ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ | ಪ್ರೀತಿಯ ಆಳಕ್ಕೆ ‘ಕಿಸ್‌’ ಮುದ್ರೆ

Last Updated 27 ಸೆಪ್ಟೆಂಬರ್ 2019, 11:05 IST
ಅಕ್ಷರ ಗಾತ್ರ

ಚಿತ್ರ: ಕಿಸ್‌

ನಿರ್ದೇಶನ ಮತ್ತು ನಿರ್ಮಾಣ: ಎ.ಪಿ. ಅರ್ಜುನ್‌

ತಾರಾಗಣ: ವಿರಾಟ್‌, ಶ್ರೀಲೀಲಾ, ಅವಿನಾಶ್‌, ಚಿಕ್ಕಣ್ಣ, ಸಾಧುಕೋಕಿಲ, ದತ್ತಣ್ಣ, ಸುಂದರ್‌

‘ಕಿಸ್‌’ ಚಿತ್ರದಲ್ಲಿ ಪ್ರೀತಿಯ ಮಹತ್ವ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್‌.

ಪ್ರೀತಿ ಎಂದರೆ ಶುದ್ಧ ಮನಸುಗಳಲ್ಲಿ ಹುಟ್ಟುವ (ಅ)ವ್ಯಕ್ತ ಭಾವನೆ. ಪ್ರೀತಿಗೆ ಮತ್ತೇರಿಸುವ‘ಕಿಸ್‌’ ಮಂತ್ರವನ್ನು ಹೊಸಬರಾದ ವಿರಾಟ್‌ ಮತ್ತು ಶ್ರೀಲೀಲಾ ಅವರ ಮೂಲಕ ಯುವ ಮನಸುಗಳ ಮೇಲೆ ಪ್ರಯೋಗಿಸಿದ್ದಾರೆ.‌

ವಿರಾಟ್‌ ಮತ್ತು ಶ್ರೀಲೀಲಾ ಹೊಸಬರಾದರೂಇಬ್ಬರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ತೆರೆ ಮೇಲೂ ಈ ಜೋಡಿ ಅಷ್ಟೇ ಕ್ಯೂಟಾಗಿ ಕಾಣಿಸಿದೆ. ಚಿತ್ರ ನೋಡುವಾಗ ಓಘ ಲಯ ತಪ್ಪಿದೆ ಅನಿಸುವ ಭಾವನೆ ಮಾತ್ರ ಪ್ರೇಕ್ಷಕನನ್ನು ತೀವ್ರವಾಗಿ ಕಾಡುತ್ತದೆ.ಕಾಡುವ ಆ ಭಾವನೆ ಚಿತ್ರದಲ್ಲಿನ ಗಟ್ಟಿತನದ ಕಂಟೆಂಟ್‌ನ ಕೊರತೆಯತ್ತ ಬೊಟ್ಟು ಮಾಡುತ್ತದೆ.

ಒಂದು ಪ್ರೇಮಕಥೆಯನ್ನು ನವಿರಾಗಿ ಹೇಳುವ ಜಾಡಿನಲ್ಲಿ ನಿರೂಪಣೆ ಶೈಲಿ ಹಗ್ಗಜಗ್ಗಿದಂತೆಭಾಸವಾಗುತ್ತದೆ. ನಿರೂಪಣೆಯಲ್ಲಿ ನವಿರುತನ ಉಳಿಸಿಕೊಳ್ಳದೆ,ಫ್ಯಾಮಿಲಿ ಸೆಂಟಿಮೆಂಟು ಟಚ್ಚನ್ನೂ ಕಾಯ್ದುಕೊಳ್ಳದೆ ಎಲ್ಲ ವರ್ಗದ ಪ್ರೇಕ್ಷಕರಿಗೆ ರಸಗವಳ ನೀಡಬಹುದಾಗಿದ್ದ ಅವಕಾಶವನ್ನು ನಿರ್ದೇಶಕರೇ ಕೈಚೆಲ್ಲಿದಂತೆ ಕಾಣಿಸುತ್ತದೆ. ಒಳ್ಳೆಯ ಅಡುಗೆ ಮಾಡಿಟ್ಟು, ಬಡಿಸುವ ಕ್ರಮದಲ್ಲಿ ನಿರ್ದೇಶಕರು ಎಡವಿದ್ದಾರೆ.

ಸಂಕಲನವನ್ನು ಕುಸುರಿಯಂತೆ ಮಾಡಿದ್ದರೆ ಪ್ರೇಕ್ಷಕ 2 ಗಂಟೆ 44 ನಿಮಿಷದವರೆಗೂ ಕೂರುವಾಗ ಅಲ್ಲಲ್ಲಿ ಕಾಣಿಸುವ ಬ್ಯಾಸರಿಕೆಯನ್ನಾದರೂ ತಪ್ಪಿಸಬಹುದಿತ್ತು.

ಕಾಲೇಜಿಗೆ ಹೋಗುವ ತುಂಟ ಹುಡುಗಿ ನಾಯಕಿ. ಬಿಂದಾಸ್‌ ಬದುಕು ನಡೆಸುವಶ್ರೀಮಂತ ಯುವಕ ನಾಯಕ. ತನ್ನನ್ನು ತರಗತಿಯಿಂದ ಹೊರಹಾಕಿದ ಸಿಟ್ಟಿಗೆ, ರಸ್ತೆಬದಿ ಹಾಕಿದ್ದ ಲೆಕ್ಚರರ್‌ ಭಾವಚಿತ್ರದ ಹೋರ್ಡಿಂಗ್ಸ್‌ಗೆ ಕಲ್ಲು ಹೊಡೆಯುತ್ತಿರುತ್ತಾಳೆ ನಾಯಕಿ. ಆ ಕಲ್ಲು ನಾಯಕನ ದುಬಾರಿ ಕಾರಿಗೆ ಬಿದ್ದು, ಡ್ಯಾಮೇಜ್‌ ಆಗುತ್ತದೆ. ರಿಪೇರಿ ವೆಚ್ಚ ₹ 4 ಲಕ್ಷ ಕೊಡುವಂತೆ ನಾಯಕ ಕೇಳುತ್ತಾನೆ. ನಾಯಕಿ ಹಣ ತೀರುವವರೆಗೆ ನಾಯಕನ ಬಳಿ ಅಸಿಸ್ಟೆಂಟ್‌ ಆಗಿ ಕೆಲಸಕ್ಕೆ ಸೇರುತ್ತಾಳೆ. ಆ ನಂತರ ಇಬ್ಬರ ಬಾಳಿನಲ್ಲಿ ಏನಾಗುತ್ತದೆ ಎನ್ನುವುದು ‘ಕಿಸ್‌’ ಚಿತ್ರದ ತಿರುಳು. ಸಿನಿಮಾದ ಶೀರ್ಷಿಕೆ ಮತ್ತು ಕಥೆಯ ಜೀವಾಳವೂ ಅದೇ. ಕ್ಲೈಮ್ಯಾಕ್ಸ್‌ಕುತೂಹಲ ಉಳಿಸಿಕೊಂಡಿದೆ.

ಚಿತ್ರೀಕರಣಕ್ಕೆ ಆಯ್ದುಕೊಂಡಿರುವಸುಂದರ ತಾಣಗಳು, ಹಾಡುಗಳ ಸಾಹಿತ್ಯ, ಸಂಭಾಷಣೆಯಲ್ಲಿನ ತಿಳಿಹಾಸ್ಯ, ಸಾನಿಯಾ ಕಾಸ್ಟ್ಯೂಮ್‌ ಡಿಸೈನ್‌ಚಿತ್ರಕ್ಕೆ ಅದ್ದೂರಿತನ ತಂದುಕೊಟ್ಟಿವೆ. ‘ನೀನೆ ಮೊದಲು ನೀನೆ ಕೊನೆ’ ಹಾಡಂತೂ ಚಿತ್ರಮಂದಿರದಿಂದ ಹೊರಬಂದ ಮೇಲೂತುಟಿಯಂಚಿನಲ್ಲಿ ಗುನುಗುವಂತೆ ಮಾಡುವಾಗ ವಿ. ಹರಿಕೃಷ್ಣ ಸಂಗೀತವೂ ಗೆದ್ದಿದೆ ಎನಿಸುತ್ತದೆ.

ನಟನೆ, ಬಾಡಿ ಲಾಂಗ್ವೇಜ್‌ನಿಂದಮೊದಲ ಪ್ರಯತ್ನದಲ್ಲೇ ಗಮನ ಸೆಳೆಯುವ ವಿರಾಟ್‌, ಶ್ರೀಲೀಲಾನೃತ್ಯದಲ್ಲೂ ಇಷ್ಟವಾಗುತ್ತಾರೆ. ಚಿತ್ರದ ಪ್ರತಿ ಪ್ರೇಮು ಕಣ್ಮನದಲ್ಲಿ ಅಚ್ಚೊತ್ತುವಂತೆ ಅರ್ಜುನ್‌ ಶೆಟ್ಟಿ ಛಾಯಾಗ್ರಹಣ ಮೊಗೆದಿಟ್ಟಿದೆ.

ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಸಾಧು ಸಿಕ್ಕಿದ ಅವಕಾಶದಲ್ಲಿ ಪ್ರೇಕ್ಷಕರನ್ನು ನಗಿಸಲು ಹಿಂದೆ ಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT