ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಕ ಬಿರಿಯಾನಿ!

Last Updated 1 ನವೆಂಬರ್ 2018, 16:31 IST
ಅಕ್ಷರ ಗಾತ್ರ

ಕುಷ್ಕ ಎಂದರೆ ಬಿರಿಯಾನಿ ಮಾಡುವ ಅಕ್ಕಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಿರ್ದೇಶಕ ಗುರುಪ್ರಸಾದ್ ಪ್ರಕಾರ ಕುಷ್ಕ ಎಂದರೆ ‘ಖುಷಿ ಕಾ ಫುಲ್ ಮೀಲ್ಸ್’. ಅವರು ಹೀಗೆ ಹೊಸ ಅರ್ಥ ಹುಡುಕುವುದಕ್ಕೂ ಕಾರಣವಿದೆ.

ಕುಷ್ಕ ಎಂಬ ಹೆಸರಿಟ್ಟುಕೊಂಡು ಸಿನಿಮಾವೊಂದು ತಯಾರಾಗುತ್ತಿದೆ. ಅದರಲ್ಲಿ ಗುರುಪ್ರಸಾದ್ ಖಳನಟನಾಗಿ ನಟಿಸುತ್ತಿದ್ದಾರೆ. ಹಾ, ಅಂತಿಂಥ ಖಳ ನಟ ಅಲ್ಲ ಅವರು. ಭರ್ಜರಿ ತರ್ಲೆ ಖಳ. ಚಿತ್ರದ ಶೀರ್ಷಿಕೆ ಬಿಡುಗಡೆಗಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಾಸ್ತಿ ಮಾತನಾಡಿದ್ದೂ ಅವರೇ.

‘ನಾನು ಮೊದಲು ನಾನ್‌ ವೆಜ್‌ ತಿನ್ನಲು ಶುರು ಮಾಡಿದ್ದು ಕುಷ್ಕ ಬಿರಿಯಾನಿ ಮೂಲಕವೇ. ಅದರಲ್ಲಿ ಚಿಕನ್ ತುಣುಕುಗಳು ಇರುವುದಿಲ್ಲ. ಅದನ್ನು ತಿಂದ ನಂತರ ನಾನು ಚಿಕನ್ ಅನ್ನು ತಿನ್ನಲು ಶುರುಮಾಡಿದ್ದು’ ಎಂದು ಸ್ವಂತ ಅನುಭವದ ಮೂಲಕವೇ ಮಾತಿಗಾರಂಭಿಸಿದರು ಗುರು.

ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರಿಗೆ ಇದು ಎರಡನೇ ಸಿನಿಮಾ. ಅವರನ್ನು ಗುರು ‘ವೆಬ್ಬಜ’ ಎಂದೇ ಕರೆದರು. ‘ಕನ್ನಡದಲ್ಲಿ ವೆಬ್ ಸಿರೀಸ್ ಶುರುಮಾಡಿದ್ದೇ ಇವರು. ಭೂ ಮೈ ಷೋ ಎಂಬ ಕಾರ್ಯಕ್ರಮವನ್ನು ನೋಡಿ ನಾನು ಇವರ ಕೆಲಸದ ಕುರಿತು ಆಸಕ್ತಿ ತಳೆದೆ. ನಂತರ ಡಾ. ಫಾಲ್ ಸಿರೀಸ್ ಮಾಡಿದರು ಅದೂ ಜನಪ್ರಿಯವಾಯಿತು. ಈಗ ನಗಿಸಲಿಕ್ಕೆಂದೇ ಒಂದು ಸಿನಿಮಾ ಮಾಡ್ತಿದ್ದಾರೆ’ ಎಂದು ಪರಿಚಯ ಮಾಡಿಕೊಟ್ಟರು.

‘ಇದೊಂದು ಕ್ರೈಂ ಕಾಮಿಡಿ ಸಿನಿಮಾ. ಗುರುಪ್ರಸಾದ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಎಂಬತ್ತರಷ್ಟು ಕೆಲಸ ಮುಗಿದಿದೆ’ ಎಂದರು ವಿಕ್ರಮ್ ಯೋಗಾನಂದ.ಅಭಿಲಾಷ್ ಗುಪ್ತ ಚಿತ್ರದಲ್ಲಿನ ಐದು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಈ ಹಿಂದೆ ನಾನು ರೊಮ್ಯಾಂಟಿಕ್ ಸಿನಿಮಾಗಳಿಗೆ ಸಂಗೀತ ಮಾಡಿದ್ದೆ. ಈಗ ಕ್ರೈಂ ಕಾಮಿಡಿ ಜಾನರ್‌ಗೆ ಹೊಂದುವ ಸಂಗೀತ ಸಂಯೋಜಿಸುವುದು ಸವಾಲು ಎನಿಸಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ’ ಎಂದರು ಅಭಿಲಾಷ್.

ಕೈಲಾಶ್‌ ಪಾಲ್‌ ಮತ್ತೊಂದು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಮಧು ಗೌಡ ಮತ್ತು ಪ್ರತಾಪ್ ರೆಡ್ಡಿ ಹಣ ಹೂಡಿದ್ದಾರೆ. ಬಾಲರಾಜ್ ಜತೆ ಸೇರಿ ವಿಕ್ರಮ್ ಕಥೆ ಬರೆದಿದ್ದಾರೆ.

ಈ ಚಿತ್ರದಲ್ಲಿ ರಜಾಕ್ ಎಂಬ ಗರಾಜ್ ಮಾಲೀಕನ ಪಾತ್ರದಲ್ಲಿ ನಟಿಸಿದ್ದೇನೆ. ಗುರುಪ್ರಸಾದ್ ಜತೆ ನಟಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ’ ಎಂದರು ಕೈಲಾಶ್.

ಮಾಧುರಿ ಮತ್ತು ಸಂಜನಾ ಎಂಬ ಎರಡು ಹೊಸ ಪ್ರತಿಭೆಗಳು ಈ ಚಿತ್ರದ ನಾಯಕಿಯರು. ಇಬ್ಬರೂ ಹಾಜರಿರಲಿಲ್ಲ. ಈ ಕುರಿತು ‘ಮೀ ಟೂ ಹವಾ ಇರುವುದರಿಂದ ಬಹುಶಃ ಪತ್ರಿಕಾಗೋಷ್ಠಿಗೆ ನಾಯಕಿಯರನ್ನು ಕರೆಸಿಲ್ಲ ಅನಿಸುತ್ತದೆ’ ಎಂದು ನಕ್ಕರು ಗುರುಪ್ರಸಾದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT