಭಾಗ ನಿರ್ದೇಶಕರ ಮನಸ್ಸಿನಲ್ಲಿ ಇದೆಯೇ, ಈ ಸಿನಿಮಾ ನಂತರ ಅದು ಕೂಡ ತೆರೆಯ ಮೇಲೆ ಮೂಡಿಬರಲಿದೆಯೇ ಎಂಬ ಪ್ರಶ್ನೆಯನ್ನು ಈ ಟ್ರೇಲರ್‌ ಹುಟ್ಟುಹಾಕಿದೆ.

ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಈ ಸಿನಿಮಾದ ಕನ್ನಡ, ಹಿಂದಿ, ಮಲಯಾಳ, ತೆಲುಗು ಮತ್ತು ತಮಿಳು ಭಾಷೆಗಳ ಟ್ರೇಲರ್‌ ಬಿಡುಗಡೆ ಮಾಡಲಾಯಿತು. ಕನ್ನಡದ ಟ್ರೇಲರ್‌ ಬಿಡುಗಡೆ ಮಾಡಿದ್ದು ಹಿರಿಯ ನಟ ಅಂಬರೀಷ್.

ಟ್ರೇಲರ್‌ ಗಮನಿಸಿ ಹೇಳುವುದಾದರೆ, ಈ ಸಿನಿಮಾ ಕಥೆ 1958ರಿಂದ ಆರಂಭವಾಗುತ್ತದೆ. ಟ್ರೇಲರ್‌ನಲ್ಲಿರುವ ದೃಶ್ಯಗಳು ಕೂಡ ಸರಿದುಹೋಗಿರುವ ಕಾಲವೊಂದನ್ನು ನೆನಪಿಗೆ ತಂದುಕೊಡುತ್ತವೆ. ಆಕ್ರೋಶ, ಕಿಚ್ಚು, ಹಟ ಸಾಧಿಸುವ ಅಂಶಗಳು ಸಿನಿಮಾದಲ್ಲಿ ಇರಲಿವೆ ಎಂಬ ಸೂಚನೆಯನ್ನೂ ನೀಡುತ್ತದೆ.

'ಭಾವನೆಗಳಿಗೆ ಒಳಗಾಗಬೇಡ, ಇಲ್ಲಿ ಅದಕ್ಕೆ ಬೆಲೆ ಇಲ್ಲ' ಎನ್ನುವ ಮಾತು, 'ಬರೀ ಒಂದು ಬೊಗಸೆ ರಕ್ತ ನೋಡಿಯೇ ಇಷ್ಟೊಂದು ಹೆದರುತ್ತ ಇದ್ದೀಯಾ ಅಂದರೆ, ಇನ್ನು ರಕ್ತ ನದಿಯಾಗಿ ಹರಿಯುವ ಮೊದಲೇ ನೀನು ಇಲ್ಲಿಂದ ಹೊರಟುಬಿಡು...' ಎನ್ನುವ ಮಾತು ಸಿನಿಮಾ ಹೂರಣ ಏನಿರಬಹುದು ಎಂಬುದನ್ನು ಸೂಚ್ಯವಾಗಿ ಹೇಳುತ್ತವೆ.

ಟ್ರೇಲರ್‌ ಅನ್ನುಯೂಟ್ಯೂಬ್‌ ಮೂಲಕ ಈಗಾಗಲೇ 1.71 ಲಕ್ಷ ಬಾರಿ ವೀಕ್ಷಿಸಲಾಗಿದೆ!

ಕೆಜಿಎಫ್‌ ಚಿತ್ರದ ಬಜೆಟ್‌ ಎಷ್ಟು?
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿರುವ, ಯಶ್ ಅಭಿನಯದ 'ಕೆಜಿಎಫ್' ಚಿತ್ರದ ಬಜೆಟ್ ಎಷ್ಟು ಎಂಬುದು ಸಿನಿಮಾ ವೀಕ್ಷಕರು ಕೌತುಕದಿಂದ ಕೇಳುತ್ತಿರುವ ಪ್ರಶ್ನೆ. ಆದರೆ, ಈ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈ ಪ್ರಶ್ನೆಯನ್ನು ಜಾಣತನದಿಂದ ತಪ್ಪಿಸಿಕೊಂಡಿದ್ದಾರೆ!

ಕೆಜಿಎಫ್‌ ಚಿತ್ರದ ಟ್ರೇಲರ್‌ ಬಿಡುಗಡೆ ನಂತರ ವಿಜಯ್ ಅವರು ಸುದ್ದಿಗಾರರ ಜೊತೆ ಮಾತುಕತೆಗೆ ಸಿಕ್ಕಿದ್ದರು. 'ಈ ಚಿತ್ರಕ್ಕಾಗಿ ನೀವು ಹೂಡಿಕೆ ಮಾಡಿರುವ ಹಣ ಎಷ್ಟು' ಎಂದು ಪತ್ರಕರ್ತರು ಪ್ರಶ್ನಿಸಿದಾಗ ವಿಜಯ್ ಚೂಟಿ ಉತ್ತರ ನೀಡಿದರು.

'ಈ ಸಿನಿಮಾಕ್ಕಾಗಿ ನಾವೆಲ್ಲ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಚಿತ್ರಕ್ಕಾಗಿ ಕೆಲಸ ಮಾಡಿರುವ ಪ್ರತಿ ವ್ಯಕ್ತಿಯ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ, ಸಿನಿಮಾ ಬಜೆಟ್ ಎಷ್ಟು ಎಂಬುದನ್ನು ಕೇಳಬೇಡಿ' ಎಂದು ಉತ್ತರಿಸಿದರು ವಿಜಯ್. 'ಇಡೀ ತಂಡ ಮಾಡಿರುವ ಕೆಲಸದ ಮುಂದೆ ಬಜೆಟ್ ಏನೂ ಅಲ್ಲ' ಎಂಬ ಮಾತನ್ನೂ ಸೇರಿಸಿದರು.

'ನಟ ಯಶ್ ಅವರು ವಿಜಯ್ ನನ್ನ ಅಣ್ಣ ಎಂದು ಯಾವಾಗಲೂ ಹೇಳುತ್ತಿರುತ್ತಾರೆ. ಹಾಗಾಗಿ, ಅಣ್ಣನೊಬ್ಬ ತಮ್ಮನ ಸಿನಿಮಾಕ್ಕಾಗಿ ಹಣ ಹೂಡಿಕೆ ಮಾಡುವುದು ದೊಡ್ಡದೇನೂ ಅಲ್ಲ. ನಾನು ಸಂಬಂಧಗಳಿಗೆ ಗೌರವ ಕೊಡುತ್ತೇನೆಯೇ ವಿನಾ ಅವುಗಳ ಬೆಲೆ ನಿರ್ಧರಿಸಲು ಹೋಗುವುದಿಲ್ಲ' ಎಂದರು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT