ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದಲ್ಲೀಗ ಚಿತ್ರೋತ್ಸವ

Last Updated 18 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಒಂದೂವರೆ ವರ್ಷದಿಂದ ಮಂಕಾಗಿದ್ದ ರಾಜ್ಯದ ಚಿತ್ರಮಂದಿರಗಳಲ್ಲಿ ಇದೀಗ ಚಿತ್ರೋತ್ಸವದ ವಾತಾವರಣ. ಮತ್ತೆ ಶಿಳ್ಳೆ–ಚಪ್ಪಾಳೆಗಳ ಮಾರ್ದನಿ.

ಕೋವಿಡ್‌ ಎರಡನೇ ಅಲೆಯ ಬಳಿಕ, ರಾಜ್ಯದಲ್ಲಿ ನಾಡಹಬ್ಬದೊಂದಿಗೆ ಸಿನಿಮಾ ಹಬ್ಬವೂ ಆರಂಭವಾಗಿತ್ತು. ‘ಸಲಗ’, ‘ಕೋಟಿಗೊಬ್ಬ–3’ ಹಾಗೂ ‘ಭಜರಂಗಿ–2’ ಹೀಗೆ ಬಿಗ್‌ಬಜೆಟ್‌ ಚಿತ್ರಗಳು ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಮತ್ತೆ ಸೆಳೆದಿದ್ದವು. ನಲುಗಿದ್ದ ಚಿತ್ರರಂಗ ಇದೀಗ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ವರ್ಷಾಂತ್ಯದಲ್ಲಿ ಸಾಲು ಸಾಲು ಚಿತ್ರಗಳು ಪ್ರೇಕ್ಷಕರಿಗೆ ಮನರಂಜನೆಯನ್ನುಣಿಸಲು ಸಜ್ಜಾಗಿವೆ.

ಶುಕ್ರವಾರದಂದು(ನ.19) ರಾಜ್‌ ಬಿ.ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’, ರಮೇಶ್‌ ನಟಸಿ ನಿರ್ದೇಶಿಸಿರುವ ‘100’, ಮನು ರವಿಚಂದ್ರನ್‌ ನಟನೆಯ ‘ಮುಗಿಲ್‌ಪೇಟೆ’, ನಿರ್ದೇಶಕ ಭಾರತಿ ಶಂಕರ್ ಅವರ ‘ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು’ ಸಿನಿಮಾ ತೆರೆ ಕಾಣಲಿವೆ. ನ.26ಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ‘ಸಖತ್‌’, ಸುಮಂತ್ ಶೈಲೇಂದ್ರ ನಾಯಕರಾಗಿ ನಟಿಸಿರುವ ‘ಗೋವಿಂದ ಗೋವಿಂದ’ ಬಿಡುಗಡೆಯಾಗಲಿವೆ.

ಡಿಸೆಂಬರ್‌ನಲ್ಲೂ ಪರದೆಯ ಮೇಲೆ ಚಿತ್ರಗಳ ಹಬ್ಬವೇ. ಡಿ.3ಕ್ಕೆ ಶ್ರೀಮುರಳಿ ನಟನೆಯ ‘ಮದಗಜ’, ಡಿ.10ಕ್ಕೆ ಶರಣ್‌ ನಟನೆಯ ‘ಅವತಾರ ಪುರುಷ’, ಡಿ.24ಕ್ಕೆ ‘ಡಾಲಿ’ ಧನಂಜಯ್‌ ನಟನೆಯ ‘ಬಡವ ರಾಸ್ಕಲ್‌’, ಡಿ.31ಕ್ಕೆ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಬಿಡುಗಡೆಯಾಗಲಿವೆ. ನಿಖಿಲ್‌ ಕುಮಾರಸ್ವಾಮಿ ನಟನೆಯ ‘ರೈಡರ್‌’, ವಿ.ರವಿಚಂದ್ರನ್‌ ನಟನೆಯ ‘ದೃಶ್ಯ–2’, ಪವನ್‌ ಒಡೆಯರ್‌ ನಿರ್ದೇಶನದ ‘ರೇಮೊ’ ಕೂಡಾ ಡಿಸೆಂಬರ್‌ನಲ್ಲೇ ರಿಲೀಸ್‌ ಆಗುತ್ತಿದ್ದು, ಇವುಗಳ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

‘ಕೋವಿಡ್‌ ಭಯದಿಂದ ಚಿತ್ರರಂಗ ಹೊರಬಂದಿದೆ ಎನ್ನುವುದಕ್ಕೆ ಇಷ್ಟು ಚಿತ್ರಗಳು ತೆರೆ ಕಾಣುತ್ತಿರುವುದು ಸಾಕ್ಷಿಯಾಗಿದೆ. ಇವುಗಳಲ್ಲಿ ಬಹುತೇಕ ಚಿತ್ರಗಳು ನಗರ ಕೇಂದ್ರಿತವಾಗಿವೆ. ಪ್ರಸ್ತುತ ಬಿಡುಗಡೆಯಾಗಿರುವ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಮತ್ತು ಬಿಡುಗಡೆಯಾಗಲಿರುವ ಚಿತ್ರಗಳಲ್ಲಿ ಯಾವುದಾದರೂ ಮೂರ್ನಾಲ್ಕು ಸಿನಿಮಾಗಳು 50 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಪ್ರದರ್ಶನ ಕಂಡರೆ ಜನವರಿಯಿಂದ ಚಿತ್ರೋದ್ಯಮ ಮತ್ತಷ್ಟು ಚೇತರಿಕೆ ಕಾಣಬಹುದು’ ಎನ್ನುತ್ತಾರೆ ವೀರೇಶ್‌ ಚಿತ್ರಮಂದಿರದ ಮಾಲೀಕ, ಕರ್ನಾಟಕ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್‌.

ಗರುಡ ಗಮನ ವೃಷಭ ವಾಹನ ಚಿತ್ರದ ಪೋಸ್ಟರ್‌
ಗರುಡ ಗಮನ ವೃಷಭ ವಾಹನ ಚಿತ್ರದ ಪೋಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT