ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರುತಿ ಮೇಲೆ ತಪ್ಪು ಹೊರಿಸುವುದು ಎಷ್ಟು ಸರಿ?: ಮಂನ್ಸೋರೆ ಸ್ಪಷ್ಟನೆ

ನಾತಿಚರಾಮಿ ನಿರ್ದೇಶಕ
Last Updated 11 ಡಿಸೆಂಬರ್ 2018, 9:54 IST
ಅಕ್ಷರ ಗಾತ್ರ

ಇತ್ತೀಚೆಗೆ ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಚಿತ್ರದ ಟ್ರೈಲರ್ ಮತ್ತು ಧ್ವನಿಸುರಳಿ ಬಿಡುಗಡೆ ಮಾಡಲಾಯ್ತು. ನಟಿ ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್‌ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಕಾರ್ಯಕ್ರಮಕ್ಕೆ ಶ್ರುತಿ ಹರಿಹರನ್ ಹಾಜರಿರಲಿಲ್ಲ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ‘ಮೀಟೂ ಪ್ರಕರಣದ ಕಾರಣಕ್ಕೆ ಶ್ರುತಿ ಪತ್ರಿಕಾಗೋಷ್ಠಿಗೆ ಬಂದಿಲ್ಲ, ಪ್ರಚಾರ ಕಾರ್ಯಗಳಿಂದ ದೂರ ಇದ್ದಾರೆ’ ಎಂಬ ರೀತಿಯ ಸುದ್ದಿ ಪ್ರಕಟವಾಗುತ್ತಿರುವುದಕ್ಕೆ ನಿರ್ದೇಶಕ ಮಂಸೋರೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಸ್ಪಷ್ಟನೆಯನ್ನು ಅವರು ಪತ್ರರೂಪದಲ್ಲಿ ಬರೆದಿದ್ದಾರೆ. ಅವರು ಬರೆದಿರುವುದು ಹೀಗಿದೆ.

‘ಪತ್ರಿಕೆ ಹಾಗೂ ಮಾಧ್ಯಮ ಮಿತ್ರರಲ್ಲೊಂದು ಒಂದು ಮನವಿ.

ಮೊನ್ನೆ ನಡೆದ ನಮ್ಮ ‘ನಾತಿಚರಾಮಿ’ ಸಿನೆಮಾದ ಧ್ವನಿಸುರುಳಿ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನೀವೆಲ್ಲಾ ಬಂದದ್ದು ತುಂಬಾ ಖುಷಿ ನೀಡಿತು. ತುಂಬಾ ಕಡಿಮೆ ಅವಧಿಯಲ್ಲಿ ಆಹ್ವಾನಿಸಿದರೂ ಸಹ, ತಾವೆಲ್ಲರೂ ಭಾಗವಹಿಸಿದಿರಿ. ಇದಕ್ಕೆ ನಾನು ಆಭಾರಿ.
ಈ ಸಮಾರಂಭದಲ್ಲಿ ನಮ್ಮ ಸಿನಿಮಾದ ಮುಖ್ಯ ಪಾತ್ರಧಾರಿ ಶ್ರುತಿ ಹರಿಹರನ್ ಅವರು ಭಾಗವಹಿಸಲು ಸಾಧ್ಯವಾಗದೇ ಇರುವುದು ನಮ್ಮ ತಂಡಕ್ಕೂ ದೊಡ್ಡ ಕೊರತೆಯೇ ಸರಿ. ಆದರೆ ಇದರಲ್ಲಿ ಅವರ ತಪ್ಪೇನೂ ಇಲ್ಲ. ಕೊನೇ ಕ್ಷಣದಲ್ಲಿ ಈ ಸಮಾರಂಭವನ್ನು ಆಯೋಜಿಸಿದ್ದು ನನ್ನ ತಪ್ಪು. ಅವರು ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ಇದ್ದಿದ್ದರಿಂದ ಅವರು ಚಿತ್ರೀಕರಣವನ್ನು ನಿಲ್ಲಿಸಿ ಬರಲು ಸಾಧ್ಯವಾಗಲಿಲ್ಲ. ಈ ವಿಷಯವನ್ನು ಅಂದೇ ಸ್ಪಷ್ಟಪಡಿಸಿದ್ದೇನೆ.

ಆದರೂ ಸಹ ಕೆಲವು ಮಾಧ್ಯಮಗಳಲ್ಲಿ ಶ್ರುತಿ ಅವರು ಮೀಟೂ ಪ್ರಕರಣದಿಂದಾಗಿ ಬಂದಿಲ್ಲ, ಪ್ರಚಾರಕಾರ್ಯಗಳಿಂದ ದೂರ ಉಳಿದಿದ್ದಾರೆ ಇತ್ಯಾದಿ ಶೀರ್ಷಿಕೆ ನೀಡಿರುವುದು ವಯಕ್ತಿಕವಾಗಿ ನನಗೆ ನೋವು ನೀಡಿದೆ. ಅವರ ತಪ್ಪೇ ಇಲ್ಲದೇ ಅವರನ್ನು ತಪ್ಪಿತಸ್ಥರನ್ನಾಗಿಸುವುದು ಎಷ್ಟರಮಟ್ಟಿಗೆ ಸರಿ? ನೀವೇ ಹೇಳಿ.

ಈ ಸಿನಿಮಾ ನನ್ನ ಕನಸಿನ ಕೂಸು. ಇದಕ್ಕೆ ಬಂಡವಾಳ ಹೂಡಿರುವವರು ನಿರ್ಮಾಪಕರು. ಇದು ಸಿನಿಮಾ ಆಗಿ ರೂಪುಗೊಳ್ಳುವುದರ ಹಿಂದೆ ಹಲವಾರು ಜನರು ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ಈ ಸಿನಿಮಾ ಸಕಾರಾತ್ಮಕವಾಗಿ ಚಿತ್ರಿತವಾದರೆ ಮಾತ್ರ ಜನರು ನೋಡಲು ಬರುತ್ತಾರೆ. ಈ ಸಿನಿಮಾದಲ್ಲಿ ನನ್ನ ಹಾಗೂ ನನ್ನ ತಂಡದ ಭವಿಷ್ಯವಿದೆ. ಮೀಟೂ ಪ್ರಕರಣ ಶ್ರುತಿ ಅವರ ವೈಯಕ್ತಿಕ ವಿಷಯ. ಅದನ್ನು ನಮ್ಮ ಸಿನಿಮಾದೊಂದಿಗೆ ತಳುಕು ಹಾಕಬೇಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಶ್ರುತಿ ಗೈರುಹಾಜರಿ ಬಗ್ಗೆ ಉಲ್ಲೇಖಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದನ್ನೇ ಮುಖ್ಯವಾಗಿ ಪರಿಗಣಿಸದೆ, ನಮ್ಮ ಸಿನಿಮಾ ಹಾಗೂ ಪರಿಶ್ರಮ ಹಾಗೂ ಕೃತಿಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತಾಡಿದರೆ ಪ್ರಚಾರಕ್ಕೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ನಿಮ್ಮ ಬೆಂಬಲ ನಮಗೆ ಅತ್ಯಮೂಲ್ಯ.

ನಿಮ್ಮ
ಮಂಸೋರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT