ಸೋಮವಾರ, ಆಗಸ್ಟ್ 8, 2022
21 °C

ವರನಟ ಡಾ.ರಾಜ್‌ಕುಮಾರ್‌ 15ನೇ ವರ್ಷದ ಪುಣ್ಯಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದು ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರ 15ನೇ ವರ್ಷದ ಪುಣ್ಯತಿಥಿ. ಈ ಸಂದರ್ಭದಲ್ಲಿ ಸಾವಿರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಪುಣ್ಯಭೂಮಿಗೆ ಪುಷ್ಪನಮನವನ್ನು ನಟ ರಾಘವೇಂದ್ರ ರಾಜ್‌ಕುಮಾರ್‌ ಸಲ್ಲಿಸಿದರು. ಟ್ವೀಟ್‌ ಮೂಲಕವೂ ಅಪ್ಪನನ್ನು ನೆನೆದಿರುವ ಅವರು, ಹಾಡಿನ ಮೂಲಕ ರಾಜ್‌ಕುಮಾರ್‌ ಅವರನ್ನು ನೆನೆದ ರಾಘವೇಂದ್ರ ರಾಜ್‌ಕುಮಾರ್‌, ‘ನೂರಾರು ನೆನಪಿನ ಸಂತಸ ತುಂಬಿದ ಹಾಡು ಇದು, ಏಳೇಳು ಜನಮಕೂ ಬೆಸುಗೆ ಹಾಕುವ ಹಾಡು ಇದು. ಬಾಳಿನ ಬಾನಿನಲಿ ಪ್ರೇಮದ ಚಂದಿರ ಸಂಚಾರ. ಹುಣ್ಣಿಮೆ ರಾಶಿಯಲಿ ನಮ್ಮದು ಸುಂದರ ಸಂಸಾರ’ ಎಂದು ಸ್ವತಃ ರಾಜ್‌ಕುಮಾರ್‌ ಅವರೇ ಹಾಡಿರುವ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ. ಇದರಲ್ಲಿ ರಾಜ್‌ಕುಮಾರ್‌ ಅವರ ಜೊತೆಗೆ ಕುಟುಂಬದ ಸದಸ್ಯರು ಇರುವ ಸಂಗ್ರಹ ಚಿತ್ರಗಳಿವೆ.

ಮಗನಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ: ‘ಕಳೆದ 15 ವರ್ಷದಲ್ಲಿ ಅಪ್ಪಾಜಿ ಇಲ್ಲ ಎನ್ನುವ ಭಾವನೆ ಮೂಡೇ ಇಲ್ಲ. ನೆನಪು, ಪ್ರೀತಿ, ವಿಶ್ವಾಸ ಅವರು ನಮ್ಮಲ್ಲಿ ಬಿಟ್ಟುಹೋಗಿದ್ದಾರೆ. ಕುಟುಂಬದ ಜೊತೆ ಹೇಗಿರಬೇಕು ಎನ್ನುವುದನ್ನು ಅವರು ಕಲಿಸಿದ್ದಾರೆ. ಜನರ ಪ್ರೀತಿ ಗಳಿಸಿದ್ದೇವೆ. ಅವರ ಮಗನಾಗಿ ಹುಟ್ಟಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಪುನೀತ್‌ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಟ್ವೀಟ್‌ ಮಾಡಿ, ‘ಅಪ್ರತಿಮ ಕಲಾವಿದ, ಕನ್ನಡ ಚಿತ್ರರಂಗದ ಮೇರುನಟ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ನೆಚ್ಚಿನ ‘ಅಣ್ಣಾವ್ರು’, ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

‘ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರು ನಮ್ಮನ್ನಗಲಿ ಇಂದಿಗೆ 15 ವರ್ಷ ಕಳೆದಿದೆ. ತಮ್ಮ ಅದ್ಭುತ ನಟನೆ ಮತ್ತು ಸಿರಿಕಂಠದ ಮೂಲಕ ಕನ್ನಡ ನಾಡಿನ ಜನಮಾನಸದಲ್ಲಿ ಅಜರಾಮರರಾಗಿರುವ ನೆಚ್ಚಿನ ಅಣ್ಣಾವ್ರಿಗೆ ಅವರ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು’ ಎಂದು ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮಾಡಿದ್ದಾರೆ.

ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ಹಲವೆಡೆ ರಾಜ್‌ಕುಮಾರ್ ಅಭಿಮಾನಿಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

‘ನಮ್ಮ ಕರುನಾಡಿಗೆ ಅಪಾರ ಸೇವೆ ಸಲ್ಲಿಸಿ ಕನ್ನಡಿಗರ ಮನದಲ್ಲಿ ಸದಾ ರಾಜನಾಗಿ ಉಳಿದಿರುವ ಅಣ್ಣಾವ್ರು ಡಾ.ರಾಜ್‌ ಅವರ ಪುಣ್ಯಸ್ಮರಣೆ. ಮರೆಯಲಾಗದ ಮಾಣಿಕ್ಯ’ ಎಂದು ನಟ ದರ್ಶನ್‌ ಟ್ವೀಟ್‌ ಮೂಲಕ ನಮನ ಸಲ್ಲಿಸಿದರು.

ಭಾವುಕರಾದ ಜಗ್ಗೇಶ್‌: ನಟ ಜಗ್ಗೇಶ್‌ ಅವರು ಟ್ವೀಟ್‌ ಮೂಲಕ ‘ರಾಜಣ್ಣ ನನ್ನ ಹೃದಯದಲ್ಲೇ ಲೀನವಾಗಿದ್ದಾರೆ! ಮತ್ತೆ ಬನ್ನಿ ಅಣ್ಣ’ ಎಂದು
ಬರೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು