ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿಯಲ್ಲಿ ‘ಜಗಮೆ ತಂಧಿರಾಮ್‌’ ಸಿನಿಮಾದ ಬಿಡುಗಡೆ ಇಲ್ಲ: ನಿರ್ಮಾಪಕರ ಸ್ಪಷ್ಟನೆ

Last Updated 28 ಆಗಸ್ಟ್ 2020, 6:09 IST
ಅಕ್ಷರ ಗಾತ್ರ

‘ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ ಧನುಷ್‌ ನಟನೆಯ ತಮಿಳಿನ ‘ಜಗಮೆ ತಂಧಿರಾಮ್‌’ ಸಿನಿಮಾವು ಥಿಯೇಟರ್‌ನಲ್ಲಿಯೇ ಬಿಡುಗಡೆಯಾಗಲಿದೆ. ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ’ ಎಂದು ಚಿತ್ರದ ನಿರ್ಮಾಪಕ ಎಸ್. ಶಶಿಕಾಂತ್‌ ಸ್ಪಷ್ಟಪಡಿಸಿದ್ದಾರೆ.

ಸೂರ್ಯ ನಟನೆಯ ತಮಿಳಿನ ‘ಸೂರರೈ ಪೊರಟ್ಟು’ ಸಿನಿಮಾ ಅಕ್ಟೋಬರ್‌ 30ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದರ ಬೆನ್ನಲ್ಲೇ ‘ಜಗಮೆ ತಂಧಿರಾಮ್‌’ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತ್ತು.

ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ಅಭಿಮಾನಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಚಿತ್ರಮಂದಿರಗಳು ಪುನರಾರಂಭವಾಗುವುದನ್ನೇ ನಾವು ಎದುರು ನೋಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಮೇ ತಿಂಗಳ ಮೊದಲ ವಾರವೇ ‘ಜಗಮೆ ತಂಧಿರಾಮ್‌’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಚಿತ್ರತಂಡ ಕೂಡ ಇದಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್‌–19 ಪರಿಣಾಮ ಬಿಡುಗಡೆಯು ಮುಂದಕ್ಕೆ ಹೋಗಿತ್ತು.

ಆ್ಯಕ್ಷನ್‌– ಥ್ರಿಲ್ಲರ್‌ ಚಿತ್ರ ಇದಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಪಾಸ್‌ಪೋರ್ಟ್‌ ಸ್ಟಾಂಪ್‌ಗಳನ್ನು ಬಳಸಿ ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್‌ ವೈರಲ್‌ ಆಗಿತ್ತು.

ಕಳೆದ ವರ್ಷ ಧನುಷ್‌ ನಟನೆಯ ‘ಅಸುರನ್’ ಚಿತ್ರ ತೆರೆಕಂಡಿತ್ತು. ಇದಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಜೊತೆಗೆ ಬಾಕ್ಸ್‌ಆಫೀಸ್‌ನಲ್ಲೂ ಒಳ್ಳೆಯ ಗಳಿಕೆ ಕಂಡಿತ್ತು. ಈ ಸಿನಿಮಾ ತೆಲುಗಿಗೂ ರಿಮೇಕ್‌ ಆಗಿದ್ದು ‘ವಿಕ್ಟರಿ’ ಖ್ಯಾತಿಯ ವೆಂಕಟೇಶ್‌ ಇದರಲ್ಲಿ ಧನುಷ್‌ ನಟಿಸಿದ್ದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಹಾಗಾಗಿ, ‘ಜಗಮೆ ತಂಧಿರಾಮ್’ ಸಿನಿಮಾದ ಮೇಲೂ ನಿರೀಕ್ಷೆ ದು‍ಪ್ಪಟ್ಟಾಗಿದೆ.

ಮದ್ರಾಸ್‌ ಮೂಲದ ಗ್ಯಾಂಗ್‌ಸ್ಟರ್‌ ಮತ್ತು ಅಂತರರಾಷ್ಟ್ರೀಯ ಮಾಫಿಯಾದ ನಡುವೆ ನಡೆಯುವ ಕಥಾನಕ ಇದಾಗಿದೆ. ಲಂಡನ್‌ ಭಾಗದ ಕಥೆಗೆ ನಟಿ ಐಶ್ವರ್ಯ ಲಕ್ಷ್ಮಿ ಹೀರೊಯಿನ್ ಆಗಿದ್ದಾರೆ. ಭಾರತದಲ್ಲಿ ನಡೆಯುವ ಕಥೆಯಲ್ಲಿ ಸಂಜನಾ ನಟರಾಜನ್‌ ಅವರು ಧನುಷ್‌ ಪತ್ನಿಯಾಗಿ ನಟಿಸಿದ್ದಾರೆ. ಸ್ಕಾಟ್ಲೆಂಡ್‌ ನಟ ಜೇಮ್ಸ್‌ ಕಾಸ್ಮೋ ಖಳನಟನಾಗಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಇದಕ್ಕೆ ಸಂಗೀತ ಸಂಯೋಜಿಸಿರುವುದು ಸಂತೋಷ್‌ ನಾರಾಯಣನ್‌. ಶ್ರೇಯಸ್‌ ಕೃಷ್ಣ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT