ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿವುಡ್‌ನಲ್ಲಿ ಕೆಂಬಾವುಟ!

Last Updated 27 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರಾಜ್ಯದ ಸಚಿವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನನ್ನು ಗೆಳೆಯ ಸಂತೈಸುತ್ತಿದ್ದಾನೆ. ಸಚಿವ, ತಾನಿನ್ನು ಬದುಕಿ ಉಳಿಯುವ ಸಾಧ್ಯತೆಯೇ ಇಲ್ಲ ಎನ್ನುತ್ತಾನೆ. ಅಸಹನೀಯ ನೋವಿನಿಂದ ದೇಹವನ್ನು ಒಂದಿನಿತೂ ಅಲುಗಾಡಿಸಲು ಆಗುತ್ತಿಲ್ಲ ಎಂದೂ ಮರುಗುತ್ತಾನೆ.

ಆಗ ಗೆಳೆಯ ಕೇಳುತ್ತಾನೆ–‘ಕ್ರಾಂತಿಯ ಕಣದಲ್ಲಿ ನಾವು ಇದಕ್ಕಿಂತ ಕಠಿಣ ನೋವು ಅನುಭವಿಸಲಿಲ್ಲವೇ?’

ಆದರೂ ಮಂತ್ರಿಗೆ ಸಮಾಧಾನವಾಗುತ್ತಿಲ್ಲ. ಆಗ ಗೆಳೆಯ, ಹೋರಾಟದ ಸಂದರ್ಭದಲ್ಲಿ ಆಡುತ್ತಿದ್ದ ರಸಮಯ ಸಂಭಾಷಣೆಯ ತುಣುಕೊಂದರ ಮೂಲಕ ಸಂತೈಸಲು ಪ್ರಯತ್ನಿಸುತ್ತಾನೆ. ‘ಬೀಡಿ ಇದೆಯಾ ಕಾಮ್ರೇಡ್‌, ಬೆಂಕಿಪೊಟ್ಟಣ ಹೊರತೆಗೆಯಲು…? ಅದಕ್ಕೆ ಮಂತ್ರಿ ಉತ್ತರಿಸುತ್ತಾನೆ–‘ಬೆಂಕಿಪೊಟ್ಟಣ ಇದೆಯಾ ಕಾಮ್ರೇಡ್‌, ಒಂದು ಬೀಡಿಗಾಗಿ...?

ವೇಣು ನಾಗವಳ್ಳಿ ಕಥೆ–ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ 1990ರ ‘ಲಾಲ್ ಸಲಾಂ’ ಸಿನಿಮಾದ ಈ ದೃಶ್ಯ ಮಲಯಾಳಂ ಸಿನಿಮಾ ಪ್ರೇಮಿಗಳಿಗೆ ಮತ್ತು ಕೇರಳದ ಜನರಿಗೆ ನೀಡಿದ ರೋಮಾಂಚನ ಸಾಮಾನ್ಯದ್ದಲ್ಲ.

ಲಾಲ್ ಸಲಾಂ ಚಿತ್ರದಲ್ಲಿ ಮೋಹನ್‌ಲಾಲ್‌, ಮುರಳಿ, ಊರ್ವಶಿ
ಲಾಲ್ ಸಲಾಂ ಚಿತ್ರದಲ್ಲಿ ಮೋಹನ್‌ಲಾಲ್‌, ಮುರಳಿ, ಊರ್ವಶಿ

ಮಲಯಾಳಂನಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾಗಳಲ್ಲಿ ಬೀಡಿ, ಕೊಡಿ (ಧ್ವಜ), ಸಗಾವ್ (ಕಾಮ್ರೇಡ್‌), ಲಾಲ್‌ಸಲಾಂ ಮುಂತಾದ ಪದಗಳು ಬಳಕೆಯಾದುದಕ್ಕೆ ಲೆಕ್ಕವೇ ಇಲ್ಲ. ಯಾಕೆಂದರೆ ಅಲ್ಲಿ, ರಾಜಕೀಯಕ್ಕೆ ಸಂಬಂಧಿಸಿದ ಸಿನಿಮಾಗಳಲ್ಲಿ ಹೆಚ್ಚಿನವು ಎಡ ಪಕ್ಷ ಮತ್ತು ಎಡ ತತ್ವ–ಸಿದ್ಧಾಂತಗಳಿಗೆ ಸಂಬಂಧಿಸಿದವು. ಲಾಲ್‌ಸಲಾಂ, ರಕ್ತಸಾಕ್ಷಿಗಳ್ ಜಿಂದಾಬಾದ್‌, ಅರಬಿ ಕಥ, ಲೆಫ್ಟ್–ರೈಟ್–ಲೆಫ್ಟ್‌, ರಾಮ್‌ಲೀಲಾ, ಒನ್ ಇಯರ್ ಆಫ್‌ ಸಗಾವ್, ಒರು ಮೆಕ್ಸಿಕನ್ ಅಪಾರ್ಥ, ಸಿಐಎ... ಹೀಗೇ ಸಾಗುತ್ತದೆ ಈ ಎಳೆ ಎದ್ದು ಕಾಣುವ ಚಿತ್ರಗಳ ಪಟ್ಟಿ.

ಆರಂಭದಲ್ಲಿ ಐತಿಹಾಸಿಕ, ಸಾಮಾಜಿಕ ವಸ್ತುಗಳನ್ನೇ ಕಥೆಗಾಗಿ ಬಳಸುತ್ತಿದ್ದ ಮಲಯಾಳಂ ಸಿನಿಮಾ ರಂಗ ನಂತರ ಸ್ವಲ್ಪ ಕಾಲ ‘ರತಿ’ಯತ್ತ ಹೊರಳಿತ್ತು. 1970ರ ಸಂದರ್ಭದಲ್ಲಿ ಕಲಾತ್ಮಕ ಸ್ಪರ್ಶ ಪಡೆದು ವಾಪಸ್ ಮುಖ್ಯ ಧಾರೆಗೆ ಬಂತು. ಆ ಹಾದಿಯನ್ನು ಅಲ್ಲಿನ ನಿರ್ಮಾಪಕರು ಮತ್ತು ನಿರ್ದೇಶಕರು ಇನ್ನೂ ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಕಲಾತ್ಮಕ ಮತ್ತು ಕಡಿಮೆ ಬಜೆಟ್‌ನ ಸಿನಿಮಾಗಳಲ್ಲಿ ರಾಜಕೀಯ ವಸ್ತುಗಳೇ ಹೆಚ್ಚು ರಾರಾಜಿಸುತ್ತಿವೆ.

ಮೋಹನ್‌ಲಾಲ್‌, ಮುರಳಿ, ಗೀತಾ, ಊರ್ವಶಿ ಮುಂತಾದವರು ಕೆಲವು ವರ್ಷಗಳ ಹಿಂದೆ ಎಡ ವಿಚಾರಧಾರೆಯ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದರೆ ಹೊಸ ಅಲೆಯ ಸಿನಿಮಾಗಳಲ್ಲಿ ಯುವ ನಟರೇ ಕ್ರಾಂತಿಯ ‘ಅಂಬಾಸಡರ್‌’ಗಳು. ಪೃಥ್ವಿರಾಜ್‌, ಇಂದ್ರಜಿತ್, ದಿಲೀಪ್‌, ಟೊವಿನೊ ಥಾಮಸ್, ದುಲ್ಕರ್ ಸಲ್ಮಾನ್, ನಿವಿನ್ ಪೌಳಿ ಮುಂತಾದವರ ಅನೇಕ ಸಿನಿಮಾಗಳಲ್ಲಿ ಸಮಾಜವಾದ, ಕ್ರಾಂತಿ, ಎಡಚಿಂತನೆಗಳಿಗೆ ಸಂಬಂಧಿಸಿದ ವೈವಿಧ್ಯಮಯ ವಸ್ತುಗಳು ಮೇಳೈಸಿವೆ. ಕ್ಯಾಂಪಸ್‌ ರಾಜಕೀಯದ ರೋಮಾಂಚಕಾರಿ ಅನುಭವವನ್ನು ರಸವತ್ತಾಗಿ ಚಿತ್ರಿಸಿರುವ ಚಿತ್ರಗಳಿಂದ ಹಿಡಿದು ರಾಜ್ಯ ಆಳುವುದಕ್ಕಾಗಿ ನಡೆಸುವ ಪೈಪೋಟಿಯನ್ನು ವಿಡಂಬನಾತ್ಮಕವಾಗಿ ಬಿಂಬಿಸುವವರೆಗಿನ ಚಿತ್ರಗಳು ಯುವ ಸಮುದಾಯದ ಹೃದಯವನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿವೆ.

ಕೋಡದಿ ಸಮಕ್ಷಂ ಬಾಲನ್ ವಕೀಲ್ ಚಿತ್ರದಲ್ಲಿ ದಿಲೀಪ್ –ಟ್ವಿಟರ್ ಚಿತ್ರ
ಕೋಡದಿ ಸಮಕ್ಷಂ ಬಾಲನ್ ವಕೀಲ್ ಚಿತ್ರದಲ್ಲಿ ದಿಲೀಪ್ –ಟ್ವಿಟರ್ ಚಿತ್ರ

ಹೋರಾಟದ ಕೆಚ್ಚಿಗೆ ಸಾಹಿತ್ಯದ ಮಾರ್ದವ ಸ್ಪರ್ಶ
ಹೋರಾಟದ ಕಾವಿಗೆ ಮಾರ್ದವತೆ ತುಂಬುವ ಹೃದ್ಯ ಹಾಡುಗಳೂ ಚಿತ್ರಗಳಿಗೆ ಯಶಸ್ಸು ತಂದುಕೊಟ್ಟ ಪ್ರಮುಖ ಅಂಶಗಳಾಗಿವೆ. ಆದ್ದರಿಂದ ರಾಜಕೀಯ ಸಿದ್ಧಾಂತಗಳ, ವಿಶೇಷವಾಗಿ ಎಡಪಂಥದ ಹಿನ್ನೆಲೆಯಲ್ಲಿ ನಿರ್ಮಾಣಗೊಂಡ ಸಿನಿಮಾಗಳು ಕೇರಳದಲ್ಲಿ ಸಪ್ಪೆ ವಸ್ತುವಲ್ಲ; ಹೀಗಾಗಿ ಗಲ್ಲಾ ಪೆಟ್ಟಿಗೆಯನ್ನು ಸಮೃದ್ಧಗೊಳಿಸುವ ‘ಗಟ್ಟಿ‘ ವಸ್ತುವಾಗಿಯೂ ಸಿನಿಮಾರಂಗದ ಕೈ ಹಿಡಿದಿವೆ.

ಚೋರ ವೀಣ ಮಣ್ಣಿಲ್‌ನಿನ್ನುಯರ್ನುವನ್ನ ಪೂಮರಂ..
ಚೇದನಯಿಲ್ ನೂರು ನೂರು ಪೂಕ್ಕಳಾಯ್ ಪೊಲಿಕ್ಕವೇ
ನೋಕ್ಕುವಿನ್ ಸಗಾಕ್ಕಳೇ ನಮ್ಮಳ್ ವನ್ನ ವೀದಿಯಿಲ್
ಆಯಿರಂಙಳ್ ಚೋರಕೊಂಡೆಳುದಿವಚ್ಚ ವಾಕ್ಕುಗಳ್..
ಲಾಲ್‌ಸಲಾಂ ಲಾಲ್‌ಸಲಾಂ…

(ನೆತ್ತರ ಹನಿ ಬಿದ್ದ ನೆಲದಲ್ಲಿ ಎದ್ದು ನಿಂತಿರುವ ಮರದಲ್ಲಿ/ನೂರಾರು ಹೂಗಳನ್ನು ಅರಳಿಸಿದೆ ಹೋರಾಟದ ಚೇತನ/ಹಿಂದಿರುಗಿ ನೋಡಿ ಕಾಮ್ರೇಡರೇ/ನೆತ್ತರ ಹನಿಯಲ್ಲಿ ಬರೆದಿಟ್ಟ ಪದಗಳು…ಲಾಲ್‌ಸಲಾಂ; ಲಾಲ್‌ಸಲಾಂ…)

ನಾಮೀ ಮಣ್ಣ್ ಪೊನ್ನಾಕ್ಕುಂ ನಾಳೆ/ನಾಮೀಪೊನ್ನು ಕೊಯ್ಯುಂ ನಮ್ಮಳ್ಕಾಯ್‌

(ಈ ಮಣ್ಣನ್ನು ಭವಿಷ್ಯದಲ್ಲಿ ನಾವು ಹೊನ್ನಾಗಿಸುವೆವು/ಆ ಹೊನ್ನನ್ನು ನಾವು ನಮಗಾಗಿಯೇ ಕೊಯ್ಲು ಮಾಡುವೆವು)

ಮುಂತಾದ ಹಾಡುಗಳನ್ನು ‘ಎಡಚರ’ ವಿರೋಧಿಗಳು ಕೂಡ ಗುನುಗಿದರೆ ಅಚ್ಚರಿಪಡಬೇಕಾಗಿಲ್ಲ.

ವಿಡಂಬನೆಯ ‘ಚುಚ್ಚು’ ಮದ್ದು
ತತ್ವ–ಸಿದ್ಧಾಂತಗಳು ಹಳಿ ತಪ್ಪುವ ಲಕ್ಷಣಗಳು ಗೋಚರಿಸಿದಾಗಲೆಲ್ಲ ಟೀಕೆ, ವಿಡಂಬನೆಗಳ ಮೂಲಕ ಸರಿದಾರಿಗೆ ತರುವ ಪ್ರಯತ್ನವೂಸಿನಿಮಾಗಳ ಮೂಲಕ ಆಗಿದೆ. ‘ಲಾಲ್‌ಸಲಾಂ’, ‘ಲೆಫ್ಟ್‌–ರೈಟ್–ಲೆಫ್ಟ್‌’ಮುಂತಾದವುಗಳಲ್ಲಿ ಇದೇ ಕಥಾ ಹಂದರ. ‘ಭೂಮಿಯಿಲೆ ರಾಜಾಕನ್ಮಾರ್’ ಚಿತ್ರದಲ್ಲಿ ರಾಜಕೀಯದ ಮಲಿನ ಕಳೆಯುವ ಮಹೇಂದ್ರ ವರ್ಮಾ, ‘ಸಂದೇಶಂ’ನಲ್ಲಿ ಸಿದ್ಧಾಂತಗಳಿಗಾಗಿ ಜಗಳವಾಡುವ ಸಹೋದರರಾದ ಪ್ರಭಾಕರನ್ ಮತ್ತು ಪ್ರಕಾಶನ್, ‘ವೆಳ್ಳಿಮೂಂಙ’ದಲ್ಲಿ ಕುತಂತ್ರಿಗಳನ್ನು ಕುತಂತ್ರದ ಮೂಲಕವೇ ಮಣಿಸುವ ಮಾಮಚ್ಚನ್, ‘ರಕ್ತಸಾಕ್ಷಿಗಳ್ ಜಿಂದಾಬಾದ್‌’ನಲ್ಲಿ ದಂಗೆಏಳುವ ಯುವಕರು, ಪಕ್ಷಕ್ಕಾಗಿ ದುಡಿದ ತಂದೆಯನ್ನು ಕೊಂದವರ ಮೇಲೆ ಹಗೆ ತೀರಿಸಿದ ನಂತರ ತಾಯಿಯ ಬಳಿ ‘ಇಷ್ಟಾದರೂ ಮಾಡದಿದ್ದರೆ ನಾನೊಬ್ಬ ಕಮ್ಯುನಿಸ್ಟ್‌ ಎನಿಸಿಕೊಳ್ಳಲು ಅನರ್ಹ’ ಎಂದು ‘ರಾಮ್‌ಲೀಲಾ’ದಲ್ಲಿ ಪ್ರತಿಪಾದಿಸುವ ರಾಮನುಣ್ಣಿ ಮುಂತಾದ ಪಾತ್ರಗಳು ಕಮ್ಯುನಿಸ್ಟ್ ಧೋರಣೆಗಳು, ಸಮಾಜವಾದ ಮತ್ತು ಎಡಪಕ್ಷಗಳ ತತ್ವ–ಸಿದ್ಧಾಂತ ಉಳಿಯಬೇಕೆಂಬ ಆಶಯ ಹೊತ್ತುಕೊಂಡೇ ಬೆಳ್ಳಿತೆರೆ ಮೇಲೆ ಆಶಾಭಾವವನ್ನು ಮೂಡಿಸಿವೆ. ಕೇರಳದಲ್ಲೀಗ ವಾಸ್ತವದ ರಾಜಕೀಯ, ಕವಲು ದಾರಿಯಲ್ಲಿ ಸಾಗುವ ಕಡೆಗೇ ಹೆಚ್ಚು ಒಲವು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT