ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ನಿರೂಪಣೆಯ ‘ಪ್ಲ್ಯಾನಿಂಗ್‌ ದೇವಚೆಂ’

Last Updated 20 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ನಾಯಕನಟ ದುಷ್ಟರ ನಡುವೆ ಇದ್ದುಕೊಂಡೇ ಆ ಜಾಲದ ಇಂಚಿಂಚು ಮಾಹಿತಿಯನ್ನೂ ಸಂಗ್ರಹಿಸಿ, ಖಳಪಡೆಯನ್ನು ಸದೆಬಡಿಯುವ ಸಿನಿಮಾಗಳು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಬಂದು ಹೋಗಿವೆ. ಟಾಲಿವುಡ್‌ನ ಪ್ರಿನ್ಸ್‌ ಮಹೇಶ್‌ ಬಾಬು ಅಭಿನಯದ ‘ಪೊಕಿರಿ’ ಸಿನಿಮಾ ಇಂತಹ ಹೊಸಬಗೆಯ ನಿರೂಪಣೆಯ ಕಾರಣದಿಂದಾಗಿ ಸಿನಿಪ್ರಿಯರನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು. ಪ್ರೇಕ್ಷಕರು ಕುಳಿತಲ್ಲೇ ಮೈನವಿರೇಳುವಂತೆ ಮಾಡಿತ್ತು. ಮುಂದೆ ಇದೇ ಸಿನಿಮಾ ತಮಿಳಿನಲ್ಲಿ ‘ಗಿಲ್ಲಿ’ಯಾಗಿ, ಕನ್ನಡದಲ್ಲಿ ‘ಪೊರ್ಕಿ’ಯಾಗಿ ರಿಮೇಕ್‌ ಆಗಿ ಸಿನಿಪ್ರಿಯರ ಮನಗೆದ್ದಿತ್ತು. ದಳಪತಿ ವಿಜಯ್‌, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು.

‘ಪ್ಲ್ಯಾನಿಂಗ್‌ ದೇವಚೆಂ’ ಸಿನಿಮಾ ಹೆಚ್ಚುಕಡಿಮೆ ಅದೇ ದಾಟಿಯಲ್ಲಿ ಮೂಡಿಬಂದಿದ್ದರೂ ಕೂಡ ಭಿನ್ನ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ ನೋಡಿದಾಗ ಬೇಡ ಎಂದರೂ ಪ್ರೇಕ್ಷಕರ ಮನಸ್ಸಿನಲ್ಲೂ ‘ಪೊಕಿರಿ’ ಸಿನಿಮಾ ನೆನಪು ಹಾದು ಹೋಗುತ್ತದೆ. ಆ ಚಿತ್ರದಂತೆಯೇ ಇಲ್ಲೂ ಕೂಡ ನಿರ್ದೇಶಕರು ಕಥಾನಾಯಕನಿಗೆ ಖಳನ ಅಂಗಿ ತೊಡಿಸಿ ಡ್ರಗ್ಸ್‌ ಮಾಫಿಯಾದೊಳಕ್ಕೆ ನುಗ್ಗಿಸುತ್ತಾರೆ. ಅಂಡರ್‌ ಕವರ್‌ ಪೊಲೀಸ್‌ ಅಧಿಕಾರಿಯಾಗಿ ದಂಧೆಯ ಇಂಚಿಂಚೂ ಮಾಹಿತಿಯನ್ನೂ ಆತ ಕಲೆ ಹಾಕುತ್ತಾನೆ. ಕೊನೆಗೆ ಇಡೀ ಜಾಲವನ್ನು ಬುಡಸಮೇತ ಕಿತ್ತು ಹಾಕುತ್ತಾನೆ. ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ತಪನ್‌ ಆಚಾರ್ಯ, ಸೀಮಾ ಬುತೆಲ್ಲೊ ಕುಂದಾಪುರ ಮತ್ತು ಸಿಸಿಲ್‌ ಅವರ ನಟನಾ ಚತುರತೆ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ಕಳೆದ ವಾರ ತೆರೆಕಂಡ ‘ಪ್ಲ್ಯಾನಿಂಗ್‌ ದೇವಚೆಂ’ ಚಿತ್ರ ಕುಡ್ಲದಲ್ಲಿರುವ ಕೊಂಕಣಿ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಆ್ಯಕ್ಷನ್‌ ಹಾಗೂ ಕಾಮಿಡಿ ಜಾನರ್‌ನ ಚಿತ್ರ.

ಚಿತ್ರದ ನಾಯಕ ಜಿಮ್ಮಿ. ಅವನಿಗೆ ನಾಲ್ವರು ಗೆಳೆಯರು. ಜನಸಾಮಾನ್ಯರಿಗೆ ಮೋಸ ಮಾಡುವ ದುಷ್ಟರಿಂದ ಅವರನ್ನು ಕಾಪಾಡುವ ಸಹೃದಯಿ ಜಿಮ್ಮಿ. ಆದರೂ ಆತನ ಮೇಲೆ ಪೊಲೀಸ್‌ ಕೇಸ್‌ಗಳಿರುತ್ತವೆ. ಗೋವಾದ ನಂಬರ್‌ ಒನ್‌ ಶ್ರೀಮಂತನ ಮಗಳು ಲೀಜಾ ಬರ್ಬೋಝ. ಆಕೆಗೆ ಕಥಾನಾಯಕ ಜಿಮ್ಮಿ ಮೇಲೆ ಮೊದಲ ನೋಟಕ್ಕೆ ಲವ್‌ ಆಗುತ್ತದೆ. ಆದರೆ, ಜಿಮ್ಮಿ ಆಕೆಯ ಪ್ರೀತಿಯನ್ನು ಒಪ್ಪಿಕೊಳ್ಳಲು ಸತಾಯಿಸುತ್ತಾನೆ. ಒಮ್ಮೊಮ್ಮೆ ಒಪ್ಪಿಕೊಂಡಂತೆ ತೋರಿದರೂ ಸಹ ಅದು ಕೇವಲ ತೋರಿಕೆಯಷ್ಟೇ ಆಗಿರುತ್ತದೆ.

ಜಿಮ್ಮಿ ಮೇಲೆ ಮೋಹಿತಳಾದ ಬರ್ಬೋಝಾಗೆ ಆತ ಒಬ್ಬ ಕಳ್ಳ ಎಂದು ತಿಳಿದು ಆಘಾತವಾಗುತ್ತದೆ. ಆದರೂ, ಅವಳು ಆಕೆಯನ್ನು ಇಷ್ಟಪಡುತ್ತಾಳೆ. ಆದರೆ, ಜಿಮ್ಮಿ ಆಗಲೂ ಕೂಡ ಲೀಜಾಳ ಪ್ರೀತಿಗೆ ಒಪ್ಪಿಗೆಯ ಮುದ್ರೆ ಒತ್ತುವುದಿಲ್ಲ. ಇವರಿಬ್ಬರ ಕಣ್ಣಾಮುಚ್ಚಾಲೆ ಲವ್‌ ಸ್ಟೋರಿಯ ಜತೆಜತೆಗೆ ಗೋವಾದಲ್ಲಿ ಡ್ರಗ್ಸ್‌ ದಂಧೆ ನಡೆಸಿರುವ ಖಳನ ಪ್ರವೇಶ ಆಗುತ್ತದೆ. ಲೀಜಾ ತಂದೆ ಕೂಡ ಈ ಗ್ಯಾಂಗ್‌ನ ಕಿಂಗ್‌ಪಿನ್‌ ಆಗಿರುತ್ತಾನೆ. ಲೀಜಾ ತನ್ನ ತಂದೆ ಬಳಿ ಜಿಮ್ಮಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾಳೆ. ಆಕೆಯ ಅಪ್ಪ ಅವರಿಬ್ಬರ ಪ್ರೀತಿಗೆ ಸಮ್ಮತಿಯನ್ನೂ ಸೂಚಿಸುತ್ತಾನೆ. ಆಗಲೂ ಸಹ ಜಿಮ್ಮಿ ನಾನು ಲೀಜಾಳನ್ನು ಪ್ರೀತಿಸುತ್ತೇನೆ ಎಂದು ನಿಖರವಾಗಿ ಹೇಳದೇ ಅವರನ್ನು ಗೊಂದಲದಲ್ಲಿ ಕೆಡುಹುತ್ತಾನೆ.

ಉಸಿರು ಕಟ್ಟುವಂತೆ ಪ್ರೀತಿಸುವ ಲೀಸಾಳ ಪ್ರೀತಿಯನ್ನು ಜಿಮ್ಮಿ ಏಕೆ ಒಪ್ಪಿಕೊಳ್ಳುವುದಿಲ್ಲ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಕ್ಲೈಮ್ಯಾಕ್ಸ್‌ನಲ್ಲಿ ಸಿಗುತ್ತದೆ. ಚಿತ್ರದುದ್ದಕ್ಕೂ ಕಳ್ಳ ಎಂದು ಕರೆಯಿಸಿಕೊಳ್ಳುವ ಜಿಮ್ಮಿಯನ್ನು ನಿರ್ದೇಶಕರು ಕ್ಲೈಮ್ಯಾಕ್ಸ್‌ನಲ್ಲಿ ಆತ ಸಾಮಾನ್ಯ ಪೊರ್ಕಿ ಅಲ್ಲ. ಗೋವಾದಲ್ಲಿ ಬೇರುಬಿಟ್ಟಿರುವ ಡ್ರಗ್ಸ್‌ ಜಾಲವನ್ನು ಬುಡಸಮೇತ ಕೀಳಲು ಬಂದಿರುವ ಖಡಕ್‌ ಐಪಿಎಸ್‌ ಅಧಿಕಾರಿ ಎಂಬ ಸತ್ಯವನ್ನು ತೋರಿಸುತ್ತಾರೆ. ಈ ವಿಚಾರ ತಿಳಿದಾಗ ಲೀಜಾಗೆ ಆಘಾತ ಆಗುತ್ತದೆ. ನಿರ್ದೇಶಕರು ಚಿತ್ರಕತೆಯಲ್ಲಿ ಮತ್ತಷ್ಟು ಟ್ವಿಸ್ಟ್‌ ಕೊಟ್ಟು ಕ್ಲೈಮ್ಯಾಕ್ಸ್‌ ಅನ್ನು ಅದ್ಭುತವಾಗಿ ಮಾಡಿದ್ದಾರೆ. ಅದು ಏನು ಎಂಬುದನ್ನು ತಿಳಿಯುವ ಕುತೂಹಲ ಇದ್ದರೆ ‘ಪ್ಲ್ಯಾನಿಂಗ್‌ ದೇವಚೆಂ’ ಸಿನಿಮಾವನ್ನು ನೋಡಬೇಕು.

ಚಿತ್ರದ ಕತೆಗೆ ಪೂರಕವಾಗಿ ಕಾಮಿಡಿಯೂ ಸಾಗುತ್ತದೆ. ನಾಯಕನಟನಾಗಿ ತಪನ್‌ ಆಚಾರ್ಯ ಖಳ ಮತ್ತು ಪೊಲೀಸ್‌ ಎರಡೂ ಪಾತ್ರಕ್ಕೂ ಜೀವ ತುಂಬಿದ್ದಾರೆ. ಚಿತ್ರದ ನಾಯಕಿ ಸೀಮಾ ಬುತೆಲ್ಲೊ ಹುಣ್ಣಿಮೆಯ ಪೂರ್ಣಚಂದ್ರನಂತೆ ಚಿತ್ರದುದ್ದಕ್ಕೂ ಬೆಳಗುತ್ತಾರೆ. ಸಾಮಾಜಿಕ ಕಳಕಳಿಯುಳ್ಳ ಪಾತ್ರದಲ್ಲಿ ಅವರು ಪ್ರೇಕ್ಷಕರ ಮನಕದಿಯುತ್ತಾರೆ. ಲೀಜಾ ಪಾತ್ರಧಾರಿ ಸಿಸಿಲ್‌ ಅದ್ಭುತವಾಗಿ ನಟಿಸಿದ್ದಾರೆ. ಗೋವಾ ನೋಡದವರು ಈ ಸಿನಿಮಾ ನೋಡಿದರೆ ಅಲ್ಲಿನ ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT