ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲೊಬ್ಬ ಮಾಯಾವಿಗೆ ‘ಎ’ ಪ್ರಮಾಣ ಪತ್ರ

Last Updated 23 ಜೂನ್ 2020, 7:52 IST
ಅಕ್ಷರ ಗಾತ್ರ

ನಟ ಸಂಚಾರಿ ವಿಜಯ್‌ ಮತ್ತು ನಿರ್ದೇಶಕ ಬಿ. ನವೀನ್‌ ಕೃಷ್ಣ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಮೇಲೊಬ್ಬ ಮಾಯಾವಿ’ ಚಿತ್ರ ಕುತೂಹಲ ಹೆಚ್ಚಿಸಿದೆ. ಲಾಕ್‌ಡೌನ್‌ಗೂ ಮೊದಲೇ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಳಿಸಿದ್ದ ಈಸಿನಿಮಾ, ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮುಂದೆ ಹೋಗಿತ್ತು. ಮಂಡಳಿಯು ಯಾವುದೇ ಕಟ್‌ ಹಾಗೂ ಸೌಂಡ್ ಮ್ಯೂಟ್‌ ಮಾಡದೆ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ನೀಡಿದೆ.

ಆ್ಯಕ್ರೊಮೊಟಾಪ್ಸಿಯಾ ರೋಗದ ನ್ಯೂನತೆ ಮತ್ತು ಅದರ ಸಾವು-ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ಸುತ್ತ ಇದರ ಕಥೆ ಹೆಣೆಯಲಾಗಿದೆಯಂತೆ. ನೈಜ ಘಟನೆಗಳ ಕುರಿತಾದ ಸಿನಿಮಾ ಇದು ಎಂದು ಚಿತ್ರತಂಡ ಹೇಳಿದೆ.

ಪತ್ರಕರ್ತ ನವೀನ್‌ ಕೃಷ್ಣ ಕಥೆ ಬರೆದು ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕದ್ರಿ ಮಣಿಕಾಂತ್ ಅವರ ಹಿನ್ನೆ‌ಲೆ ಸಂಗೀತವಿದೆ. ಕೆ. ಗಿರೀಶ್ ಕುಮಾರ್ ಸಂಕಲನ ನಿರ್ವಹಿಸಿದ್ದಾರೆ. ಛಾಯಾಗ್ರಹಣ ದೀಪಿತ್ ಅವರದ್ದು. ರಾಮು ನೃತ್ಯ ಸಂಯೋಜನೆ ಮಾಡಿದ್ದಾರೆ.

ಗಾಯಕ ದಿವಂಗತ ಎಲ್.ಎನ್. ಶಾಸ್ತ್ರಿ ಅವರು ಈ ಚಿತ್ರದ ‘ಕಳ್ಳಕೊಳಲ ಹಿಡಿದವನೊಬ್ಬ ಗೋಪಾಲ’ ಗೀತೆಗೆ ಸಂಗೀತ ಸಂಯೋಜನೆಯ ಜೊತೆಗೆ ಧ್ವನಿಯಾಗಿದ್ದಾರೆ. ಇದು ಅವರ ಕೊನೆಯ ಚಿತ್ರವೂ ಹೌದು.

ಚಿತ್ರದಲ್ಲಿ ಸಂಚಾರಿ ವಿಜಯ್‌ ಅವರ ಪಾತ್ರದ ಹೆಸರು ಇರುವೆ. ಆ ಇರುವೆಗೆ ಯಕ್ಷಗಾನದ ವೇಷ ಹಾಕಬೇಕೆಂಬ ಆಸೆ ಇರುತ್ತದೆ. ಆದರೆ, ಇರುವೆಗೆ ಹುಟ್ಟಿನಿಂದಲೇ ನ್ಯೂನತೆಯೊಂದು ಇರುತ್ತದೆ. ಇದೇ ಆತನ ಆಸೆಗೆ ತಣ್ಣೀರೆರಚುತ್ತದೆ. ಯಕ್ಷಗಾನದ ಮೂಲಕ ಆತ ಏನು ಮಾಡುತ್ತಾನೆ ಎನ್ನುವುದೇ ಇದರ ಹೂರಣ.

ಅನನ್ಯಾ ಶೆಟ್ಟಿ ಇದರ ನಾಯಕಿ. ಸವಾಲಿನ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಕೃಷ್ಣಮೂರ್ತಿ ಕವತ್ತಾರ್, ಎಂ.ಕೆ. ಮಠ, ಬೆನಕ ನಂಜಪ್ಪ, ನವೀನ್‌ ಕುಮಾರ್, ಲಕ್ಷ್ಮಿ ಅರ್ಪಣ್, ಪವಿತ್ರಾ ಜಯರಾಮ್, ಮುಖೇಶ್ ತಾರಾಗಣದಲ್ಲಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಇದಕ್ಕೆ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT