ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಜಿಎಫ್‌’ಗೆ ಪ್ರೇಕ್ಷಕರು ಫಿದಾ

ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ
Last Updated 21 ಡಿಸೆಂಬರ್ 2018, 17:42 IST
ಅಕ್ಷರ ಗಾತ್ರ

ಬೆಂಗಳೂರು: ನಟ ಯಶ್‌ ನಟನೆಯ ‘ಕೆಜಿಎಫ್‌’ ಚಿತ್ರ ಶುಕ್ರವಾರ ವಿಶ್ವದಾದ್ಯಂತ ಏಕಕಾಲಕ್ಕೆ ಎರಡು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

ಹೊಸಪೇಟೆಯ ಬಾಲಾ ಚಿತ್ರಮಂದಿರದಲ್ಲಿ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ನಿಯಂತ್ರಿಸಿದರು. ಕೊಳ್ಳೇಗಾಲದ ಶೋಭಾ ಚಿತ್ರಮಂದಿರದಲ್ಲಿ ಬೆಳಿಗ್ಗಿನ ಪ್ರದರ್ಶನ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತು. ರೊಚ್ಚಿಗೆದ್ದ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಮಲ್ಲೇಶ್ವರದ ಐನಾಕ್ಸ್‌– 1 ಚಿತ್ರಪರದೆಯಲ್ಲಿ ಸೌಂಡ್‌ ಸಿಸ್ಟಂನ ಅವ್ಯವಸ್ಥೆಯು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ನರ್ತಕಿ ಚಿತ್ರಮಂದಿರದ ಆವರಣದಲ್ಲಿ 72 ಅಡಿ ಎತ್ತರದ ಯಶ್‌ ಕಟೌಟ್‌ಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪಾರ್ಚನೆ ಮಾಡಲಾಯಿತು. ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರು.

ಮಾಗಡಿ ರಸ್ತೆಯ ವೀರೇಶ್‌ ಚಿತ್ರಮಂದಿರದ ಬಳಿ ಯುವಕನೊಬ್ಬ ಟಿಕೆಟ್‌ಗಾಗಿ ಚಿತ್ರಮಂದಿರದ ಸಿಬ್ಬಂದಿಯೊಬ್ಬರ ಕೈ ಬೆರಳನ್ನು ಕತ್ತರಿಸಿದ್ದರಿಂದ ಸ್ಥಳದಲ್ಲಿ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು.

ಅರವಿಂದ್ ಎಂಬುವರ ಬಳಿ ರಮೇಶ್ ಎಂಬಾತ ಟಿಕೆಟ್ ಕೊಡಿಸುವಂತೆ ಕೇಳಿದ್ದಾನೆ. ಇದಕ್ಕೆ ಅವರು ನಿರಾಕರಿಸಿದ್ದಾರೆ. ಸಿಟ್ಟಿಗೆದ್ದ ಆತ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ವಾಪಸ್‌: ‘ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಕೆಜಿಎಫ್‌ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಹೂಡಿದ್ದ ಮೊಕದ್ದಮೆಯನ್ನು ಜಿ. ವೆಂಕಟೇಶ್‌ ಅವರು ಶುಕ್ರವಾರ ಹಿಂದಕ್ಕೆ ಪಡೆದಿದ್ದಾರೆ. ಹಾಗಾಗಿ, ಯಾವುದೇ ಅಡೆತಡೆ ಇಲ್ಲದೆ ಸಿನಿಮಾ ಪ್ರದರ್ಶನ ನಡೆಯುತ್ತಿದೆ’ ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ‘ಪ್ರಜಾವಾಣಿ’ಗೆ ತಿಳಿಸಿದರು. ಈ ಸಂಬಂಧ ವೆಂಕಟೇಶ್‌‍ಪ್ರತಿಕ್ರಿಯೆಗೆ ಸಿಗಲಿಲ್ಲ.

ಕೆಜಿಎಫ್‌ನಲ್ಲಿ ಅಬ್ಬರ: ಕೋಲಾರ ಜಿಲ್ಲೆಯಲ್ಲಿ ಮೊದಲ ದಿನವೇ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿ ಹೋಗಿದ್ದವು. ಜಿಲ್ಲಾ ಕೇಂದ್ರ ಹಾಗೂ ಕೆಜಿಎಫ್‌ ತಾಲ್ಲೂಕು ಕೇಂದ್ರದ ಚಿತ್ರಮಂದಿರಗಳಲ್ಲಿ ಕನ್ನಡ. ತೆಲುಗು ಅವತರಣಿಕೆ ತೆರೆಕಂಡಿತು.

ಮಧ್ಯ ಕರ್ನಾಟಕದಲ್ಲೂ ‘ಕೆಜಿಎಫ್‌’ ಸಿನಿಮಾ ಸದ್ದು ಮಾಡಿತು. ದಾವಣಗೆರೆಯ ವಸಂತ, ಗೀತಾಂಜಲಿ ಚಿತ್ರಮಂದಿರ, ಮೂವಿಟೈಮ್‌ ಮಲ್ಟಿಫ್ಲೆಕ್ಸ್‌ನ ಒಂದು ಪರದೆಯಲ್ಲಿ ಭರ್ಜರಿ ಪ್ರದರ್ಶನ ಕಂಡಿತು.ಚಿತ್ರದುರ್ಗದಲ್ಲಿ ಬೆಳಿಗ್ಗೆಯಿಂದಲೇ ಪ್ರದರ್ಶನ ಆರಂಭಗೊಂಡಿತು.ಶಿವಮೊಗ್ಗದ ಮೂರು ಚಿತ್ರಮಂದಿರ ಸೇರಿ ಮಾಲ್‌ನಲ್ಲಿಯೂ ಚಿತ್ರ ಭರ್ಜರಿ ಪ್ರದರ್ಶನ ಕಂಡಿತು.

ಬೈಕ್‌ ಪೂಜೆ: ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ಶಹಾಪುರದ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಮುಗಿಬಿದ್ದಿದ್ದರು. ಶಹಾಬಜಾರ್ ಬಡಾವಣೆಯ ಬಿಬಿಎಂ ವಿದ್ಯಾರ್ಥಿ ಮಹೇಶ್ ತಾವು ಖರೀದಿಸಿದ ಹೊಸ ಬೈಕ್ ಅನ್ನು ಶೆಟ್ಟಿ ಮಲ್ಟಿಫ್ಲೆಕ್ಸ್‌ಗೆ ತಂದು ಪೂಜೆ ಸಲ್ಲಿಸಿದರು.ಕೊಪ್ಪಳದಲ್ಲಿ ಆರು ತಿಂಗಳಿನಿಂದ ಬಂದ್ ಆಗಿದ್ದ ಶಾರದಾ ಚಿತ್ರಮಂದಿರವನ್ನು ಕೆಜಿಎಫ್‌ ಪ್ರದರ್ಶನಕ್ಕಾಗಿಯೇ ತೆರೆದಿದ್ದು ವಿಶೇಷವಾಗಿತ್ತು.

ಮೈಸೂರಿನ 5 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತು. ಧಾರವಾಡ, ಗದಗ, ಹೊಸಪೇಟೆ, ಹುಬ್ಬಳ್ಳಿ, ಹಾವೇರಿ, ಶಿಗ್ಗಾವಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT