ತೆರೆಗೆ ಬರಲಿದೆ ‘ಮಹಾಕಾವ್ಯ’

ಶುಕ್ರವಾರ, ಮೇ 24, 2019
22 °C

ತೆರೆಗೆ ಬರಲಿದೆ ‘ಮಹಾಕಾವ್ಯ’

Published:
Updated:
Prajavani

ಚಂದನವನದಲ್ಲಿ ಸದ್ದಿಲ್ಲದೆಯೇ ಒಂದು ‘ಮಹಾಕಾವ್ಯ’ ತಯಾರಾಗಿದೆ. ಕೆಲವು ದಶಕಗಳ ಹಿಂದೆ ‘ಕವಿರತ್ನ ಕಾಳಿದಾಸ’, ‘ಬಬ್ರುವಾಹನ’, ‘ಮಯೂರ’ದಂತಹ ಚಿತ್ರಗಳು ಬೆಳ್ಳಿತೆರೆಯ ಮೇಲೆ ಭರ್ಜರಿ ಯಶಸ್ಸು ಕಂಡಿದ್ದವು. ಇತ್ತೀಚಿನ ಒಂದೆರಡು ದಶಕಗಳಲ್ಲಿ ಕನ್ನಡ ಬೆಳ್ಳಿತೆರೆಯು ಮಗ್ಗುಲು ಬದಲಿಸಿದೆ. ಪೌರಾಣಿಕ ಕಥೆ ಅಥವಾ ಕಾವ್ಯವನ್ನು ಆಧರಿಸಿದ ಸಿನಿಮಾಗಳು ಬೆಳ್ಳಿ ತರೆಯಿಂದ ಮೈಲುಗಳಷ್ಟು ದೂರ ಸರಿದಿವೆ. ಇಂಥ ಸಂದರ್ಭದಲ್ಲೇ ಹಲವು ಮಹಾಕಾವ್ಯಗಳನ್ನು ಆಧರಿಸಿದ ‘ಮಹಾಕಾವ್ಯ’ ಎಂಬ ಸಿನಿಮಾ ಒಂದು ತೆರೆಕಾಣಲು ಸಿದ್ಧವಾಗಿದೆ.

ಹಿಂದೆ ‘ಎದ್ದಿದೆ ಗದ್ದಲ’ ಎಂಬ ಚಿತ್ರವನ್ನು (1995ರಲ್ಲಿ) ನಿರ್ಮಿಸಿದ್ದ ಎಸ್‌ಆರ್‌ಕೆ ಪಿಕ್ಚರ್ಸ್‌ ಸಂಸ್ಥೆಯು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ‘ಮಹಾಕಾವ್ಯ’ ಚಿತ್ರವನ್ನು ನಿರ್ಮಿಸಿದೆ. ಶ್ರೀದರ್ಶನ್‌ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದಲ್ಲದೆ ತಾವೇ ದುರ್ಯೋಧನನ ಪಾತ್ರವನ್ನೂ ಮಾಡಿದ್ದಾರೆ.

ಚಿತ್ರ ತಂಡದ ಗಣ್ಯರಿಗಾಗಿ ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದ ನಂತರ, ಪ್ರಚಾರದ ಮೊದಲ ಹಂತವಾಗಿ ಚಿತ್ರ ತಂಡವು ಮಾಧ್ಯಮದವರ ಮುಂದೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿತು. ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಜರಿದ್ದು ಹೊಸ ಪ್ರಯತ್ನಕ್ಕೆ ಶುಭ ಕೋರಿದರು.

‘ಪಂಪ, ರನ್ನ, ಪೊನ್ನ ಆದಿಯಾಗಿ ನಮ್ಮ ಕವಿಗಳು ರಚಿಸಿರುವ ಸುಮಾರು 58 ಗ್ರಂಥಗಳ ಅಧ್ಯಯನ ನಡೆಸಿ ಈ ಚಿತ್ರವನ್ನು ನಿರ್ಮಿಸಿದ್ದೇವೆ. ಪಂಪನ ‘ಶಾಂತಿನಾಥ ಪುರಾಣ’, ರನ್ನನ ‘ಗದಾಯುದ್ಧ’ ಮತ್ತು ಪೊನ್ನನ ‘ಶಕ್ತಿ ಪುರಾಣ’ ಕಾವ್ಯಗಳಿಂದ ಆಯ್ದ ಸುಮಾರು 38 ಪದ್ಯಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ’ ಎಂದು ನಿರ್ದೇಶಕ ಶ್ರೀದರ್ಶನ್‌ ಮಾಹಿತಿ ನೀಡಿದರು.

ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಪುತ್ರ ಪುರುಷೊತ್ತಮ ಕಣಗಾಲ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಸುಮಾರು 52 ನಿಮಿಷಗಳ ಗ್ರಾಫಿಕ್ಸ್‌ ಇದೆ. ಗ್ರಾಫಿಕ್ಸ್‌ ಮಾಡಿಸಲು ಸುಮಾರು ಆರು ತಿಂಗಳ ಕಾಲ ಹಿಡಿಯಿತು. ನಾಲ್ಕು ದಶಕಗಳ ಬಳಿಕ ಕನ್ನಡದಲ್ಲಿ ಇಂಥ ಚಿತ್ರವೊಂದು ತೆರೆಕಾಣುತ್ತಿದೆ ಎಂಬ ಮಾಹಿತಿಯನ್ನೂ ಶ್ರೀದರ್ಶನ್‌ ನೀಡಿದರು.

ಚಿತ್ರದಲ್ಲಿ ರನ್ನನಾಗಿ ರಾಮಕೃಷ್ಣ, ಪಂಪನಾಗಿ ರವಿ ಭಟ್‌ ಹಾಗೂ ಪೊನ್ನನಾಗಿ ಪುರುಷೋತ್ತಮ ಕಣಗಾಲ್‌ ಅಭಿನಯಿಸಿದ್ದಾರೆ. ವಲ್ಲಭ್‌ ಸೂರಿ, ಗಣೇಶರಾವ್‌ ಕೇಸರ್ಕರ್‌, ಶಾಂತಿ ಗೌಡ, ಅನಂತ ವೇಲು, ಪ್ರದೀಪ್‌, ಗಿರೀಶ್‌, ಲಕ್ಷ್ಮಿ ಭಟ್‌, ಆಶಾ ನಾಗೇಶ್‌, ಅರವಿಂದ್‌, ಚೆಲುವರಾಜ್‌ ಅವರನ್ನೊಳಗೊಂಡ ತಾರಾಗಣವಿದೆ.

ಮನೋರಂಜನ್‌ ಪ್ರಭಾಕರ್‌ ಸಂಗೀತ ಮತ್ತು ಮುತ್ತುರಾಜ್‌ ಅವರ ಛಾಯಾಗ್ರಹಣವಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !