ಮಾಲಿವುಡ್‌ನಲ್ಲಿ ಪೋಷಕ ನಟರೇ 'ಸ್ಟಾರ್'

ಬುಧವಾರ, ಜೂನ್ 19, 2019
22 °C

ಮಾಲಿವುಡ್‌ನಲ್ಲಿ ಪೋಷಕ ನಟರೇ 'ಸ್ಟಾರ್'

Published:
Updated:
Prajavani

ಮಲಯಾಳ ಚಿತ್ರರಂಗದಲ್ಲಿ ಈಗ ಯುವ ನಟರ ಚಿತ್ರಗಳೇ ಹೆಚ್ಚು ಸದ್ದು ಮಾಡುತ್ತಿವೆ. ಅದರಲ್ಲೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದವರು ನಾಯಕರಾಗಿ ನಟಿಸಿರುವ ಸಿನಿಮಾಗಳು ಹೆಚ್ಚು ಯಶಸ್ಸು ಕಾಣುತ್ತಿವೆ.

ಇಂತಹ ಸಿನಿಮಾಗಳ ಸಾಲಿಗೆ ಸೇರುವ ಚಿತ್ರ 'ತಮಾಷ'. ಈಚೆಗೆ ಬಿಡುಗಡೆಗೊಂಡಿರುವ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿನಯ್ ಫೋರ್ಟ್ ನಾಯಕನಾಗಿರುವ ಈ ಚಿತ್ರ ಕನ್ನಡದ 'ಒಂದು ಮೊಟ್ಟೆಯ ಕಥೆ'ಯಿಂದ ಪ್ರೇರಣೆಗೊಂಡು ನಿರ್ಮಾಣವಾಗಿದೆ. ಅಶ್ರಫ್ ಹಮ್ಜಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ವಿನಯ್ ಅವರು 2009ರಲ್ಲಿ ಶ್ಯಾಮ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ರಿತು' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದವರು. ಅನಂತರ ಸಿಬಿ ಮಲಯಿಲ್ ನಿರ್ದೇಶನದ 'ಅಪೂರ್ವ ರಾಗಂ' ಸಿನಿಮಾದಲ್ಲೂ ಗಮನಾರ್ಹ ಪಾತ್ರ ನಿರ್ವಹಿಸಿದ್ದರು. ಮುಂದೆ ಅಮಲ್ ನೀರದ್ ನಿರ್ದೇಶನದ 'ಅನ್ವರ್' ಸಿನಿಮಾದಲ್ಲೂ ಗಮನ ಸೆಳೆಯುವ ಪಾತ್ರದಲ್ಲಿ ನಟಿಸಿದ್ದರು. 'ತೀವ್ರಂ', 'ಷಟರ್','ಹೌ ಓಲ್ಡ್ ಆರ್ ಯು', 'ಮಸಾಲ ರಿಪಬ್ಲಿಕ್', 'ಮಂಗ್ಲಿಷ್' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು.

2015ರಲ್ಲಿ ತೆರೆಕಂಡಿದ್ದ 'ಪ್ರೇಮಂ' ಸಿನಿಮಾದ ನಟನೆಯು ವಿನಯ್ ಗೆ ಹೆಚ್ಚು ಹೆಸರು ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ಇವರು ನಟಿಸಿದ್ದರು. ಅನಂತರ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿ ಬಂದಿತ್ತು. ಪೋಷಕ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿ ಅನಂತರ ನಾಯಕ ನಟನಾಗಿ ಗಮನ ಸೆಳೆದ ಇನ್ನೊಬ್ಬ ನಟ ಶೈನ್ ಟಾಮ್ ಚಾಕೊ. ಈಗ ಖಳ ಪಾತ್ರದ ಮೂಲಕ ಇವರು ಮಿಂಚುತ್ತಿದ್ದಾರೆ.

ಮಾಲಿವುಡ್‌ನಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಅನುರಾಜ್ ಮನೋಹರ್ ನಿರ್ದೇಶನದ 'ಇಷ್ಕ್' ಸಿನಿಮಾದಲ್ಲಿ ಶೈನ್ ಖಳ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಲಯಾಳದ ಹೆಸರಾಂತ ಚಿತ್ರ ನಿರ್ದೇಶಕ ಕಮಲ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶೈನ್ ಪೋಷಕ ಪಾತ್ರಗಳ ಮೂಲಕ ತೆರೆಯ ಮುಂದೆ ಬಂದಿದ್ದರು.

ಆಶಿಕ್ ಅಬು ನಿರ್ದೇಶನದ 'ಸಾಲ್ಟ್ ಅಂಡ್ ಪೆಪ್ಪರ್', ಅರುಣ್ ಕುಮಾರ್ ಅರವಿಂದ್ ಅವರ 'ಈ ಅಡುತ್ತ ಕಾಲತ್ತ್' ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ. 'ಚಾಪ್ಟರ್ಸ್','ಅರಿಗಿಲ್ ಒರಾಳ್', 'ಹ್ಯಾಂಗ್ ಓವರ್' ಮೊದಲಾದ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದರು.

2014ರಲ್ಲಿ ಬಿನು ಎಸ್. ನಿರ್ದೇಶನದಲ್ಲಿ ಮೂಡಿಬಂದಿದ್ದ 'ಇತಿಹಾಸಂ' ಚಿತ್ರದಲ್ಲಿ ಚಾಕೊ ಅವರು ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ್ದರು. ಈ ಫ್ಯಾಂಟಸಿ ಹಾಸ್ಯ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಅನಂತರ ಚಾಕೊ ಅವರಿಗೆ ಸಾಕಷ್ಟು ಅವಕಾಶಗಳೂ ಲಭಿಸಿದವು. ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಸದ್ಯ ಚಾಕೊ ಅವರು ನಾಯಕ ಪಾತ್ರಕ್ಕಿಂತಲೂ ನೆಗೆಟಿವ್ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

'ಇಷ್ಕ್' ನಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಶೇನ್ ನಿಗಮ್ ಕೂಡ ಪೋಷಕ ಪಾತ್ರಗಳಲ್ಲಿ ನಟಿಸಿ ಅನಂತರ ನಾಯಕ ನಟನಾಗಿ ಭಡ್ತಿ ಹೊಂದಿದವರು.

ಇದೇ ರೀತಿ ಹೆಸರು ಮಾಡಿದವರು ಇನ್ನೊಬ್ಬ ನಟ ಜೋಜು ಜೋರ್ಜ್. ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ನಾಯಕನಾಗಿ ನಟಿಸಿದ 'ಜೋಸೆಫ್' ಸಿನಿಮಾ ಭರ್ಜರಿ ಹಿಟ್ ಆಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !